ನಟ ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿದೆ. ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಏಟು ಮಾಡಿಕೊಂಡಿರುವ ವಿಜಯ್ ಬನ್ನೇರುಘಟ್ಟ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ರಾತ್ರಿ ಸ್ನೇಹಿತನ ಜೊತೆಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹಿಂಬದಿ ಸವಾರನಾಗಿ ಕುಳಿತಿದ್ದ ವಿಜಯ್ ಯವರು ಬೈಕ್ ನಿಂದ ಹಾರಿ ಬಿದ್ದು ತೊಡೆ ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಪಘಾತವಾದ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರೂ ಕೂಡ ಮೆದುಳಿಗೆ ಏಟಾಗಿರುವ ಕಾರಣ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈಗಾಗಲೇ ಮೆದುಳಿನ ಆಪರೇಷನ್ ಮುಗಿಸಲಾಗಿದ್ದು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿರುವ ವಿಜಯ್ ಅವರ ಪರಿಸ್ಥಿತಿ ಮುಂದಿನ 48 ಗಂಟೆಗಳ ಕಾಲ ಗಂಭೀರವಾಗಿರುವುದಾಗಿ ನ್ಯೂರೋ ಸರ್ಜನ್ ಅರುಣ್ ನಾಯಕ ತಿಳಿಸಿದ್ದಾರೆ.
‘ಸಂಚಾರಿ’ ನಾಟಕ ತಂಡದಲ್ಲಿ ನಟನಾಗಿ ಗುರುತಿಸಿಕೊಂಡ ವಿಜಯ್ ಚಿತ್ರರಂಗದಲ್ಲಿ ಕೂಡ ‘ಸಂಚಾರಿ ವಿಜಯ್’ ಆಗಿಯೇ ಗುರುತಿಸಿಕೊಂಡಿದ್ದಾರೆ. ಪ್ರಧಾನ ಪಾತ್ರದಲ್ಲಿ ನಟಿಸಿದ ಪ್ರಥಮ ಚಿತ್ರ ‘ನಾನು ಅವಳಲ್ಲ ಅವನು’ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದು ದೇಶದ ಗಮನ ಸೆಳೆದ ಪ್ರತಿಭಾವಂತ. ಅದರ ಯಾವುದೇ ಹಮ್ಮುಬಿಮ್ಮುಗಳಿರದೆ ಜನಸೇವೆಯ ಮೂಲಕ ಮನ್ನಣೆ ಪಡೆದವರು. ಕೊಡಗು ದುರಂತದ ವೇಳೆ ಅಲ್ಲಿಗೂ ತೆರಳಿ ಸೇವಾ ನಿರತರಾಗಿದ್ದ ವಿಜಯ್ ಕೊರೊನಾದ ಎರಡು ಅಲೆಗಳ ಸಂದರ್ಭದಲ್ಲಿ ಕೂಡ ಬೆಂಗಳೂರಲ್ಲಿ ಸಕ್ರಿಯ ಸಮಾಜ ಸೇವೆ ಮಾಡಿದ್ದಾರೆ. ಇತ್ತೀಚೆಗೆ ಕೂಡ ಕವಿರಾಜ್ ನೇತೃತ್ವದ ‘ಉಸಿರು’ ತಂಡದಲ್ಲಿದ್ದುಕೊಂಡು ರೋಗಿಗಳ ಉಸಿರಾಗಿದ್ದ ವಿಜಯ್, ಸದ್ಯಕ್ಕೆ ತಮ್ಮ ಉಸಿರಾಟಕ್ಕೆ ವೆಂಟಿಲೇಟರ್ ಆಶ್ರಯಿಸಬೇಕಾಗಿರುವುದು ದುರಂತ. ಯುವನಟ ಶೀಘ್ರ ಗುಣಮುಖಗೊಳ್ಳಲು ಮನಸಾರೆ ಪ್ರಾರ್ಥಿಸುವುದಷ್ಟೇ ಸದ್ಯ ನಮ್ಮ ಕೆಲಸ.