ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಸಾವು

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನರಾಗಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಕೊನೆಯುಸಿರೆಳೆದಿದ್ದು ಅವರ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗಿದೆ.

ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯವರಾದ ಸುನೀಲ್ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದು ಬೆಂಗಳೂರಲ್ಲಿ. ಅದರಲ್ಲಿಯೂ ‘ಹಾಯ್ ಬೆಂಗಳೂರ್!’ ಸೇರಿಕೊಂಡು ಸುಮಾರು ಹದಿನೈದು ವರ್ಷಗಳ ಕಾಲ ರವಿಬೆಳಗೆರೆಯವರ ಆತ್ಮೀಯರಾಗಿ ಗುರುತಿಸಿಕೊಂಡಿದ್ದರು. ಅವರು ಜನಶ್ರೀ ವಾಹಿನಿಗೆ ಮುಖ್ಯಸ್ಥರಾದಾಗ ಸುನೀಲ್ ಹೆಗ್ಗರವಳ್ಳಿ ಅಲ್ಲಿಯೂ ವೃತ್ತಿ ಮಾಡಿದ್ದರು. ಬಳಿಕ ‘ಚಾರ್ಲಿ ಟೈಮ್ಸ್’ ಪತ್ರಿಕೆಯ ಸಂಪಾದಕರಾಗಿದ್ದ ಅವರು ಆರ್ ಕೆ ನ್ಯೂಸ್ (ರಾಷ್ಟ್ರಕೂಟ ನ್ಯೂಸ್) ಎನ್ನುವ ‘ಯೂಟ್ಯೂಬ್ ವಾಹಿನಿ’ಯನ್ನು ಮುನ್ನಡೆಸುತ್ತಿದ್ದರು. ಇತ್ತೀಚೆಗೆಷ್ಟೇ ಊರಿಗೆ ಹೋಗಿದ್ದ ಅವರು ಇಂದು ಸಂಜೆ ಬೆಂಗಳೂರಿಗೆ ಮರಳುವಾಗ ಹೃದಯಾಘಾತಕ್ಕೊಳಗಾಗಿದ್ದಾಗಿ ಜೊತೆಗಿದ್ದ ಸ್ನೇಹಿತ ಸಂದೀಪ್ ಅವರು ‘ಸಿನಿಕನ್ನಡ’ಕ್ಕೆ ತಿಳಿಸಿದ್ದಾರೆ.

ಸಂದೀಪ್ ಅವರ ಹೇಳಿಕೆಯ ಪ್ರಕಾರ ದಾರಿಮಧ್ಯೆ ಸುನೀಲ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರು ತಕ್ಷಣವೇ ಸ್ಥಳೀಯ ಆಸ್ಪತ್ರೆಯತ್ತ ತಾವಿದ್ದ ವಾಹನವನ್ನು ತಿರುಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಹೊತ್ತಿಗೆ ಸುನೀಲ್ ಪ್ರಾಣಪಕ್ಷಿ ಅವರ ದೇಹವನ್ನು ಬಿಟ್ಟು ಹೋಗಿತ್ತು. ಸುನೀಲ್ ಪತ್ನಿ ಸುಚಿತ್ರಾ, ಒಂಬತ್ತು ವರ್ಷದ ಪುತ್ರ ಸೂರ್ಯನನ್ನು ಅಗಲಿದ್ದಾರೆ. ತಂದೆತಾಯಿಯ ಐದು‌ಮಂದಿ‌ಮಕ್ಕಳಲ್ಲಿ‌ ಕೊನೆಯವರಾದ ಸುನೀಲ್ ಎಲ್ಲರಿಗಿಂತ ಬೇಗ ಪಯಣ ಮುಗಿಸಿದ್ದು ವಿಚಿತ್ರ. ಮೃತರ ಅಂತ್ಯಸಂಸ್ಕಾರವನ್ನು ನಾಳೆ ಹೆಗ್ಗರವಳ್ಳಿಯಲ್ಲಿ‌ ನೆರವೇರಿಸಲಿರುವುದಾಗಿ ತಿಳಿದು ಬಂದಿದೆ.

Recommended For You

Leave a Reply

error: Content is protected !!
%d bloggers like this: