
ಕನ್ನಡ ಕಿರುತೆರೆಯಲ್ಲಿ ಸದ್ಯದ ಟಾಪ್ ಫೈವ್ ಧಾರಾವಾಹಿಗಳಲ್ಲಿ ‘ನಾಗಿಣಿ -2’ ಕೂಡ ಸೇರಿಕೊಂಡಿದೆ. ‘ಟೈಮ್‌ಪಾಸ್ ತೆನಾಲಿ’ ಧಾರಾವಾಹಿ ಮೂಲಕ ಬಾಲನಟನಾಗಿ ಕಿರುತೆರೆ ಜರ್ನಿ ಆರಂಭಿಸಿದ ನಿನಾದ್ ಹರಿತ್ಸ ‘ನಾಗಿಣಿ-2’ನಲ್ಲಿ ತುಂಟ ಯುವಕನಾಗಿ ಹರೆಯದ ಹುಡುಗಿಯರ ನಿದ್ದೆಗೆಡಿಸಿದ್ದಾರೆ! ನಿನಾದ್ ರಿಯಲ್ ಲೈಫ್ ಇಂಟ್ರೆಸ್ಟಿಂಗ್ ಮಾಹಿತಿ ನಮ್ಮ CINIಕನ್ನಡ.com ಜೊತೆ ಹಂಚಿಕೊಂಡಿದ್ದಾರೆ.
ನಿಮ್ಮ ಆಕ್ಟಿಂಗ್ ಜರ್ನಿಯನ್ನು ಹೇಗೆ ವಿವರಿಸಬಹುದು?
ನಾನು ಚಿಕ್ಕನಿದಿಂದಲೂ ನನ್ನ ತಂದೆ ತಾಯಿಯವರ ನಾಟಕ ,ಅಭಿನಯ ನೋಡಿಕೊಂಡು ಬೆಳೆದೆ. ಅವರು ರಂಗಭೂಮಿ ಕಲಾವಿದರಾಗಿದ್ದರು. ನನಗೆ ಏಳು ವರ್ಷವಿದ್ದಾಗಲೇ “ಟೈಮ್ ಪಾಸ್ ತೆನಾಲಿ” ಎನ್ನುವ ಧಾರಾವಾಹಿಯ ಮೂಲಕ ರಂಗಭೂಮಿ ಪ್ರವೇಶಿಸಿದೆ. ಅದಾದ ನಂತರ “ ಕುಬೇರಪ್ಪ ಆಂಡ್ ಸನ್ಸ್ “ ಎಂಬ ಧಾರಾವಾಹಿಯಲ್ಲಿ ನಟಿಸಿದೆ. ಆದಕಾರಣ ನಟನಾ ಬಗ್ಗೆ ಆಸಕ್ತಿ, ರುಚಿ ಎಲ್ಲವೂ ಮೊದಲೇ ಇತ್ತು. ಆಮೇಲೆ ಓದಿನ ಕಡೆ ಗಮನ ಹರಿಸಿದೆ ಮತ್ತೆ ನಟನಾ ಕ್ಷೇತ್ರಕ್ಕೆ ಬರಬೇಕು ಎಂದು ಅನಿಸಿದಾಗ ಅವಕಾಶ ಸಿಕ್ಕಿದ್ದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಅರಮನೆ ‘ಧಾರಾವಾಹಿ’ಯಲ್ಲಿ. ಅದರಲ್ಲಿ ಹೀರೋಯಿನ್ ತಮ್ಮನಾಗಿ ಎರಡು ವರ್ಷಗಳ ಕಾಲ ನಟಿಸಿದ ನಂತರ ಸ್ಟಾರ್ ಸುವರ್ಣದಲ್ಲಿ ‘ಬಿಳಿ ಹೆಂಡ್ತಿ’ ಮತ್ತು ಪ್ರಸ್ತುತ ಜೀ ಕನ್ನಡದಲ್ಲಿ ಬರುವ ‘ನಾಗಿಣಿ -2’ ಸೀರಿಯಲ್ ನಲ್ಲಿ ಹೀರೋ ಆಗಿ ನಟಿಸುತ್ತಿದ್ದೇನೆ.
ನಿಮ್ಮ ಕನಸಿನ ಪಾತ್ರ ಯಾವುದು?
ಎಲ್ಲಾ ರೀತಿಯ ಪಾತ್ರಗಳಲ್ಲಿ ಹೊಸ ರೀತಿಯ ಅನುಭವ ಇರುತ್ತದೆ. ಜೊತೆಗೆ ಉಳಿದವುಗಳಲ್ಲಿ ಏನೋ ಖುಷಿ ಇದ್ದರೂ, ಆತ್ಮತೃಪ್ತಿಗಾಗಿ ಒಂದು ಪೌರಾಣಿಕ ಪಾತ್ರ ಮಾಡಬೇಕು.

ನೀವು ಕಂಡಂತೆ ಕಿರುತೆರೆಗೂ ರಂಗಭೂಮಿಗೂ ವ್ಯತ್ಯಾಸವೇನು?
ರಂಗಭೂಮಿ ಹಾಗೂ ಧಾರಾವಾಹಿ ಎರಡಕ್ಕೂ ನನ್ನ ಜೀವನದಲ್ಲಿ ಬಹು ಪ್ರಾಮುಖ್ಯತೆ ಇದೆ. ರಂಗಭೂಮಿ ಒಂದು ಮನೆಯಂತೆ. ನಮ್ಮ ಅಭಿನಯಕ್ಕೆ ತಕ್ಕ ಅಭಿಪ್ರಾಯ ತಕ್ಷಣ ಸಿಗುತ್ತದೆ. ಸೀರಿಯಲ್ ಸ್ವಲ್ಪ ತಡವಾಗಿ ಪ್ರತಿಕ್ರಿಯೆ ಸಿಗುವುದು. ಸೀರಿಯಲ್ ನಲ್ಲಿ ಎಂತಹ ಪಾತ್ರ ಬಂದರು ನಗು ನಗುತ್ತಾ ,ತಾಳ್ಮೆಯಿಂದ ಮಾಡಬೇಕು ಎಂದು ಕಲಿತುಕೊಂಡೆ. ರಂಗಭೂಮಿ ಬದುಕು ಕಟ್ಟಿಕೊಳ್ಳುವುದು ತಿಳಿಸಿಕೊಟ್ಟರೆ, ಸೀರಿಯಲ್ ಬದುಕನ್ನು ಕಲಿಸುತ್ತಿದೆ.
ರಿಯಲ್ ಲೈಫ್ ನಲ್ಲಿ ನಿನಾದ್ ಹೇಗೆ?
ನನಗೆ ಪ್ರತಿಕ್ಷಣ ಹೊಸತನ್ನು ಕಲಿಯಬೇಕು ಎಂಬ ಹಂಬಲ,ತವಕ. ಬಿಡುವು ಸಿಕ್ಕಾಗ ಸಿಂಗರ್ ಡ್ಯಾನ್ಸರ್ ಪಕ್ಕಾ ಮಲ್ಟಿಟ್ಯಾಲೆಂಟ್! ಆದ್ರೆ ಸಮಯ ಸಿಕ್ಕಾಗ ಎಲ್ಲಾ ಭಾಷೆಯ ಸಿನಿಮಾ ನೋಡುವುದು, ಅದರಿಂದ ಹೊಸತನವನ್ನು ಕಲಿಯುವುದು ಹಾಗೂ ಫ್ಯಾಮಿಲಿ ಜೊತೆ ಕಾಲ ಕಳೆಯುವುದು. ಹಾಗೇ ಲಾಕ್ಡೌನ್ ಟೈಮ್ ಅಲ್ಲಿ ಸ್ವಲ್ಪ ಕಸರತ್ತು ಮಾಡಿ ಸಿಕ್ಸ್ ಪ್ಯಾಕ್ ಬರಿಸಿಕೊಂಡಿದ್ದೇನೆ. ಹೆಚ್ಚಾಗಿ ಹೇಳಬೇಕು ಅಂದ್ರೆ ತ್ರಿಶೂಲ್ ಹಾಗೂ ನಿನಾದ್ ಗೂ ಹೆಚ್ಚೇನು ವ್ಯತ್ಯಾಸವಿಲ್ಲ. ನಿನಾದ್ ಅಂದ್ರೆ ಸ್ವಾಭಿಮಾನಿ. ಆದರೆ ತ್ರಿಶೂಲ್ ಬೈಗುಳ ಸಿಕ್ಕಿದ್ರು ಅಲ್ಲೇ ಇರುವನು.
ಸಿನಿಮಾ ಅವಕಾಶಗಳು ಬಂದಿದೆಯಾ ?
ಸಿನಿಮಾ ಅವಕಾಶಗಳು ಬರುತ್ತಿವೆ. ಇಂಥದೇ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಅಭಿಲಾಷೆ ನನಗಿಲ್ಲ. ಆದರೆ ಒಳ್ಳೆಯ ಕಟೆಂಟ್ ಗೆ ಕಾಯುತ್ತಿದ್ದೇನೆ. ಉತ್ತಮ ಸ್ಕ್ರಿಪ್ಟ್ ಬಂದರೆ ಖಂಡಿತ ಸಿನಿಮಾದಲ್ಲಿಯೂ ನನ್ನನ್ನು ನೋಡಬಹುದು.

ನಿಮಗೆ ಬಂದಂಥ ಅವಾರ್ಡ್ಸ್ ಬಗ್ಗೆ ಹೇಳಿ
ಪ್ರಶಸ್ತಿಗಳು ರಂಗಭೂಮಿಯ ದಿನಗಳಿಂದಲೇ ನನಗೆ ದೊರೆತಿವೆ. ‘ತ್ರಿ ರೋಸಸ್’ ಎಂಬ ನಾಟಕಕ್ಕೆ ನನಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು. ಹಾಗೂ ಜೀ ಕನ್ನಡ ಅವಾರ್ಡ್ ಶೋ ಅಲ್ಲಿ ಕೂಡ ತ್ರಿಶೂಲ್ ಪಾತ್ರಕ್ಕೆ ಅವಾರ್ಡ್ ಬಂದಿದೆ.
ತ್ರಿಶೂಲ್ ಪಾತ್ರ ಇಷ್ಟು ಜನಪ್ರಿಯತೆ ತಂದು ಕೊಡುತ್ತೆ ಎಂದು ನಿರೀಕ್ಷಿಸಿದ್ದಿರಾ ?
ನಾಯಕನಾಗಿ ನನಗೆ ‘ನಾಗಿಣಿ -2’ ಮೊದಲ ಧಾರಾವಾಹಿ. ಎರಡು ಧಾರಾವಾಹಿ ಈಗಾಗಲೇ ನಟಿಸಿರುವ ಕಾರಣ ಇನ್ನೇನಿದ್ದರು ನಾಯಕನಾಗಿ ಪಾತ್ರ ಮಾಡಬೇಕು ಎಂದುಕೊಂಡು ,ಸಣ್ಣ-ಪುಟ್ಟ ಪಾತ್ರಗಳನ್ನು ನಿರಾಕರಿಸುತ್ತಿದ್ದೆ. ಹಾಗಿದ್ದ ಸಂದರ್ಭದಲ್ಲಿ ದೊರಕಿರುವ ತ್ರಿಶೂಲ್ ಪಾತ್ರ ನನಗೆ ಜನಪ್ರಿಯತೆ,ದೊಡ್ಡ ಬ್ರೇಕ್ ಕೊಟ್ಟಿದೆ . ಜೊತೆಗೆ ಜನಪ್ರಿಯ ಕಲಾವಿದನಾಗಬೇಕು ಎಂಬ ಕನಸು ನಾಗಿಣಿ-2 ಯಿಂದ ನನಸಾಗಿದೆ.
ಸಂದರ್ಶಕಿ: ಸೌಮಿನಿ ಬಡೆಕ್ಕಿಲ
