
ಬಾಲಿವುಡ್ ನಲ್ಲಿ ಫರ್ಹಾನ್ ಅಖ್ತರ್ ಮತ್ತೆ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಜೋಡಿಯಲ್ಲಿ ಈ ಹಿಂದೆ ಒಂದು ಅದ್ಭುತವಾದ ಸಿನಿಮಾ ಇಡೀ ದೇಶಕ್ಕೆ ಪರಿಚಯಿಸಿದ್ದರು. ಫ್ಲೈಯಿಂಗ್ ಸಿಖ್ ಖ್ಯಾತಿಯ ದೇಶದ ಹಿರಿಯ ಕ್ರೀಡಾಪಟು ಮಿಲ್ಖಾ ಸಿಂಘ್ ಅವರ ಜೀವನದ ಬಗ್ಗೆ ಮಾಡಿದಂತಹ ಚಿತ್ರ ಭಾಗ್ ಮಿಲ್ಖಾ ಭಾಗ್. ಆ ಸಿನಿಮಾ ಅತ್ಯುತ್ತಮ ಪ್ರದರ್ಶನ ನೀಡಿದಂತಹ ಸಿನಿಮಾ. ಪ್ರತಿಯೊಬ್ಬನೂ ಮೆಚ್ಚುಗೆ ವ್ಯಕ್ತ ಪಡಿಸಿದಂತಹ ಸಿನಿಮಾ ಅದಾಗಿತ್ತು. ಈಗ ಮತ್ತೊಮ್ಮೆ ಅದೇ ಜೋಡಿ ಒಂದಾಗಿ ಮಾಡಿರುವಂತಹ ಸಿನಿಮಾ ತೂಫಾನ್.
ತೂಫಾನ್ ಚಿತ್ರದ ಟ್ರೇಲರ್ ಬಿಡುಗಡೆ ಆದಾಗ ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಇದು ಕೂಡ ಮತ್ತೊಬ್ಬ ಕ್ರೀಡಾಪಟುವಿನ ಕಥೆ ಆಗಿರಬಹುದಾ!?” ಎಂಬ ಪ್ರಶ್ನೆ ಕಾಡುತ್ತಿತ್ತು. ಚಿತ್ರದ ನಿರ್ದೇಶಕರು ತೂಫಾನ್ ಚಿತ್ರ ಯಾರದೇ ನಿಜ ಜೀವನದ ಕಥೆ ಅಲ್ಲ, ಒಬ್ಬ ಬಾಕ್ಸರ್ ನ ಬಗ್ಗೆ ಮಾಡಿದ ಕಾಲ್ಪನಿಕ ಕಥೆ ಎಂದು ಹೇಳಿದ್ದಾರೆ. ದೇಶದ ಯುವ ಜನತೆಗೆ ಸ್ಫೂರ್ತಿದಾಯಕವಾಗಿರಬೇಕು ಎಂಬ ಉದ್ದೇಶದಿಂದ ಮಾಡಿರುವ ಚಿತ್ರ ಇದು ಎಂಬ ಅಭಿಪ್ರಾಯ ಈ ಚಿತ್ರತಂಡ ನೀಡಿದೆ. ತೂಫಾನ್ ನೋಡಿದಾಗ ಅವರ ಉದ್ದೇಶ ಸಫಲವಾದಂತೆ ಅನಿಸುತ್ತದೆ.
ಒಬ್ಬ ಅನಾಥ ಮುಸ್ಲಿಂ ಯುವಕ, ಅವನ ಗಲ್ಲಿಯಲ್ಲಿ ಗುಂಡಾನಂತೆ ಇರುವವನು. ಹೊದೆದಾಟ, ಜಗಳ ಎಲ್ಲಾ ಅವನಿಗೆ ನಿತ್ಯದ ಕೆಲಸ ಆಗಿರುತ್ತದೆ. ಒಬ್ಬಳು ಡಾಕ್ಟರ್ ಹೇಳಿದ ಮಾತನ್ನು ಆತ ಗಂಭೀರವಾಗಿ ಸ್ವೀಕರಿಸಿ ತನಗೆ ಗೊತ್ತಿದ್ದ ಹೊಡೆದಾಟವನ್ನೇ ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸುತ್ತಾನೆ. ಬಾಕ್ಸಿಂಗ್ ಕಲಿಯಲು ಆರಂಭಿಸುತ್ತಾನೆ. ಆತನಿಗೆ ಹೇಳಿಕೊಡುವ ಬಾಕ್ಸಿಂಗ್ ಗುರು ಹಿಂದು ಆಗಿರುತ್ತಾನೆ. ಗುರು ಶಿಷ್ಯರ ಸಂಬಂಧ ಜಾತಿ-ಮತಗಳಿಗೆ ಸೀಮಿತವಾಗಿದ್ದಲ್ಲ, ಅದೆಲ್ಲವನ್ನು ಮೀರಿದ ಸಂಬಂಧ ಎನ್ನುವ ಸಂಗತಿಯನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ಗುರುವಿಗೆ ತನ್ನ ಶಿಷ್ಯನ ಮೇಲೆ ಅಪಾರ ನಂಬಿಕೆ ಅವನು ಮುಂದೊಂದು ದಿನ ಭಾರತದ ಇತಿಹಾಸದಲ್ಲೇ ಅಗ್ರಗಣ್ಯನಾಗುತ್ತಾನೆ ಎಂದು ಅವನಿಗೆ ‘ತೂಫಾನ್’ ಎನ್ನುವ ಬಿರುದನ್ನು ನೀಡುತ್ತಾನೆ. ಹೇಗೆ ಗುರು-ಶಿಷ್ಯರ ನಡುವೆ ಜಾತಿ ಅಡ್ಡಿಯಾಗದೋ ಅದೇ ರೀತಿ ಪ್ರೀತಿಯ ವಿಷಯದಲ್ಲಿ ಕೂಡ ಜಾತಿ ಅಡ್ಡಿಯಾಗುವುದಿಲ್ಲ. ಪ್ರೀತಿಗೆ ಬೇಕಾಗಿರುವುದು ಶುದ್ಧ ಹೃದಯ ಮಾತ್ರ ಎಂಬುದನ್ನು ಕೂಡ ತೋರಿಸಲಾಗಿದೆ. ಅನಿವಾರ್ಯ ಕಾರಣಗಳಿಂದ ಅವನನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಲಾಗತ್ತದೆ. ಅವನ ಚಾಂಪಿಯನ್ ಆಗುವ ಕನಸು ಅರ್ಧಕ್ಕೆ ಉಳಿಯುತ್ತದೆ. ಅಲ್ಲಿಂದ ಮುಂದೆ ಚಿತ್ರ ರೋಮಾಂಚನಗೊಳ್ಳುತ್ತದೆ. ಅವನ ಬ್ಯಾನ್ ಅವಧಿ ಮುಗಿಯುವ ವೇಳೆಗೆ ಅವನು ಬಾಕ್ಸಿಂಗ್ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಆದರೂ ತಾನು ತನಗಿಂತ ಹೆಚ್ಚು ಪ್ರೀತಿಸುವ ಹೆಂಡತಿಗೋಸ್ಕರ ಮತ್ತೊಮ್ಮೆ ಕಷ್ಟಪಟ್ಟು ತರಬೇತಿಯನ್ನು ಸ್ವತಃ ತಾನೆ ಪಡೆದು ಮತ್ತೊಮ್ಮೆ ಪಂದ್ಯಕ್ಕಿಳಿಯುತ್ತಾನೆ.
ಮನಸ್ಸಿದ್ದರೆ ಮಾರ್ಗ ಎಂಬ ಮಾತಿಗೆ ಆದರ್ಶ ಕಥೆಯಾಗಿದೆ ತೂಫಾನ್. ಅವನು ಪಡುವ ಕಷ್ಟಗಳು, ಅವನಿಗಿರುವ ಶ್ರದ್ಧೆ, ನಿಯತ್ತು, ಯಾವುದೇ ಸಾಧನೆಗೆ ಗುರು ಎಷ್ಟು ಮುಖ್ಯ, ತನ್ನವರ ಬೆಂಬಲ, ಸಹಕಾರ ಎಷ್ಟು ಅಗತ್ಯ, ನಮ್ಮಲ್ಲಿರುವ ಪ್ರತಿಭೆಗೆ ಸರಿಯಾಗಿ ದಿಕ್ಕು ತೋರಿಸುವ ಗುರುವಿನ ಅವಶ್ಯಕತೆ, ಹಾಗು ಹಲವಾರು ಸಂದರ್ಭಕ್ಕೆ ಸರಿಯಾಗಿ ಹೊಂದುವ ಹಾಡುಗಳನ್ನೊಳಗೊಂಡ ಸ್ಫೂರ್ತಿದಾಯಕ ಸಿನಿಮಾ ತೂಫಾನ್ ಎನ್ನಬಹುದು.