
ಚಾಲೆಂಜಿಂಗ್ ದರ್ಶನ್ ಹೊಸ ಚಿತ್ರದ ಘೋಷಣೆಯಾಗಿದೆ. ‘ಯಜಮಾನ’ ಚಿತ್ರವನ್ನು ನೀಡಿದ್ದ ನಿರ್ಮಾಪಕಿ ಶೈಲಜಾನಾಗ್ ಅವರ ಬ್ಯಾನರ್ ನಲ್ಲೇ ದರ್ಶನ್ ಹೊಸ ಸಿನಿಮಾ ಕೂಡ ನಿರ್ಮಾಣವಾಗುತ್ತಿದೆ.
‘ಯಜಮಾನ’ ಚಿತ್ರದ ಮೂಲಕ ಕಮರ್ಷಿಯಲ್ ರೂಪದಲ್ಲಿ ಸಾಮಾಜಿಕ ಕಾಳಜಿಯ ಚಿತ್ರ ನೀಡಿದವರು ಶೈಲಜಾನಾಗ್. ಆ ಚಿತ್ರವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಮುಖವನ್ನು ಅನಾವರಣ ಮಾಡಿತ್ತು. ಮಾಧ್ಯಮಗಳಿಂದ ಪ್ರಶಂಸಿಸಲ್ಪಟ್ಟಿತ್ತು. ಮಾತ್ರವಲ್ಲ ಸದ್ಯದ ಸಾಮಾಜಿಕ ರಾಜಕೀಯ ಪರಿಸ್ಥಿತಿಯನ್ನು ಟ್ರೋಲ್ ಮಾಡಲಿಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹಲವಾರು ದೃಶ್ಯಗಳನ್ನು ಬಳಸಲಾಗಿತ್ತು. ಅದು ಚಿತ್ರದ ಸದ್ಯದ ಕಾಲಘಟ್ಟಕ್ಕೆ ಎಷ್ಟೊಂದು ಪೂರಕವಾದ ವಿಷಯಗಳನ್ನು ಹೊಂದಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಹಾಗಾಗಿ ಬಿ ಸುರೇಶ್ ಅವರಂಥ ಹೋರಾಟ ಮನೋಭಾವದ ನಿರ್ದೇಶಕರು ಪತ್ನಿ ಶೈಲಜಾನಾಗ್ ಅವರೊಡನೆ ಸೇರಿಕೊಂಡು ಮತ್ತೊಮ್ಮೆ ಒಂದು ಚಿತ್ರ ಮಾಡುತ್ತಿದ್ದಾರೆ ಎನ್ನುವಾಗ ಸಹಜವಾಗಿ ಅಂಥವೇ ಇನ್ನಷ್ಟು ನಿರೀಕ್ಷೆಗಳು ಅಭಿಮಾನಿಗಳಲ್ಲಿ ತುಂಬಿವೆ. ಜೊತೆಯಲ್ಲಿ ದರ್ಶನ್ ಮತ್ತೆ ಅದೇ ನಿರ್ಮಾಪಕರಿಗೆ ಕಾಲ್ ಶೀಟ್ ನೀಡಿರುವುದು ಕೂಡ ಪ್ರಾಜೆಕ್ಟ್ ನ ಪ್ರಾಮುಖ್ಯತೆ ಸಾರುವಂತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ದರ್ಶನ್ ಅವರು ಕೊರೊನ ಸಂದಿಗ್ಧತೆ ಮುಗಿದೊಡನೆ ಇದೇ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರೀಕರಣಕ್ಕೆ ಮರಳುತ್ತಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಇನ್ನಿಲ್ಲದ ಸಂತಸ ತಂದಿದೆ. ಯಾಕೆಂದರೆ ಈಗಾಗಲೇ ಚಿತ್ರೀಕರಣ ಆರಂಭಿಸಿರುವ ‘ರಾಜ ವೀರ ಮದಕರಿ ನಾಯಕ’ದಲ್ಲಿ ದರ್ಶನ್ ಮುಳುಗಿ ಬಿಟ್ಟರೆ ಇನ್ನೆರಡು ವರ್ಷಕ್ಕೆ ಅವರ ಯಾವ ಹೊಸ ಚಿತ್ರಗಳು ಕೂಡ ಸಿಗಲಾರವು ಎನ್ನುವ ಸಹಜ ಆತಂಕ ಅಭಿಮಾನಿಗಳಲ್ಲಿತ್ತು. ಅದಕ ತಕ್ಕಂತೆ ಅದೊಂದು ಬೃಹತ್ ಪ್ರಾಜೆಕ್ಟ್ ಆಗಿರುವ ಕಾರಣ ಕೊರೊನಾ ಸಂಪೂರ್ಣವಾಗಿ ತೊಲಗದೆ ಆ ಬಗ್ಗೆ ಯೋಚಿಸುವುದು ಕೂಡ ಕಷ್ಟ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಇತ್ತೀಚಿಗಷ್ಟೇ ಹೇಳಿಕೊಂಡಿದ್ದರು.
ಮತ್ತೊಮ್ಮೆ ಹರಿಕೃಷ್ಣ
ದರ್ಶನ್ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರ ಪಟ್ಟಿ ಸೇರಿಕೊಂಡಿದ್ದ ಹರಿಕೃಷ್ಣ ಅವರು ಮಾತು ಕಡಿಮೆ ಕೆಲಸ ಹೆಚ್ಚು ಎನ್ನುವಂಥವರು. ಯಜಮಾನ ಚಿತ್ರ ಆರಂಭದಲ್ಲಿ ಕುಮಾರ್ ನಿರ್ದೇಶನದಲ್ಲಿ ಬರುತ್ತಿದೆ ಎಂದರೂ ಬಳಿಕ ಹರಿಕೃಷ್ಣ ಅವರು ಕೈ ಜೋಡಿಸಿ ತಾವು ಎಂಥ ಚಿತ್ರ ನೀಡಬಲ್ಲೆ ಎನ್ನುವುದನ್ನು ಸಾಬೀತು ಮಾಡಿದ್ದರು. ಇದೀಗ ಸ್ವತಃ ಹರಿಕೃಷ್ಣ ಅವರಿಗೆ ಆರಂಭದಿಂದಲೇ ನಿರ್ದೇಶಕನಾಗಿ ತಮ್ಮ ಪ್ರತಿಭೆಯೇನೆಂಬುದನ್ನು ಸಾಬೀತು ಪಡಿಸುವ ಅವಕಾಶ ಲಭಿಸಿದೆ. ಇನ್ನೂ ಹೆಸರಿಡದ ದರ್ಶನ್ ಅವರ ಐವತ್ತೈದನೇ ಸಿನಿಮಾ ಈ ಎಲ್ಲ ಕಾರಣಕ್ಕಾಗಿ ಕುತೂಹಲ ಮೂಡಿಸಿದೆ.