ಇಂಜಿನಿಯರಿಂಗ್ ಓದಿ,ಐಟಿ ಹುದ್ದೆಯಲ್ಲಿ ಉದ್ಯೋಗ ಮಾಡುತ್ತಿದ್ದ ಶರತ್ ಅವರಿಗೆ ಸಿನಿಮಾ ಲೋಕದ ಮೇಲೆ ಆಕರ್ಷಣೆ ಮೂಡಿತು. ಆದರೆ ಸಿನಿಮಾ ಕ್ಷೇತ್ರಕ್ಕೆ ಹೇಗೆ ಹೆಜ್ಜೆ ಇಡುವುದು ಎಂದು ತಿಳಿಯದೆ ಅವಕಾಶಕ್ಕಾಗಿ ಕಾದು ಕುಳಿತರು. ಆದರೆ ವಿಶೇಷವೇನೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೊಟೋ ನೋಡಿ ಸ್ಟಾರ್ ಸುವರ್ಣ ವಾಹಿನಿಯವರೇ ಶರತ್ ಅವರನ್ನು ನೇರವಾಗಿ ಸಂಪರ್ಕಿಸಿದರು. ಹಾಗೆ ಅದೃಷ್ಟ ಖುಲಾಯಿಸಿಯೇ ಬಿಟ್ಟಿತು. ಮುಂದೆ ಶರತ್ ಅವರ ಮೊಟ್ಟ ಮೊದಲ ಬಾರಿಗೆ ದಿಲೀಪ್ ರಾಜ್ ಪ್ರೊಡಕ್ಷನಲ್ಲಿ ‘ಜಸ್ಟ್ ಮಾತ್ ಮಾತಲ್ಲಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು,ಮುಂದಿನ ದಿನಗಳಲ್ಲಿ ‘ಪುಟ್ಮಲ್ಲಿ ‘ಧಾರವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ‘ಪಾರೂ’ ಧಾರವಾಹಿಯಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಎಲ್ಲರ ಮನೆಯ ಮಗನೂ ಆಗಿದ್ದಾರೆ.
ಸಂದರ್ಶಕಿ: ಸೌಮಿನಿ ಬಡೆಕ್ಕಿಲ
ಮೊದಲ ಬಾರಿಗೆ ಕ್ಯಾಮೆರಾ ಫೇಸ್ ಮಾಡಿದ ಅನುಭವ ಹೇಗಿತ್ತು?
ಚಿಕ್ಕದಿಂದಲೂ ಸಿನಿಮಾ ನೋಡುತ್ತಿದ್ದೆ ಬಿಟ್ಟರೆ ನಟನೆ ಬಗ್ಗೆ ಯಾವುದೇ ಐಡಿಯಾ ಇರಲಿಲಿಲ್ಲ ,ನಟನಾ ಲೋಕಕ್ಕೆ ಬರಬೇಕು ಎಂದು ಆಸೆ ಇತ್ತು ಹೇಗೆ ಬರಬೇಕೆಂದು ತಿಳಿದಿರಲಿಲ್ಲ, ‘ಜಸ್ಟ್ ಮಾತ್ ಮಾತಲ್ಲಿ’ ಧಾರಾವಾಹಿ ಮಾಡಬೇಕಾದರೆ ಮೊದಲು ಹದಿನೈದು ದಿನ ವರ್ಕ್ ಶಾಪ್ ನಡೆಸಿದ್ದರು. ಹೇಗೇ ಕ್ಯಾಮೆರಾ ಫೇಸ್ ಮಾಡಬೇಕೆಂದು, ಆಗ ಕಲಿತುಕೊಂಡೆ. ಆದರೆ ದಿನ ನಿತ್ಯವೂ ಕ್ಯಾಮೆರಾ ಫೇಸ್ ಮಾಡುವಾಗ ಹೊಸದಾಗಿ ಕಾಣಿಸುತ್ತದೆ.
ಸಿನಿಮಾ ಅವಕಾಶಗಳು ಬಂದಿದೆಯಾ ?
ಅವಕಾಶಗಳೇನೋ ಬಂದಿವೆ. ಆದರೆ ನನಗೆ ಯಾವ ಕಥೆಯೂ ಇಷ್ಟವಾಗಿಲ್ಲ. ಒಂದೇ ತರಹದ ಪಾತ್ರ ಮಾಡುವುದಕ್ಕಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಮಹದಾಸೆ. ಅಂತಹ ಪಾತ್ರಕ್ಕಾಗಿ ನಾನು ಕಾಯುತ್ತಿರುವೆ. ನನ್ನ ಆಸೆಗೆ ತಕ್ಕಂತೆ ಪಾತ್ರ ಸಿಕ್ಕಿದರೆ ಖಂಡಿತ ಅಭಿನಯಿಸುವೆ. ಹೆಚ್ಚಾಗಿ ಹೇಳುವುದಾದರೆ ನನಗೆ ಕಟೆಂಟ್ ಆಧಾರಿತ ಸಿನಿಮಾ ಮಾಡಬೇಕು ಎಂದು ಇದೆ.
ಹೊರಗೆ ಜನರು ನಿಮ್ಮನ್ನು ಹೇಗೆ ಗುರುತಿಸುತ್ತಾರೆ?
ಜನರು ಎಲ್ಲಿ ಹೋದರು ‘ಪಾರು ಆದಿತ್ಯ’ ಎಂದೇ ಗುರುತಿಸುತ್ತಾರೆ. ಶರತ್ ಅಂತ ಜನರು ಕರಿಯೋದು ತುಂಬಾ ಅಪರೂಪ. ಪಾತ್ರವನ್ನು ಜನರು ಅಷ್ಟು ಇಷ್ಟ ಪಟ್ಟಿದ್ದಾರೆ ಎಂದು ಆಗ ಖುಷಿ ಆಗುತ್ತದೆ.
ಮರೆಯಲಾರದ ನೆನಪು ?
ಮರೆಯಲಾರದ ನೆನಪು ಅಂತ ಹೇಳುವುದಾದರೆ ಸೆಟ್ ನಲ್ಲಿ ದಿನಾ ಏನಾದರೂ ಸ್ವಾರಸ್ಯ ನಡೆಯುತ್ತಾ ಇರುತ್ತದೆ! ಆದರೆ ಮೊನ್ನೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಹೋಗಿದ್ದೆ. ಅಲ್ಲಿ ಚೈತ್ರಾಲಿ ಎನ್ನುವವಳು ನನ್ನ ಅಭಿಮಾನಿ! ಅವಳಿಗೆ ಮಾತು ಬರುವುದಿಲ್ಲ .ಅವಳನ್ನು ಸರ್ಪ್ರೈಸ್ ಮಾಡಲು ಹೋಗಿದ್ದೆ. ಅವಳೊಂದಿಗೆ ನಾಲ್ಕು ಹೆಜ್ಜೆನೂ ಹಾಕಿ ಬಂದೆ. ರಿಯಲ್ ಆಗಿ ಸರ್ಪೈಸ್ ಮಾಡಿ ಬರೋದೂ ,ಅವರ ಎಕ್ಸ್ಪ್ರೆಶನ್ ನೋಡುವುದು ಒಂದು ದೊಡ್ಡ ಖುಷಿ! ಆ ಅವಕಾಶ ಮಾಡಿಕೊಟ್ಟ ನಮ್ಮ ಜೀ ವಾಹಿನಿಗೆ ಧನ್ಯವಾದಗಳು ಹೇಳಲೇಬೇಕು .ಇದು ಬೆಸ್ಟ್ ಮೂಮೆಂಟ್ ಅಂತ ಹೇಳಬಹುದು.
ವೀಕ್ಷಕರಿಗೆ ಏನು ಸಂದೇಶ ಹೇಳಲು ಬಯಸುತ್ತೀರಾ ?
ಜನರಿಗೆ ಎಲ್ಲರಿಗೂ ತಿಳಿದಿದೆ. ಆದರೆ ರೂಲ್ಸ್ ಫಾಲೋ ಮಾಡಲ್ಲ. ಆದರೂ ಕೊರೋನಾ ಮಹಾಮಾರಿಯಿಂದ ತುಂಬಾ ಜನರಿಗೆ ತೊಂದರೆ ಆಗಿದೆ. ಆದ್ದರಿಂದ ನೀವು ಎಲ್ಲರೂ ನಿಮ್ಮ ಟರ್ಮ್ ಬಂದಾಗ ವ್ಯಾಕ್ಸಿನೇಶನ್ ಹಾಕಿಸಿಕೊಳ್ಳಿ. ಸರ್ಕಾರದ ಏನು ರೂಲ್ಸ್ ಇದೆಯೋ ಅದನ್ನು ಫಾಲೋ ಮಾಡಿ ,ಮಾಸ್ಕ್ ಹಾಕುವುದು ,ಅಂತರ ಕಾಪಾಡಿಕೊಳ್ಳುವುದು ,ಸ್ಯಾನಿಟೈಸರ್ ಕೈಗೆ ಹಾಕಿ ಕೊಳ್ಳುವುದು ಹಾಗೂ ವಾಹನದಲ್ಲಿ ಹೋಗುವಾಗ ಸೀಟ್ ಬೆಲ್ಟ್ ,ಬೈಕ್ನಲ್ಲಿ ಹೋಗುವಾಗ ಎರಡು ಜನರು ಕಡ್ಡಾಯವಾಗಿ ಹೆಲ್ಮೆಟ್ ಹಾಕುವುದು ಮರೆಯಬೇಡಿ.
ನಿಮಗಾಗಿ ನಿಮ್ಮ ಮನೆಯಲ್ಲಿ ಕಾಯುತಿರುತ್ತಾರೆ ಎಂದು ಮರೆಯಬೇಡಿ.
‘ಪಾರು’ ಧಾರಾವಾಹಿಯಲ್ಲಿ ಚಾಲೆಂಜಿಂಗ್ ಅನ್ಸೋದು ಏನು?
ಹೌದು ಜನರು ನನ್ನಲ್ಲಿ ಕೇಳುತ್ತಾರೆ ,ಒಂದೇ ಧಾರವಾಹಿಯಲ್ಲಿ ಒಂದೇ ರೀತಿ ಪಾತ್ರ ಮಾಡಿ ನಿಮಗೆ ಬೋರ್ ಆಗಲ್ವಾ!! ಆದರೆ ನನಗೆ ಈ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಲು ಅವಕಾಶ ಸಿಕ್ಕಿದೆ. ಆದಕಾರಣ ದಿನನಿತ್ಯವೂ ಚಾಲೆಂಜಿಂಗ್ ಅನಿಸುತ್ತಿದೆ
ನಿಮ್ಮ ಫೇವರಿಟ್ ನಟ /ನಟಿ ?
ತುಂಬಾ ಜನ ಇದ್ದಾರೆ. ಪ್ರತಿಯೊಬ್ಬರಲ್ಲೂ ನೋಡಿ ಕಲಿಯೋದು ಸಾಕಷ್ಟು ಇದೆ. ನಾನು ಚಿಕ್ಕಂದಿನಿಂದಲೂ ಸುದೀಪ್ ,ಅಪ್ಪು ಸರ್ ,ವಿಷ್ಣುವರ್ಧನ್ ,ಅಣ್ಣಾವ್ರು ಎಲ್ಲರನ್ನೂ ನೋಡಿ ಬೆಳೆದವನು ಹಾಗಾಗಿ ಎಲ್ಲರೂ ನನಗೆ ಸ್ಫೂರ್ತಿ.
ಫಿಟ್ನೆಸ್ ಹೇಗೆ ಮೇನ್ಟೈನ್ ಮಾಡುತ್ತೀರಿ?
ಎರಡು ವರ್ಷ ಆಯಿತು; ಫಿಟ್ನೆಸ್ ಫ್ರೀಕ್ ಆಗಿದ್ದೇನೆ. ಮೊದಲು ಅಷ್ಟು ಮಾಡಿದ್ದು ಸರಿಯಾಗುತ್ತಿರಲಿಲ್ಲ.ಈಗ ಸರಿಯಾದ ಮಾರ್ಗದರ್ಶನದೊಂದಿಗೆ ಫಿಟ್ ಆಗಿದೀನಿ ,ನಾನು ಫಿಟ್ ಆಗಿರಲು ಕಾರಣ ಶ್ರೀನಿವಾಸ ಗೌಡ,ಇವರು ನನಗೆ ಫಿಟ್ನೆಸ್ ಟ್ರೇನರ್ ಆಗಿದ್ದಾರೆ. ಇವರು ಮೊದಲು ರಕ್ಷಿತ್ ಶೆಟ್ಟಿಯವರಿಗೂ ಫಿಟ್ನೆಸ್ ಟ್ರೇನರ್ ಆಗಿದ್ದಾರೆ. ಈಗ ನಾನು ಫಿಟ್ ಆಂಡ್ ಫೈನ್ ಆಗಿರಲು ಇವರೇ ಕಾರಣ. ಈಗ ಒಂದು ದಿನ ವರ್ಕೌಟ್ ಬಿಟ್ಟರು ಏನೋ ಕಳೆದುಕೊಂಡ ಅನುಭವ ಆಗುತ್ತದೆ. ಆರೋಗ್ಯ ಮುಖ್ಯ.
ಲೆಜೆಂಡ್ಸ್ ಜೊತೆ ಕೆಲಸ ಮಾಡುವ ಅನುಭವ?
ಇದು ನನ್ನ ಭಾಗ್ಯವೇ ಸರಿ. ವಿನಯಮ್ಮ ಅಂದ್ರೆ ಅಖಿಲಾಂಡೇಶ್ವರಿ ,ಎಸ್ ನಾರಾಯಣ್ ಸರ್ (ವೀರಯ್ಯ) ಅವರ ಜೊತೆ ಕೆಲಸ ಮಾಡಲು ಸಿಕ್ಕಿದ್ದು ನನ್ನ ಭಾಗ್ಯವೇ ಸರಿ ,ಅವರು ಆಕ್ಟಿಂಗ್ ಮಾಡುವುದು ನೋಡುವುದೇ ಒಂದು ಚಂದ. ಮೊದಲ ಬಾರಿ ಚಾನಲ್ ಅವರು ಆದಿತ್ಯನ ಅಮ್ಮನಾಗಿ ,ವಿನಯಮ್ಮ ಮಾಡುತಿದ್ದಾರೆ ಎಂದಾಗ ಗಾಬರಿಗೊಂಡೆ ಆದರೆ ಅವರ ಹೆಸರಿನಲ್ಲಿಯೇ ಇದೆ ವಿನಯವಂತಿಕೆ. ತಪ್ಪಾದಾಗ ತಿದ್ದುತ್ತಿದ್ದರು. ಸಲಹೆಗಳನ್ನು ಕೊಡುತ್ತಿದ್ದರು. ಅವರೊಂದಿಗೆ ಕೆಲಸ ಮಾಡುವುದು ಸಾಕಷ್ಟು ಖುಷಿ ಇದೆ ಹಾಗೆ ಕಲಿಯಲು ಇದೆ. ಎಸ್ ನಾರಾಯಣ್ ಸರ್ ಅವರು ಕೂಡ ಮೇರು ನಟ, ಹಾಗೆ ವಿಷ್ಣುವರ್ಧನ್ ಜೊತೆಗೂ ಕೆಲಸ ಮಾಡಿದ್ದರು. ಸೆಟ್ನಲ್ಲಿ ನಾವು ಅವರ ಅನುಭವಗಳನ್ನು ಕೇಳುತಿದ್ದೆವು ಇದೆಲ್ಲಾ ತುಂಬಾ ಖುಷಿ ನೀಡಿದೆ ಹಾಗೆ ಒಂದು ಡೈಲಾಗ್ ಶೀಟ್ ಕೊಟ್ಟರೆ ತಕ್ಷಣ ಆ ಪಾತ್ರಕ್ಕೆ ರೆಡಿ ಆಗುತ್ತಿದ್ದರು. ನಾವು ಒಂದು ಶೀಟ್ ಓದಿ ಮುಗಿಸಿದರೆ ಅವರು ಹತ್ತು ಶೀಟ್ ಓದಿ ಪಾತ್ರಕ್ಕೆ ರೆಡಿ ಆಗುತಿದ್ದರು. ಇವರಿಂದ ಕಲಿಯಲು ಸಾಕಷ್ಟು ಇವೆ .
ನಿಮ್ಮ ಹವ್ಯಾಸಗಳು ಏನು ?
ನಾನು ಫ್ರಿಲಾನ್ಸ್ ಗ್ರಾಫಿಕ್ಸ್ ಡಿಸೈನರ್. ಆಗಾಗ ಸ್ವಲ್ಪ ಕೆಲಸ ಮಾಡುತ್ತೇನೆ .ಹಾಗೆ ಪುಸ್ತಕ ಓದುವುದು, ಸಿನಿಮಾ ನೋಡುವುದು ಕ್ರಿಕೆಟ್ ಆಡುವ ಹುಚ್ಚು ಇದೆ. ಈಗ ಟಿಸಿಎಲ್ ಗೆ ಕಾಯುತ್ತಾ ಇದ್ದೇನೆ.
‘ಪಾರು’ ಧಾರಾವಾಹಿ ಬಗ್ಗೆ ಹೇಳಿ ?
ಮೊದಲ ದಿನ ಹೇಗೇ ನಟನೆ ಮಾಡುವುದು ಎಂದು ತಿಳಿದಿರಲಿಲ್ಲ ,ಈಗಲೂ ಅಷ್ಟೇ ದಿನಾ ನಿತ್ಯ ಶ್ರದ್ಧೆ ಭಕ್ತಿಯಿಂದ ಕಲಿಯುತ್ತಿದ್ದೇನೆ. ಇದರಲ್ಲಿ ಎಲ್ಲಾ ರೀತಿಯ ಪಾತ್ರ ಮಾಡಲು ಅವಕಾಶ ಸಿಕ್ಕಿದೆ. ಮಗನ ಪಾತ್ರ ,ಹಳ್ಳಿ ಹುಡುಗನಾಗಿ ,ಬಾಸ್ ಆಗಿ ಇತ್ಯಾದಿ. ಆಗಲೇ ಹೇಳಿದ ಹಾಗೆ ನಾನು ಯಾವುದೇ ಆಕ್ಟಿಂಗ್ ಕ್ಲಾಸ್ ಹೋಗಿರಲಿಲ್ಲ. ಒಳ್ಳೆಯ ಅನುಭವ ಜೊತೆ ಅಷ್ಟು ದೊಡ್ಡ ನಟರ ಜೊತೆ ಅನುಭವಿಸಲು ಅವಕಾಶ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಚಿಕ್ಕದಿಂದಲೂ ಅವರನ್ನು ನೋಡಿ ಬೆಳೆದವನು. ಈಗ ಅವರೊಂದಿಗೆ ನಟನೆ ಮಾಡುತ್ತಿರುವುದು ಖುಷಿಯ ಸಂಗತಿ. ‘ಪಾರು’ ಧಾರಾವಾಹಿ ನನ್ನ ನಟನೆಯನ್ನು ಹೊರಹಾಕಲು ಸಹಾಯ ಮಾಡಿದೆ ಇದೆಲ್ಲಾ ಟೀಂ ವರ್ಕ್ ನಿಂದ ಸಾಧ್ಯವಾಯಿತು. ಇದಕ್ಕೆ ಕಾರಣಕರ್ತರಾದ ಜೀ ಕನ್ನಡ ವಾಹಿನಿಯವರು ,ಡೈರೆಕ್ಟರ್ ,ಪ್ರೊಡ್ಯೂಸರ್ ಅವರಿಗೆ ಥ್ಯಾಂಕ್ಸ್ ಹೇಳಬೇಕು. ಇದರಿಂದ ಸ್ವಲ್ಪ ಟ್ರೈನ್ ಆದೆ. ತುಂಬಾ ಲಕ್ಕಿ ಎಂದೆನಿಸುತ್ತದೆ. ಎಲ್ಲರೂ ತುಂಬಾ ಡೆಡಿಕೇಟ್ ಯಿಂದ ಕೆಲಸ ಮಾಡುತ್ತಾರೆ. ಯಾವುದೇ ದಿನ ಟಿಆರ್ ಪಿ ಬಗ್ಗೆ ಯೋಚನೆ ಮಾಡಿಲ್ಲ,ಕೆಲಸ ಒಂದೇ ಅಂತ ಮಾಡುತ್ತಿದ್ದೇವೆ ಸದ್ಯ ನಾವು ಹೈದರಾಬಾದ್ ಹೋಗಿ ಶೂಟ್ ಮಾಡಿ ಬಂದ್ವಿ ,ಅಲ್ಲಿಗೆ ಹೋಗಲು ಕೂಡ ಅಷ್ಟೇ ಕೇರ್ ಎಲ್ಲಾ ಮಾಡಿದ್ದರು ಯಾವುದೇ ರೀತಿಯ ತೊಂದರೆ ಆಗಿಲ್ಲ.ನಮ್ಮ ಮನೆಯಲ್ಲಿ ಕೂಡ ಅಷ್ಟೇ ಖುಷಿಯಲ್ಲಿ ಇದ್ದಾರೆ .