ನಿರ್ದೇಶಕರ ಮರೆಯದ ನಾಯಕ

ಹಿರಿಯ ನಿರ್ದೇಶಕ ಎಸ್. ಉಮೇಶ್ ಬಗ್ಗೆ ನಿಮಗೆ ನೆನಪಿರಬಹುದು. ಕಳೆದ ಶನಿವಾರ ಅವರ ಬಾಳಿನಲ್ಲಿ ನಡೆದ ಘಟನೆಯ ಬಗ್ಗೆ ಅವರು ಅಚ್ಚರಿಗೊಂಡಿದ್ದಾರೆ. ಅದೇನು ಎಂದು ತಿಳಿಯಲು ಈ ಸ್ಟೋರಿ ಓದಿ.

“ಉಮೇಶ್ ಅವರು ಚಿತ್ರೋದ್ಯಮ ಪ್ರವೇಶಿಸಿದ್ದು ಸಹನಿರ್ದೇಶಕರಾಗಿ. ಆದರೆ ಸಂಕಲನದಲ್ಲಿ ವಿಪರೀತಾಸಕ್ತರಾಗಿದ್ದರು. ಮುಂದೆ ತಾವು ದುಡಿದ ಸಿನಿಮಾಗಳ ಸಂಕಲನಕಾರರಾಗಿಯೂ ಹೆಸರು ಮಾಡಿದವರು ಉಮೇಶ್. ಅವರ ಅದೃಷ್ಟ ಖುಲಾಯಿಸಿದ್ದು 1987ರಲ್ಲಿ. ಆ ವರ್ಷ ಮತ್ತೊಬ್ಬ ನಿರ್ಮಾಪಕ ಕೆ.ಪ್ರಭಾಕರ್ ಅವರ ಜತೆ ಸೇರಿ ‘ಅವಳೇ ನನ್ನ ಹೆಂಡ್ತಿ’ ಸಿನಿಮಾವನ್ನು ನಿರ್ದೇಶಿಸಿದರು. ಯಾವಾಗ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಅನಿರೀಕ್ಷಿತ ಬೆಂಬಲ ಸಿಕ್ಕಿತೋ ಉಮೇಶ್ ಮಿಂಚಿ ಬಿಟ್ಟರು! ಮತ್ತೆ ಹಿಂದಿರುಗಿ ನೋಡದ ಉಮೇಶ್ ಸಾಲು ಸಾಲಾಗಿ ಒಂದರ ನಂತರ ಮತ್ತೊಂದರಂತೆ ಸಿನಿಮಾ ನಿರ್ದೇಶಿಸಲು ಹೊರಟು ಬಿಟ್ಟರು : ಅವನೇ ನನ್ನ ಗಂಡ, ನಂಬಿದ್ರೆ ನಂಬಿ ಬಿಟ್ರೆ ಬಿಡಿ, ರಾಜಾ ಕೆಂಪು ರೋಜಾ, ಪ್ರೇಮ ಪರೀಕ್ಷೆ, ಬನ್ನಿ ಒಂದ್ಸಲ ನೋಡಿ, ತುಂಬಿದ ಮನೆ, ಸಿಡಿದೆದ್ದ ಗಂಡು, ನನ್ನಾಸೆಯ ನಂದಿನಿ, ಬದುಕು ಜಟಕಾ ಬಂಡಿ, ದಾಯಾದಿ, ಅವಳೇ ನನ್ನ ಹುಡುಗಿ, ಎಲ್ಲರಂತಲ್ಲ ನನ್ನ ಗಂಡ…ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿ ಉದ್ಯಮದಲ್ಲಿ ಅಗ್ರಸ್ಥಾನ ಪಡೆದರು. ಪ್ರಸ್ತುತ ಅವರ ಎರಡು ಕಿಡ್ನಿ ಕೈಕೊಟ್ಟಿದೆ. ಬಿಪಿ, ಶುಗರ್ ಹೆಚ್ಚಿ ಕಂಗಾಲಾಗಿದ್ದಾರೆ” ಎನ್ನುವ ಸುದ್ದಿಯನ್ನು ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಇತ್ತೀಚೆಗೆ ಸಾಮಾಜಿಕ‌ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆನಂತರ ಅವರ ನೆರವಿಗೆ ಒಂದಷ್ಟು ಮಂದಿ ಧಾವಿಸಿದ್ದಾಗಿ ಕೂಡ ತಿಳಿದು ಬಂದಿತ್ತು. ಇದೀಗ ರವಿಶಂಕರ್ ಗೌಡ ತಮಗೆ ಮಾಡಿರುವ ಸಹಾಯದ ಬಗ್ಗೆ ಸ್ವತಃ ನಿರ್ದೇಶಕ ಉಮೇಶ್ ಅವರು ಹೀಗೆ ಹೇಳಿಕೊಂಡಿದ್ದಾರೆ.

ಶನಿವಾರದ ಶಾಕ್!

ಮೊನ್ನೆ ಶನಿವಾರ ನಾಯಕನಟ ರವಿಶಂಕರ ಗೌಡರು ಫೋನ್ ಮಾಡಿ ನಿಮ್ಮ ಮಗನ ಸ್ಕೂಲ್ ಫೀಸಿಗೆ ಸಹಾಯಮಾಡಲು NGO ಸಂಸ್ಥೆಗೆ ಸಂಬಂಧಪಟ್ಟ ಒಬ್ಬರನ್ನು ಮನೆಗೆ ಕರೆದುಕೊಂಡು ಬರುವುದಾಗಿ ಹೇಳಿ ಅವರೊಂದಿಗೆ ಬಂದವರು ಅವರನ್ನು ಪರಿಚಯಿಸಿ ಫೀಸ್ ಬಗ್ಗೆ ಪಾಸಿಟಿವ್ ರಿಸಲ್ಟ್ ಕೊಟ್ಟರಲ್ಲದೆ ನನ್ನ ಆರೋಗ್ಯ ವಿಚಾರಿಸಿ ಹೊರಡುವಾಗ ಚಿಕ್ಕ ಬ್ಯಾಗೊಂದನ್ನು ನೀಡಿ ಇದು ನನ್ನ ಸಣ್ಣ ಕಾಣಿಕೆಯೆಂದು ಹೇಳಿ ಹೊರಟರು. ನಂತರ ಬ್ಯಾಗು ತೆರೆದು ನೋಡಿದರೆ ಅಲ್ಲಿ 50,000 ಹಣವಿತ್ತು. ಒಂದುಕ್ಷಣ ಮೌನ ವಹಿಸಿದೆ, ಕಣ್ಣಲ್ಲಿ ಹಾಗೆಯೇ ನೀರು ತುಂಬಿಕೊಂಡಿತ್ತು. ರವಿಶಂಕರ್ ರವರ ಉದಾರಿತನಕ್ಕೆ ಹೇಗೆ ಕೃತಜ್ಞತೆ ಹೇಳುವುದೆಂದು ತೋಚದೆ ತೊಳಲಾಡಿದೆ. ಬಹುಶಃ ಇದಕ್ಕೆ ಇರಬೇಕು, ದೇವರು ತಾನು ಬರಲ್ಲ, ಇಂಥವರ ರೂಪದಲ್ಲಿ ಬರುತ್ತೇನೆ ಅನ್ನೋದು. ಒಟ್ಟಾರೆ ನನ್ನ ನಿರ್ದೇಶನದ “ಭಗವಂತ ಕೈ ಕೊಟ್ಟ” ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದ ರವಿಶಂಕರ್ ಗೌಡರು ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬಂದು ನನ್ನ ಕೈ ಹಿಡಿದಿದ್ದಕ್ಕೆ ಅವರಿಗೆ ನಾನು ಎಷ್ಟು ಕೃತಜ್ಞತೆ ಹೇಳಿದರು ಸಾಲದು.

ಎಸ್. ಉಮೇಶ್, ನಿರ್ದೇಶಕ

Recommended For You

Leave a Reply

error: Content is protected !!
%d bloggers like this: