
ವಿ.ರವಿಚಂದ್ರನ್ ಎಂದರೆ ಕನ್ನಡ ಚಿತ್ರರಂಗಕ್ಕೆ ಅದ್ಧೂರಿತನದ ಹೆಸರು ತಂದವರು. ಆದರೆ ಪ್ರಸ್ತುತ ಅವರೇ ತಮ್ಮ ಹೆಸರನ್ನು ಬದಲಿಸಿಕೊಂಡಿರುವುದಾಗಿ ಸಿನಿಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಕ್ರೇಜಿಸ್ಟಾರ್ ಎನ್ನುವ ಬಿರುದಿಗೆ ತಕ್ಕಂತೆ ಕ್ರೇಜಿ ಐಡಿಯಾಗಳನ್ನು ಪರದೆಯ ಮೇಲೆ ನೀಡುವಲ್ಲಿ ರವಿಚಂದ್ರನ್ ಅವರೇ ಮೊದಲಿಗರು. ಇದೀಗ ತಮ್ಮ ಹೆಸರಿನ ಮೇಲೆಯೂ ಅಂಥದೊಂದು ಪ್ರಯೋಗಕ್ಕೆ ಹೊರಟಿದ್ದಾರೆ ಕ್ರೇಜಿ. ಇಲ್ಲಿ ಕ್ರೇಜಿಗಿಂತ ನ್ಯೂಮರಾಲಜಿಯೇ ವರ್ಕೌಟ್ ಆದಂತಿದೆ. ಹಾಗಾಗಿ ವಿ. ರವಿಚಂದ್ರನ್ ಎನ್ನುವ ತಮ್ಮ ಹೆಸರನ್ನು ‘ರವಿಚಂದ್ರ ವಿ’ ಎಂದು ಬದಲಾಯಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬದಲಾಯಿಸಲಾಗದಂಥ ವಿಚಾರಗಳಲ್ಲಿ ಕ್ರೇಜಿಸ್ಟಾರ್ ಹೆಸರನ್ನು ಕೂಡ ಸೇರಿಸಬಹುದು. ಯಾಕೆಂದರೆ ಇತ್ತೀಚೆಗೆ ಅವರು ನಾಯಕನ ತಂದೆಯ ಪಾತ್ರ ಮಾಡಿರಬಹುದು; ಆದರೆ ಇಂದಿಗೂ ಅವರನ್ನು ರೊಮ್ಯಾಂಟಿಕ್ ಇಮೇಜ್ ನಿಂದ ಹೊರತರಲು ಅಭಿಮಾನಿಗಳು ಸಿದ್ಧರಿಲ್ಲ. ಸ್ವತಃ ರವಿಯವರೂ ಅಷ್ಟೇ! ಸದಾ ತಮ್ಮ ನೇರಮಾತಿಗೆ ಹೆಸರಾದವರು. ಒಂದು ವಿಚಾರದಲ್ಲಿ ಒಮ್ಮೆ ನಿರ್ಧಾರ ಮಾಡಿದರೆಂದರೆ ಅದನ್ನು ಬದಲಾಯಿಸಲು ಅವರೇ ಮನಸು ಮಾಡಬೇಕಷ್ಟೇ! ಅದಕ್ಕೆ ಹಲವಾರು ಉದಾಹರಣೆಗಳಿವೆ.

ESHVARI GROUPS ಎಂಬ ಹೊಸತನ
ವೀರಾಸ್ವಾಮಿಯವರು ಸ್ಥಾಪಿಸಿದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಈಶ್ವರಿ ಪಿಕ್ಚರ್ಸ್’ ಹೆಸರಿನಲ್ಲಿ ಕೂಡ ರವಿಯವರು ಸಣ್ಣದೊಂದು ಬದಲಾವಣೆ ಮಾಡಿದ್ದಾರೆ. Eswari ಎನ್ನುವ ಸ್ಪೆಲ್ಲಿಂಗ್ ಬದಲಾಯಿಸಿ ESHAWARI ಎಂದು ಮಾಡಿದ್ದಾರೆ. ಇಂದು ಈಶ್ವರಿ ಸಂಸ್ಥೆ ಚಿತ್ರ ನಿರ್ಮಾಣ ಮತ್ತು ವಿತರಣೆಗಷ್ಟೇ ಸೀಮಿತವಾಗಿಲ್ಲ. ನಿರ್ಮಾಣದಿಂದ ಬಿಡುಗಡೆ ತನಕ ಚಿತ್ರದ ಎಲ್ಲ ವಿಭಾಗವನ್ನು ಅಧಿಕೃತವಾಗಿ ಬಲ್ಲವರಾಗಿ ರವಿಯವರು ಬೆಳೆದು ನಿಂತಿದ್ದಾರೆ. ಹಾಗಾಗಿ ಈಶ್ವರಿ ಈಗ ಹಲವಾರು ಶಾಖೆಗಳನ್ನು ಹೊಂದಿರುವ ಗ್ರೂಪ್ ಆಗಿದೆ. ಆದ ಕಾರಣ ಸಂಸ್ಥೆಗೆ ESHVARI GROUPS ಎಂದು ಮರುನಾಮಕರಣ ಮಾಡಿದ್ದಾರೆ ಕ್ರೇಜಿಸ್ಟಾರ್.
ಬದಲಾದ ಹೆಸರೇ ಶಾಶ್ವತ..!
ರವಿಯವರು ಹೆಸರು ಬದಲಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೊಮ್ಮೆ ತಮ್ಮ ಹೆಸರಿನ ಸ್ಪೆಲ್ಲಿಂಗ್ ಅನ್ನು Ravichandaran (ರವಿಚಂದರನ್) ಎನ್ನುವ ರೀತಿ ಬದಲಾಯಿಸಿದ್ದರು. ತಮ್ಮ ಸಹೋದರನನ್ನು ನಾಯಕನಾಗಿ ಪರಿಚಯಿಸುವ ಪ್ರಯತ್ನದಲ್ಲಿ ಬಾಲಾಜಿ ಎನ್ನುವ ಅವರ ಹೆಸರನ್ನು ಈಶ್ವರ್ ಎಂದು ಬದಲಾಯಿಸಿದ್ದರು. ಪ್ರೇಮಲೋಕದಲ್ಲಿ ಜ್ಯೂಹಿ ಚಾವ್ಲಾರನ್ನು ಜೂಲಿ ಎಂದು ಪರಿಚಯಿಸಿದ್ದರು. ಆದರೆ ಅವೆಲ್ಲವೂ ಆಯಾ ಸಿನಿಮಾಗಳಿಗಷ್ಟೇ ಸೀಮಿತವಾಗಿತ್ತು. (ಇದಕ್ಕೆ ಅಪವಾದ ಎನ್ನುವಂತೆ ಅವರು ನೀಡಿದ ಹೆಸರುಗಳು ಕಲಾವಿದರಿಗೆ ಹೊಸ ಬ್ರೇಕ್ ನೀಡಿದ ಇತಿಹಾಸವೂ ಇದೆ. ಅವುಗಳಿಗೊಂದು ಉದಾಹರಣೆಯಾಗಿ ಬುಲೆಟ್ ಪ್ರಕಾಶ್ ಗೆ ‘ಬುಲೆಟ್’ ಸೇರಿಸಿದ್ದನ್ನು ನೆನಪಿಸಬಹುದು) ಆದರೆ ಈ ಬಾರಿ ರವಿಯವರು ತಮ್ಮ ಹೆಸರಿನಲ್ಲಿನ ಬದಲಾವಣೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅಂದರೆ ‘ರವಿಚಂದ್ರ ವಿ’ ಎನ್ನುವ ಹೆಸರು ಸಿನಿಮಾ ಟೈಟಲ್ ಕಾರ್ಡ್ ಗಳಿಗಷ್ಟೇ ಸೀಮಿತವಾಗಿರದೆ, ನಿಧಾನಕ್ಕೆ ಮುಂದೆ ಕಾನೂನು ಪ್ರಕಾರವಾಗಿ ಇದೇ ಹೆಸರನ್ನು ಅಧಿಕೃತ ಮಾಡಲಿರುವುದಾಗಿ ಹೇಳಿದ್ದಾರೆ.

ಹೆಸರಿನಲ್ಲಿರಲಿದೆ ‘ಕನ್ನಡಿಗ’ನ ಕಂಪು!
ರವಿಚಂದ್ರ ಅವರು ಬೆಂಗಳೂರಲ್ಲೇ ಹುಟ್ಟಿ ಕನ್ನಡ ಚಿತ್ರರಂಗ ಹೆಮ್ಮೆ ಪಡುವಂಥ ತಾಂತ್ರಿಕತೆಯನ್ನು, ಕನ್ನಡದ ಹಾಡುಗಳನ್ನು ತಮ್ಮ ಸಿನಿಮಾದ ಮೂಲಕ ನೀಡಿದ್ದರೂ ಅವರ ಹೆಸರಿನಲ್ಲೊಂದು ತಮಿಳುತನವಿತ್ತು. ಅದಕ್ಕೆ ಕಾರಣ ರವಿಯವರ ತಂದೆ ವೀರಾಸ್ವಾಮಿಯವರು ಮೂಲತಃ ತಮಿಳುನಾಡಿನವರು. ಆದರೆ ರವಿಯವರು ನಾಯಕರಾಗಿ ಕನ್ನಡಿಗರ ಮನಸೆಳೆದ ರೀತಿ ಯಾವ ಹಂತದಲ್ಲಿತ್ತು ಎಂದರೆ ಹೆಸರಿನ ಕೊನೆಗಿದ್ದ ಎನ್ ಕಾರ ಯಾವತ್ತೂ ನಮ್ಮದಲ್ಲ ಅನಿಸಿರಲಿಲ್ಲ! ಅದು ನಮ್ಮ ಅಹಂಕಾರವಾಗಿತ್ತು! ವಿಷ್ಣುವರ್ಧನ್ ಎಂಬ ಹಾಗೆ ರವಿಚಂದ್ರನ್ ಎನ್ನುವ ಹೆಸರೂ ತಾರಾಪಟ್ಟ ಪಡೆಯಿತು. ನಿರ್ದೇಶಕ ಗಿರಿರಾಜ್ ಅವರಿಗಂತೂ ‘ಕನ್ನಡಿಗ’ ಎನ್ನುವ ಚಿತ್ರ ಮಾಡಲು ಪ್ರಸ್ತುತ ಕನ್ನಡದಲ್ಲಿ ರವಿಯವರೇ ಸೂಕ್ತ ಅನಿಸಿಬಿಟ್ಟಿದ್ದಾರೆ. ನಾಡಿನ ಹೆಮ್ಮೆ ಸಾರುವ ಅಂಥ ಚಿತ್ರದಲ್ಲಿ ನಟಿಸುತ್ತಲೇ ತಮ್ಮಹೆಸರನ್ನು, ಸಂಸ್ಥೆಯ ಹೆಸರನ್ನು ಕೂಡ ಕನ್ನಡದ ಉಚ್ಚಾರಣೆಗೆ ಹೊಂದುವಂತೆ ಬದಲಾಯಿಸಿ ರವಿಚಂದ್ರ ಎಂದು ಮಾಡಿಕೊಂಡಿದ್ದಾರೆ ಕ್ರೇಜಿಸ್ಟಾರ್! ಈ ಬದಲಾವಣೆಯ ಹಿಂದಿನ ಕಾರಣವನ್ನು ಅವರು ವಿವರಿಸಿಲ್ಲವಾದರೂ ರವಿಚಂದ್ರ ವಿ ಅವರಿಗೆ ನಮ್ಮ ಹಾರ್ದಿಕ ಶುಭಾಶಯಗಳು.