ಧನುಷ್ ಗೌಡರ ಮಾತಿನ ಬಾಣ!

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿನ ವಿಜಯ್ ಎನ್ನುವ ಪಾತ್ರ ಸಾಕಷ್ಟು ಜನಪ್ರಿಯತೆ ಕಂಡುಕೊಂಡಿದೆ. ಧಾರಾವಾಹಿಯ ಮುಖ್ಯಪಾತ್ರವಾದ ವಿಜಯ್ ಆಗಿ ನಟಿಸುತ್ತಿರುವ ಕಲಾವಿದರ ನಿಜವಾದ ಹೆಸರು ಧನುಷ್ ಗೌಡ. ಧನುಷ್ ಹುಟ್ಟಿ ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ. ಮಾಡಿದ್ದು ಡಿಪ್ಲೊಮಾ ಇನ್ ಇಂಜಿನಿಯರಿಂಗ್. ಆದರೆ ಆಸಕ್ತಿ ಮೂಡಿದ್ದು ನಟನಾ ಕ್ಷೇತ್ರದಲ್ಲಿ. ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ಅವರ ದೊಡ್ಡ ಗುರಿ ಆಗಿತ್ತು ಎನ್ನುವ ಧನುಷ್ ಪ್ರಸ್ತುತ ಅದನ್ನು ಸಾಧಿಸಿರುವುದು ಸತ್ಯ.

ಸಂದರ್ಶಕಿ: ಸೌಮಿನಿ ಬಡೆಕ್ಕಿಲ

ಕಲೆಯ ಮೇಲಿನ ಆಸಕ್ತಿ ನಿಮಗೆ ಬಾಲ್ಯದಿಂದಲೇ ಇತ್ತೇ?

ಹೌದು. ನಾನು ಎಂಟನೇ ತರಗತಿಯಲ್ಲಿ ಇರಬೇಕಾದರೆ ನನ್ನ ಮಾವ ಹಾಗೂ ತಮ್ಮ ಬಂದು, “ನೀನು ನಟ ಆಗಬೇಕು ,ನೋಡೋಕೆ ಚೆನ್ನಾಗಿ ಇದ್ದೀಯಾ ,ನಟನಾ ಕ್ಷೇತ್ರಕ್ಕೆ ಹೋಗಿ ಸಾಧನೆ ಮಾಡು” ಎಂದು ಹೇಳಿದ್ದರು. ಅದನ್ನು ಸ್ವಲ್ಪ ಸೀರಿಯಸ್ ಆಗಿ ತೆಗೊಂಡೆ .ಆದರೆ ನಾನು ಬಾಲ್ಯದಲ್ಲಿ ಕಬ್ಬಡ್ಡಿ ಪ್ಲೇಯರ್ ಆಗಿದ್ದೆ .ನಾಟಕ ,ಅಭಿನಯ ಎಂದು ಯಾವತ್ತೂ ಸ್ಟೇಜ್ ಹತ್ತಿರಲಿಲ್ಲ .ಹಾಗೆ ಡಿಪ್ಲೊಮಾ ಇಂಜಿನಿಯರಿಂಗ್ ಮಾಡಿದೆ. ಆಮೇಲೆ ಮನೆಯಲ್ಲಿ ಇಂಜಿನಿಯರ್ ಆಗು ಅಂದ್ರು. ನಾನು ನಟನೆಮಾಡಬೇಕು ಎಂದು ಹೇಳಿದೆ ಅವರು ತುಂಬಾ ಪ್ರೋತ್ಸಾಹ ಮಾಡಿದರು ಆದಕಾರಣ ನಾನು ಈಗ ಇಲ್ಲಿದ್ದೇನೆ.

ನಟನಾಗಲು ವಿಶೇಷ ತರಬೇತಿಯೇನಾದರೂ ಪಡೆದುಕೊಂಡಿದ್ದೀರ?

ನಾಗ್ತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಸ್ವಲ್ಪ ದಿನಗಳ ಕಾಲ ತರಬೇತಿ ತೆಗೊಂಡಿದ್ದೆ. ಅದರ ಜೊತೆಗೆ
ನಾನು ಈಗ ಹೀರೋ ಆಗಿ ನಟನೆ ಮಾಡುತ್ತಿದ್ದೇನೆ ಅಂದರೆ ಅದಕ್ಕೆ ನನ್ನ ಮಾವ ನೀಡಿದ ಪ್ರೋತ್ಸಾಹವೂ ಕಾರಣ. ನಾನು ಬಾಲ್ಯದಿಂದಲೂ ಹಲವರ ಸಿನಿಮಾ ನೋಡಿ ಬೆಳೆದವನು. ಎಲ್ಲರಿಂದಲೂ ಕಲಿಯಲು ಸಾಕಷ್ಟು ಇವೆ. ಆ ಕಲಿಕೆ ಕೂಡ ನನ್ನ ನಟನೆಯನ್ನು ಪ್ರಭಾವಿಸಿರಬಹುದು.

‘ಗೀತಾ’ ಧಾರಾವಾಹಿಯಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ ?

ಗೀತಾ ಧಾರಾವಾಹಿಯಲ್ಲಿ ನನ್ನ ಪಾತ್ರದ ಹೆದರು ವಿಜಯ್. ಒಬ್ಬ ಮಿನಿಸ್ಟರ್ ಮಗನಾಗಿ, ಕಾಲೇಜು ಹುಡುಗನ ಪಾತ್ರದಲ್ಲಿ ಕಾಣಿಸುತ್ತಿದ್ದೇನೆ. ಪಾತ್ರದ ಬಗ್ಗೆ ತುಂಬಾ ಹೇಳೋಕೆ ಪದಗಳಿಲ್ಲ ಅಷ್ಟು ಖುಷಿ ಕೊಟ್ಟಿದೆ. ಎಲ್ಲಾ ರೀತಿಯ ಗೆಟಪ್ ಅಲ್ಲಿ ಕಾಣಿಸಿಕೊಂಡಿದ್ದೇನೆ. ಹೀರೋ ಆಗಿ, ವಿಲನ್ ಆಗಿ ,ಅಮ್ಮನ ಮುದ್ದಿನ ಮಗನಾಗಿ ,ಹುಡುಗಿಯಾಗಿ ,ಪೂಜಾರಿಯಾಗಿ ಎಲ್ಲಾ ರೀತಿಯಲ್ಲೂ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ! ಇಂತಹ ಪಾತ್ರ ಮಾಡಿಲ್ಲ ಅಂತ ಇಲ್ಲ. ವಿಲನ್ ಪಾತ್ರ ಮಾಡೋವಾಗ ಅಂತು ಅಜ್ಜಿಯಂದಿರು ,ಆಂಟಿಯಂದಿರು ಎಲ್ಲರೂ ಕೇಳೋರು ಯಾಕಪ್ಪ ನೀನು ಗೀತಾಗೆ ಇಷ್ಟು ಕಾಟ ಕೊಡ್ತಿದಿಯಾ ಅಂತೆಲ್ಲ..ಹಾಗಾಗಿ ಜನರು ಗುರುತಿಸುತ್ತಾರೆ ಅಂತ ಇನ್ನೂ ಖುಷಿ ಇದೆ.

ನಿಮಗೂ ‘ಗೀತಾ’ ಧಾರಾವಾಹಿಯ ವಿಜಯ್ ಗೂ ಏನಾದರೂ ಹೋಲಿಕೆಗಳಿವೆಯೇ?

ಕೆಲವೊಂದು ಹೋಲಿಕೆಗಳಿವೆ.
ಅವುಗಳಲ್ಲೊಂದು ವಿಜಯ್ ಹಾಗೆ ನನಗೂ ಹಾವು ಕಂಡರೆ ಸಕತ್ ಭಯ! ಯಾಕೆಂದರೆ ನಾನು ಸಣ್ಣವನಿದ್ದಾಗ ಒಂದ್ಸಲ ಹಾವು ಕಚ್ಚಿತ್ತು! ಅಲ್ಲಿಂದ ಹಾವು ಕಂಡರೆ ಹೆದರು ಪುಕ್ಕಲ ನಾನು!

ಇದುವರೆಗಿನ ಶೂಟಿಂಗ್ ವೇಳೆ ನಡೆದಂಥ ಮರೆಯಲಾರದ ಘಟನೆ ಏನು?

ಫಸ್ಟ್ ಡೇ ಸೀನ್ ಯಾವತ್ತೂ ಮರೆಯೋಕೆ ಆಗಲ್ಲ. ಸಿಕ್ಕಾಪಟ್ಟೆ ಭಯ ಜೊತೆಗೆ ಖುಷಿ. ಹೇಗೆ ಆಕ್ಟ್ ಮಾಡಬೇಕು ಏನು ಮಾಡಬೇಕು ಅಂತ ಗೊತ್ತಿರಲಿಲ್ಲ. ತಂಡದವರು ತುಂಬಾ ಸಹಾಯ ಮಾಡಿದ್ರು. ನಾನು ಡಿಪ್ಲೊಮಾ ಆಗಿ ಮೂರು ವರ್ಷ ಮನೆಯಲ್ಲಿ ಕೂತಿದ್ದೆ. ಎಲ್ಲರೂ ಕೇಳೋರು ಯಾಕೆ ಕೆಲ್ಸ ಮಾಡಬಾರದಾ ಅಂತ! ಆಮೇಲೆ ಆಡೀಶನ್ ಮೂಲಕ ಸೆಲೆಕ್ಟ್ ಆಗಿದ್ದೆ. ಈಗ ನಟನೆ ಮಾಡುವ ಅವಕಾಶ ಸಿಕ್ಕಿದೆ ಅಂತ ತುಂಬಾ ಖುಷಿ ಇದೆ. ನಾನು ನಟನೆ ಮಾಡುತ್ತಿರುವುದು ಕನಸೋ ನನಸೋ ಎಂದು ಆಗಿತ್ತು. ಆಮೇಲೆ ಅವಾರ್ಡ್ ಬಂದಿದ್ದು ಯಾವತ್ತಿಗೂ ಮರೆಯಲಾರದ ವಿಚಾರ.

ನಿಮ್ಮ ಫಿಟ್ನೆಸ್ ಫ್ರೀಕ್ ಬಗ್ಗೆ ಹೇಳಿ

ನನಗೆ ಫಿಟ್ಟ್ ಆಗಿ ಇರೋದು ಅಂದ್ರೆ ತುಂಬಾ ಇಷ್ಟ. ಖಂಡಿತವಾಗಿ ಫಿಟ್ನೆಸ್ ಫ್ರೀಕ್ ಅಂತನೇ ಹೇಳಬಹುದು. ಜಿಮ್ ಇದ್ರೆ ವರ್ಕೌಟ್ ಮಾಡ್ತೀನಿ. ಲಾಕ್ಡೌನ್ ನಿಂದ ಶನಿವಾರ, ಆದಿತ್ಯವಾರ ಜಿಮ್ ಇರಲ್ಲ. ಆಗ ಮನೆಯಲ್ಲಿ ಸ್ವಲ್ಪ ವರ್ಕೌಟ್ ಮಾಡ್ತೀನಿ. ಜೊತೆಗೆ ಅದಕ್ಕೆ ಬೇಕಾದ ಡಯಟ್ ಮಾಡ್ತೀನಿ. ಅಂದ್ರೆ ಉಪ್ಪು ಖಾರ ಇಲ್ಲದೇ ಇರೋ ಚಿಕನ್, ನೋ ಶುಗರ್. ಆದ್ರೆ ವರ್ಕೌಟ್ ಮಾಡೋದು ಮಾತ್ರ ಯಾವತ್ತು ತಪ್ಪಿಸಿಕೊಳ್ಳಲ್ಲ.

ಸಿನಿಮಾದಲ್ಲಿ ನಟಿಸುವ ಬಗ್ಗೆ ಏನಂತೀರಿ?

ಈಗಾಗಲೇ ಒಂದು ಸಿನಿಮಾದಲ್ಲಿ ನಟನೆ ಮಾಡಿದ್ದೇನೆ. ಥಿಯೇಟರ್ ಲಾಕ್ಡೌನ್ ಮುಗಿದು ಸಿನಿಮಾ ಬಿಡುಗಡೆ ಆಗಬೇಕಿದೆ. ಒಂದೊಳ್ಳೆಯ ಸಿನಿಮಾದಲ್ಲಿ ನಟನೆ ಮಾಡಿರುವೆ ಎಂಬ ಭರವಸೆ ನನಗಿದೆ. ನಾನು ಇಂತಹದ್ದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅಂತ ಇಲ್ಲ. ಒಳ್ಳೆಯ ಕಟೆಂಟ್ ಸಿಕ್ಕರೆ ಇನ್ಮುಂದೆ ಕೂಡ ನಟಿಸುವೆ.

ಹೈದರಾಬಾದ್ ನಲ್ಲಿನ ಶೂಟಿಂಗ್ ಅನುಭವ ಹೇಗಿತ್ತು?

ತುಂಬಾ ಬಿಸಿಲು. ಹಾಗೆ ನೋಡಿದರೆ ಬೆಂಗಳೂರೇ ಸ್ವರ್ಗ! ಆದರೆ ಅಲ್ಲಿ ನಮ್ಮ ವಾಹಿನಿಯವರು, ತಂಡದವರು ಎಲ್ಲರೂ ಸಾಕಷ್ಟು ಪ್ರಿಕಾಶನ್ ತೆಗೆದುಕೊಂಡಿದ್ದರು. ಹಾಗಾಗಿ ಯಾವುದೇ ರೀತಿಯ ತೊಂದರೆ ಆಗಿಲ್ಲ.ಒಳ್ಳೆಯ ರೀತಿ ಅನುಭವ ಸಿಕ್ಕಿತು.

ಕೊನೆಯದಾಗಿ ನೀವೇನು ಹೇಳಬಯಸುತ್ತೀರಿ?

ನಾನು ಇಂದು ಜನರಿಂದ ಗುರುತಿಸಿಕೊಳ್ಳುತ್ತಿದ್ದರೆ ಇದಕ್ಕೆಲ್ಲ ಕಾರಣ ನಮ್ಮ ಡೈರೆಕ್ಟರ್, ಪ್ರೊಡ್ಯೂಸರ್ ಎಂದು ಹೇಳಲೇಬೇಕು. ನನ್ನ ಸ್ವಂತ ಮನೆಯಂತೆ ಇರೋ ಕಲರ್ಸ್ ಕನ್ನಡ ವಾಹಿನಿಯವರಿಗೆ, ನನ್ನ ಮನೆಯವರಿಗೆ, ನನ್ನ ಫ್ಯಾನ್ಸ್ ಗೆ ಧನ್ಯವಾದಗಳು ಹೇಳಲು ಇಷ್ಟ ಪಡುತ್ತೇನೆ. ಹೀಗೇ ಮುಂದೆ ನಮ್ಮ ಗೀತಾ ಧಾರಾವಾಹಿ ನೋಡುತ್ತಾ ಇರಿ, ಪ್ರೊತ್ಸಾಹ ನೀಡುತ್ತಿರಿ ಎಂದು ಹೇಳಬಯಸುತ್ತೇನೆ.

Recommended For You

Leave a Reply

error: Content is protected !!