ನಿರ್ದೇಶನ ರಂಗಕ್ಕೆ ಹೊಸದಾಗಿ ಬರುವವರು ಕಿರುಚಿತ್ರಗಳನ್ನು ಮಾಡಿ ಮೂಲಕ ನಿರ್ಮಾಪಕರ ಮನಗೆಲ್ಲುವ ಪ್ರಯತ್ನ ನಡೆಸುವವರು ಇದ್ದಾರೆ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ನಿರ್ದೇಶಕ ಎವಿ ಸುರೇಶ್ ಮತ್ತು ತಂಡದವರು ಸೇರಿಕೊಂಡು ಅರ್ಧಗಂಟೆಯ ರೌಡಿಸಂ ಚಿತ್ರವೊಂದನ್ನು ತಯಾರಿಸಿದ್ದಾರೆ.
‘ಮಾಸ್ಟರ್ ಮೈಂಡ್’ ಹೆಸರಿನ ತಮ್ಮ ಚಿತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ವೀಕ್ಷಿಸಿ ಮೆಚ್ಚಿರುವುದಾಗಿ ತಿಳಿಸಿದ ಚಿತ್ರತಂಡ ಬುಧವಾರದಂದು ಮಾದ್ಯಮದವರಿಗೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿತ್ತು.
ಪ್ರದರ್ಶನದ ಬಳಿಕ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವ ಎ.ವಿ.ಸುರೇಶ್ ಮಾತನಾಡಿ ಚಿತ್ರರಂಗದಲ್ಲಿ ಮೊದಲ ಬಾರಿಗೆ ತಾವು ಇಂಥದೊಂದು ಪ್ರಯತ್ನ ನಡೆಸಿರುವುದಾಗಿ ಹೇಳಿ ಇದನ್ನು ತಾವು ಪಿಪಿಎಂ ಅಂದರೆ ‘ಪ್ರೊಡ್ಯುಸರ್ ಪ್ರೊಮೋ ಮೂವೀ’ ಎಂದು ಕರೆಯುವುದಾಗಿ ತಿಳಿಸಿದ್ದಾರೆ. ಹೊಸಬರು ಚಿತ್ರ ಮಾಡಿದ ನಂತರ ಏನು ಮಾಡಬೇಕು, ಯಾರಿಗೆ ತೋರಿಸಬೇಕು ಇತ್ಯಾದಿ ಗೊಂದಲದಲ್ಲಿ ಇರುತ್ತಾರೆ. ಅಂತಹವರು ಸಿನಿಮಾವನ್ನು ಆನಂದ್ ಆಡಿಯೋ ಸಂಸ್ಥೆಗೆ ಕೊಡುವಾಗ ಪಿಪಿಎಂ ಜಾನರ್ ಅಡಿಯಲ್ಲಿ ಪ್ರಸಾರ ಮಾಡಲು ಕೋರಿಕೊಳ್ಳಬೇಕಾಗುತ್ತದೆ. ಅವರು ಅದೇ ವಿಭಾಗದ ಯೂ ಟ್ಯೂಬ್ ನಲ್ಲಿ ಅಳವಡಿಸುತ್ತಾರೆ. ಇದನ್ನು ನೋಡಿದ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬರುವರೆಂಬ ನಂಬಿಕೆಯಿಂದ ಈ ರೀತಿ ಮಾಡಲಾಗಿದೆ ಎಂದು ಸುರೇಶ್ ಹೇಳಿದರು.
ಚಿತ್ರ ವೀಕ್ಷಿಸಲು ಅತಿಥಿಗಳಾಗಿ ಆಗಮಿಸಿದ್ದ ಉಮೇಶ್ ಬಣಕಾರ್ ಇಂಥ ಸಿನಿಮಾಗಳನ್ನು ಯೂಟ್ಯೂಬ್ ಗೆ ಸೀಮಿತಗೊಳಿಸಬಾರದು. ಅದಕ್ಕಾಗಿ ಸಿನಿಮಾದ ಪಟ್ಟಿಗೆ ಸೇರಿಸುವ ಹಾಗೆ ಕನಿಷ್ಟ 91 ನಿಮಿಷ ದೀರ್ಘಾವಧಿ ಹೊಂದಿರುವ ಚಿತ್ರ ಮಾಡಿರಿ” ಎಂದು ಸಲಹೆ ನೀಡಿದರು.
'ಸಿಂಹತಲೆ' ಎನ್ನುವ ರೌಡಿ ಮತ್ತು 'ಮಾಸ್ಟರ್ ಮೈಂಡ್' ಎನ್ನುವ ಕಿಂಗ್ ಮೇಕರ್ ನಡುವೆ ನಡೆಯುವ ರಾಜಕೀಯ ಮತ್ತು ರೌಡಿಸಂಗೆ ಸಂಬಧಿಸಿದ ಕತೆ ಈ ಚಿತ್ರದಲ್ಲಿದೆ.
ಅನಂತುವಾಸುದೇವ್, ಹಿಮಾಮೋಹನ್, ಬಲರಾಂ, ಎ.ವಿ.ಸುರೇಶ್, ನಿಹಾಲ್‌ಗೌಡ, ಸದಾನಂದಗೌಡ, ಕುಶಾಲ್ ಮುಂತಾದವರು ನಟಿಸಿದ್ದಾರೆ. ಸಂಗೀತ ಲಲಿತ್‌ಕ್ರಿಷ್, ಛಾಯಾಗ್ರಹಣ ಸಾವದ್.ಎಂ, ಸಂಕಲನ ಹರೀಶ್-ಕೃಷ್ಣ ಅವರದು. ಬೆಂಗಳೂರು, ದೇವನಹಳ್ಳಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಶೋಕ್.ಎನ್.ಶಿಂಧೆ ನಿರ್ಮಾಪಕರಾಗಿದ್ದಾರೆ.