ಕೆಸಿಎನ್ ಚಂದ್ರು ನಿಧನ

ಭಾರತೀಯ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲೋರ್ವರಾದ ಕನ್ನಡಿಗ ಕೆ.ಸಿ.ಎನ್ ಚಂದ್ರಶೇಖರ್ ಅವರು ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ನಿರ್ಮಾಪಕ ಕೆ ಸಿ ಎನ್ ಚಂದ್ರು ಅವರ ನಿಧನಕ್ಕೆ ವಯೋಸಹಜ ಕಾಯಿಲೆಯೇ ಕಾರಣ ಎಂದು ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಭಾನುವಾರ ತಡರಾತ್ರಿ ನಿಧನರಾಗಿದ್ದು, ಮಧ್ಯರಾತ್ರಿ 12.30ರ ವೇಳೆಗೆ ಸುದ್ದಿ ಹೊರಗೆ ಬಂದಿದೆ.

ಕಲ್ಪನಾ ಅವರ ನಟನೆಯ ‘ಶರಪಂಜರ’ ಚಿತ್ರಕ್ಕೆ ಸಹನಿರ್ಮಾಪಕರಾಗಿ ವೃತ್ತಿ ಬದುಕು ಆರಂಭಿಸಿದವರು ಕೆಸಿಎನ್ ಚಂದ್ರಶೇಖರ್. ಅದೊಂದು ಬಹುದೊಡ್ಡ. ಯಶಸ್ವಿ ಚಿತ್ರವಾಗಿತ್ತು. ಅದರ ಬಳಿಕ ನಿರ್ಮಾಪಕರಾಗಿ ‘ಹುಲಿಯ ಹಾಲಿನ ಮೇವು’, ‘ಭಕ್ತ ಜ್ಞಾನದೇವ’, ‘ಧರ್ಮಯುದ್ಧ’, ‘ತಾಯಿ’ ಮೊದಲಾದ ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯರಾದರು. ಕನ್ನಡ ಮಾತ್ರವಲ್ಲದೆ ಕೆಸಿಎನ್ ಬ್ಯಾನರ್ ಮೂಲಕ ಬಂಗಾಳಿ, ಹಿಂದಿ, ತಮಿಳು, ತೆಲುಗು ಭಾಷೆಯ ಸಿನಿಮಾಗಳನ್ನು ಕೂಡ ನಿರ್ಮಿಸಿದ ಖ್ಯಾತಿ ಇವರದ್ದಾಗಿದೆ. ಚಂದ್ರು ಅವರು ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದಾಗ ಹಲವಾರು ಹೊಸ ಪ್ರಯೋಗಗಳನ್ನು ಕೈಗೊಂಡು ಗುರುತಿಸಿಕೊಂಡಿದ್ದರು. ಇವರು ಆಯೋಜಿಸಿದ್ದ ‘ಕನ್ನಡ ಚಲನಚಿತ್ರ ಸಾಹಿತ್ಯ ಕಮ್ಮಟ’ದಲ್ಲಿ ದೇಶದ ಹೆಸರಾಂತ ಚಿತ್ರ ನಿರ್ದೇಶಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಕನ್ನಡ ಚಲನಚಿತ್ರ ಇತಿಹಾಸವನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಕೆಲಸದ ಆರಂಭವೂ ಇವರ ಅಧ್ಯಕ್ಷತೆಯಲ್ಲೇ ಆರಂಭವಾಗಿತ್ತು. ತಮ್ಮ ವೃತ್ತಿ ಬದುಕಿನ ಯಶಸ್ಸಿನಲ್ಲಿ ಡಾ.ರಾಜ್ ಕುಮಾರ್ ದಂಪತಿಯ ಸಹಕಾರ ಇದೆ ಎನ್ನುವುದನ್ನು ಅವರು ಸದಾ ಸ್ಮರಿಸುತ್ತಿದ್ದರು. ಕೆಸಿಎನ್ ಚಂದ್ರಶೇಖರ್ ಅವರ ಕುಟುಂಬ ಚಿತ್ರಮಂದಿರಗಳನ್ನು ಕೂಡ ಹೊಂದಿದ್ದು, ಬೆಂಗಳೂರಲ್ಲಿ ನವರಂಗ್, ಊರ್ವಶಿ ಸೇರಿದಂತೆ ದೊಡ್ಡ ಬಳ್ಳಾಪುರದಲ್ಲಿ ರಾಜ್ ಕಮಲ್ ಚಿತ್ರಮಂದಿರಗಳ‌ ಮಾಲೀಕತ್ವ ಪಡೆದಿದ್ದರು.

ಕೆಸಿಎನ್ ಚಂದ್ರಶೇಖರ್ ಅವರ ತಂದೆ ಕೆಸಿಎನ್ ಗೌಡರು ‘ಶರಪಂಜರ’, ‘ಬಬ್ರುವಾಹನ’, ‘ದಾರಿ ತಪ್ಪಿದ ಮಗ’ ಮೊದಲಾದ ಕ್ಲಾಸಿಕ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟವರು. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ಡಿಸ್ಟ್ರಿಬ್ಯೂಟರ್ ಮತ್ತು ಎಕ್ಸಿಬಿಟರ್ ಆಗಿಯೂ ಗುರುತಿಸಿಕೊಂಡ ಗೌಡರು 300ಕ್ಕೂ ಅಧಿಕ ಸಿನಿಮಾಗಳ ವಿತರಕಾಗಿ ಜನಪ್ರಿಯರಾಗಿದ್ದರು. 2005ರಲ್ಲಿ ಅವರಿಗೆ ‘ದಾದ ಸಾಹೇಬ್ ಫಾಲ್ಕೆ ಅಕಾಡೆಮಿ’ಯ ಅವಾರ್ಡ್ ಕೂಡ ಲಭಿಸಿತ್ತು.

ಚಂದ್ರಶೇಖರ್ ಅವರ ಸಹೋದರ ಕೆಸಿ‌ಎನ್ ಮೋಹನ್ ಕೂಡ ನಿರ್ಮಾಪಕರಾಗಿದ್ದು ‘ಜ್ಯೂಲಿ‌’ ಮತ್ತು ‘ಅರ್ಜುನ್ ಅಭಿಮನ್ಯು’ ಸಿನಿಮಾಗಳ ನಿರ್ಮಾಪಕರಾಗಿ ಹೆಸರಾಗಿದ್ದರು. ಚಂದ್ರಶೇಖರ್ ಅವರ ಮಕ್ಕಳಾದ ಸ್ಫೂರ್ತಿ, ಕಾವ್ಯಾ ಮತ್ತು ಶ್ರೇಯಸ್ ಮೊದಲಾದವರು ಕೆಸಿಎನ್ ಸಂಸ್ಥೆಯನ್ನು ಮೂರನೇ ಪೀಳಿಗೆಗೆ ತಲುಪಿಸುವ ಪಾತ್ರ ಮಾಡಿದ್ದು, ಕಿಚ್ಚ ಸುದೀಪ್ ನಟನೆಯ ‘ನಲ್ಲ’ ಸಿನಿಮಾ ನಿರ್ಮಿಸಿದ್ದರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೂರು ಬಾರಿ ಅಧ್ಯಕ್ಷರಾಗಿದ್ದ ಕೆಸಿಎನ್ ಚಂದ್ರು ಅವರು ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿಗೂ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಮೂರು ಬಾರಿ ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. 500 ಚಿತ್ರಗಳಿಗೆ ವಿತರಕರಾಗಿ, ಸೆನ್ಸಾರ್ ಮಂಡಳಿಯ ಸದಸ್ಯರಾಗಿ, ಭಾರತೀಯ ಪನೋರಮಾ ವಿಭಾಗ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿ ಸಲಹಾ ಸಮಿತಿಯ ಸದಸ್ಯರಾಗಿದ್ದರು. ಅವರ ನಿಧನದೊಂದಿಗೆ ಭಾರತೀಯ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

Recommended For You

Leave a Reply

error: Content is protected !!
%d bloggers like this: