ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾಗಿ, ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದ ಹಿರಿಯ ಕವಿ ಸಿದ್ದಲಿಂಗಯ್ಯ (67) ಇಂದು ನಿಧನರಾಗಿದ್ದಾರೆ. ಅವರ ಸಾವಿಗೆ ಕೂಡ ಕೋವಿಡ್ 19 ಕಾರಣವಾಗಿರುವುದು ದುರಂತದ ಸಂಗತಿಯಾಗಿದೆ.
ತಿಂಗಳ ಹಿಂದೆ ಕೊರೊನಾ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಲಿಂಗಯ್ಯ ಗೆದ್ದು ಬರುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಅದಕ್ಕೆ ಕಾರಣ ಅವರು ಸಾಮಾನ್ಯವಾಗಿ ಎಲ್ಲಿಯೂ ಸೋಲೊಪ್ಪದ ಜಾಯಮಾನದವರು. ದಲಿತರ ಪರವಾಗಿ ನಿಂತು ಹೋರಾಡಿ ಗೆದ್ದು ‘ದಲಿತಕವಿ’ ಎಂದೇ ಬಿರುದಾಂಕಿತರಾದವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಅವರು ಕಾವ್ಯ, ನಾಟಕ, ವಿಮರ್ಶೆ, ಸಂಶೋಧನಾ ಪ್ರಕಾರಗಳಲ್ಲಿ ಅಪಾರ ಸೇವೆ ಸಲ್ಲಿಸಿದವರು. ‘ಹೊಲೆ ಮಾದಿಗರ ಹಾಡು’, ‘ನನ್ನ ಜನಗಳು ಮತ್ತು ಇತರ ಕವಿತೆಗಳು’ ಅವರ ಜನಪ್ರಿಯ ಕವನ ಸಂಕಲನಗಳು. ‘ಊರು ಕೇರಿ’ ಭಾಗ ಒಂದು ಮತ್ತು ಎರಡರ ಮೂಲಕ ತಮ್ಮ ಆತ್ಮಕಥೆ ಬರೆದುಕೊಂಡಿದ್ದರು. ಅವರಿಗೆ ನಾಡೋಜ, ಪಂಪ ಸೇರಿದಂತೆ ಹಲವಾರು ಉನ್ನತ ಪ್ರಶಸ್ತಿಗಳು ಲಭಿಸಿವೆ.
ಜನ ಮೆಚ್ಚಿದ ಚಿತ್ರಗೀತೆಗಳು
ಸಿದ್ದಲಿಂಗಯ್ಯನವರ ರಚನೆಯ ಎರಡು ಹಾಡುಗಳು ಕನ್ನಡ ಸಿನಿಮಾಪ್ರಿಯರು ಬಹುವಾಗಿ ಮೆಚ್ಚಿದ್ದಾರೆ. ಅವುಗಳಲ್ಲಿ ಒಂದು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಗೀತೆ. ‘ಗೆಳತೀ ಓ ಗೆಳತೀ..’ ಎನ್ನುವ ಆ ಗೀತೆ ಇಂದಿಗೂ ಭಾವುಕ ಪ್ರೇಮಿಗಳ ಮೆಚ್ಚಿನ ಗೀತೆಯೆಂದೇ ಹೇಳಬಹುದು. ಅದೇ ರೀತಿ ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರದಲ್ಲಿ ಹಂಸಲೇಖ ಬಳಸಿಕೊಂಡಿರುವ ‘ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ’ ಮತ್ತೊಂದು ಆಕರ್ಷಕ ರಚನೆಯಾಗಿತ್ತು. ಇವೆರಡೂ ಗೀತೆಗಳು ಎಸ್ ಪಿ ಬಾಲಸುಬ್ರಹ್ಮಣ್ಯಂ ಕಂಠದಲ್ಲಿ ಮೂಡಿಬಂದಿದ್ದವು. ವಿಪರ್ಯಾಸ ಏನೆಂದರೆ ಕೊರೊನಾದ ಮೊದಲ ಅಲೆಯಲ್ಲಿ ಬಾಲಸುಬ್ರಹ್ಮಣ್ಯಂ ನಮ್ಮನ್ನು ತೊರೆದರೆ ಎರಡನೇ ಅಲೆ ಸಿದ್ದಲಿಂಗಯ್ಯ ಅವರನ್ನು ಕೂಡ ನಮ್ಮಿಂದ ದೂರವಾಗಿಸಿದೆ.