ಕಪೋಲ ಕಲ್ಪಿತ ಎನ್ನುವ ಪದವನ್ನು ನಾವೆಲ್ಲರೂ ಕೇಳಿದ್ದೇವೆ. ತಮ್ಮ ಚಿತ್ರದ ಹೆಸರಿಗೂ ಅದೇ ಅರ್ಥ ಎನ್ನುತ್ತಾ ‘ಕಪೋಕಲ್ಪಿತಂ’ ಎನ್ನುವ ಸಿನಿಮಾದೊಂದಿಗೆ ಬಂದಿದ್ದಾರೆ ನವನಿರ್ದೇಶಕಿ ಸುಮಿತ್ರಾ ಗೌಡ. ಅವರು ಚಿತ್ರದ ನಾಯಕಿಯೂ ಹೌದು.
ಇದು ಹಾರರ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ವಿಚಾರಗಳನ್ನು ಹೊಂದಿರುವ ಚಿತ್ರ. ಸಿನಿಮಾ ಇಷ್ಟರಮಟ್ಟಿಗೆ ಮೂಡಿ ಬರಲು ಪೂರ್ತಿ ಚಿತ್ರತಂಡವೇ ಕಾರಣ ಎನ್ನುತ್ತಾರೆ ಸುಮಿತ್ರಾ ಗೌಡ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ನಿರ್ದೇಶನದ ಜೊತೆಗೆ ಚಿತ್ರದ ನಾಯಕಿಯಾಗಿಯೂ ನಟಿಸಿರುವುದು ವಿಶೇಷ.
ಈ ಹಿಂದೆ ‘ಸ್ಟೂಡೆಂಟ್ಸ್’ ಎನ್ನುವ ಚಿತ್ರದಲ್ಲಿ ಪೋಷಕ ಪಾತ್ರ ಮಾಡಿದಂಥ ಪ್ರೀತಂ ಮಕ್ಕಿಹಾಲಿ ಚಿತ್ರದ ನಾಯಕರಾಗಿದ್ದಾರೆ. ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿ ವೃತ್ತಿಯಲ್ಲಿರುವ ಪ್ರೀತಂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಯಾಕೆಂದರೆ ಮೊದಲ ಚಿತ್ರದಲ್ಲೇ ಎರಡು ಶೇಡ್ ಪಾತ್ರ ದೊರಕಿರುವ ತೃಪ್ತಿ ಅವರಾಗಿದೆ.
ಚಿತ್ರಕ್ಕೆ ಕತೆ, ಸಂಭಾಷಣೆ ಬರೆದು ಸಂಗೀತ ನೀಡಿರುವ ಗಣಿದೇವ್ ಕಾರ್ಕಳ ಇದನ್ನು ಕನ್ನಡದ ವಿಭಿನ್ನ ಚಿತ್ರಗಳ ಸಾಲಿಗೆ ಸೇರಿಸುವ ಪ್ರಯತ್ನ ನಡೆಸಿರುವುದಾಗಿ ಹೇಳಿದರು.
ಕಿರುತೆರೆಯ ‘ಮಜಾಭಾರತ’ ರಿಯಾಲಿಟಿ ಶೋ ಖ್ಯಾತಿಯ ಶಿವರಾಜ್ ಕರ್ಕೇರ ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿಭಾಯಿಸಿರುವುದಾಗಿ ತಿಳಿಸಿದರು. ನಟ ಸಂದೀಪ್ ಮಲಾನಿಯವರು ಕೂಡ ಚಿತ್ರದಲ್ಲಿ ನಟಿಸಿದ್ದು ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ ತಮ್ಮದು ಎಂದರು.
ದಕ್ಷಿಣ ಕನ್ನಡ, ಉಡುಪಿ ಮೊದಲಾದೆಡೆಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದ್ದು ರಮೇಶ್ ಚಿಕ್ಕೇಗೌಡ, ಕವಿತಾ ಕನ್ನಿಕಾ ಪೂಜಾರಿ, ಗಣಿದೇವ್ ಕಾರ್ಕಳ ಚಿತ್ರದ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.