ಚಿತ್ರ : ಇಕ್ಕಟ್
ನಿರ್ದೇಶನ: ಇಶಾಮ್ ಖಾನ್, ಹಸೀನ್ ಖಾನ್
ನಿರ್ಮಾಣ: ಪವನ್ ಕುಮಾರ್
ತಾರಾಗಣ: ಡಾ. ನಾಗಭೂಷಣ್, ಭೂಮಿ ಶೆಟ್ಟಿ, ಸುಂದರ್ ವೀಣಾ, ಆರ್.ಜೆ. ವಿಕ್ಕಿ
ಪ್ರಮೋದ ಹೆಗಡೆ
ಟ್ರೆಂಡಿಂಗ್ ವಿಷಯವಿರುವ ಸಿನಿಮಾ ಇಕ್ಕಟ್. ಕಳೆದ ವರ್ಷದ ಲಾಕ್ ಡೌನ್ ಪ್ರತಿಯೊಬ್ಬನ ಜೀವನದಲ್ಲಿ ಒಂದು ಹೊಸ ತಿರುವನ್ನೆ ನೀಡಿದೆ. ಅಂದುಕೊಂಡಿದ್ದೆಲ್ಲ ತಲೆಕೆಳಗೆ ಆಗಿರುವ ಸುಮಾರು ವಿಷಯಗಳು ಪ್ರತಿಯೊಬ್ಬನ ಅನುಭವಕ್ಕೆ ಬಂದಿದೆ. ಆದರೆ ಅದೆಲ್ಲವು ಕೇವಲ ನಮ್ಮ ನಮ್ಮ ಮನದಲ್ಲಿ, ಮಾತುಗಳಲ್ಲಿ ಉಳಿದುಕೊಂಡಿತ್ತು. ಲಾಕ್ ಡೌನ ಅನುಭವವನ್ನು ಒಂದು ಚಿತ್ರವನ್ನು ಮಾಡಿ ಅದನ್ನು ಪ್ರತಿಯೊಬ್ಬನು ನೋಡುವಂತೆ, ತಮ್ಮ ಅನುಭವವನ್ನು ಅದರ ಜೊತೆಯಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದ ಇಶಾಮ್ ಮತ್ತು ಹಸೀನ್ ಖಾನ್ ನಿರ್ದೇಶಿಸಿದ ಚಿತ್ರವೇ ಇಕ್ಕಟ್.
ನಗರದಲ್ಲಿರುವ ಒಂದು ಮಧ್ಯಮ ವರ್ಗದ ಕುಟುಂಬದ ಸ್ಥಿತಿಯನ್ನು ತೋರಿಸುವುದರ ಮೂಲಕ ಶುರುವಾಗುವ ಸಿನಿಮಾ. ಸಂಸಾರದ ಜಂಜಾಟಗಳಿಂದ ಸೋತು ಗಂಡ ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ಸಹಿಸಿಕೊಳ್ಳಲು ಕಷ್ಟವಾಗಿ ಇಬ್ಬರೂ ವಿಚ್ಛೇದನವನ್ನು ಪಡೆಯುವ ನಿರ್ಧಾರಕ್ಕೆ ಬರುವ ವೇಳೆಗೆ ಭಾರತದ ಪ್ರಧಾನಿಯವರು ಭಾರತದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿಬಿಡುತ್ತಾರೆ. ನಂತರ ಅವರಿಬ್ಬರ ಪಾಡು, ದೇವರೆ ಕಾಪಾಡುವ ಸ್ಥಿತಿಯಾಗುತ್ತದೆ. ಅದರ ಜೊತೆಯಲ್ಲಿ ಮನೆಗೆ ಬಂದ ಅನಿರೀಕ್ಷಿತ ಅತಿಥಿಯ ಗೋಳು ಸುಧಾರಿಸುವುದೇ ಒಂದು ದೊಡ್ಡ ಕಾರ್ಯಕ್ರಮವಾಗುತ್ತದೆ. ಇನ್ನೊಂದು ವಿಶೇಷ ವ್ಯಕ್ತಿಯ ಆಗಮನ ಚಿತ್ರದಲ್ಲಿ ಹೊಸರೂಪವನ್ನೇ ನೀಡುತ್ತದೆ.
ಹೇಗೆ ಗಂಡ-ಹೆಂಡತಿಯರ ನಡುವೆ ಸಣ್ಣ ಸಣ್ಣ ವಿಷಯಗಳಿಗೆ ಮನಸ್ತಾಪ ಉಂಟಾಗುತ್ತದೆ, ಮತ್ತು ಅದು ಜಗಳವಾಗಿ ಬದಲಾಗುವುದನ್ನು ಹಾಸ್ಯಮಯವಾಗಿ ತೋರಿಸುವುದರ ಜೊತೆಗೆ ಅದರ ಹಿಂದಿರುವ ಭಾವನೆ ಪ್ರತಿಯೊಬ್ಬನ ಮನ ಮುಟ್ಟುವಂತೆ ತೋರಿಸಿದ್ದಾರೆ. ಈ ಜೆನರೇಷನ್ ಯುವಕ, ಯುವತಿಯರು ಹೇಗೆ ಟೆಕ್ನಾಲಜಿಯ ಪ್ರಪಂಚದಲ್ಲಿ ಮುಳುಗಿದ್ದಾರೆ, ಹಗಲು ರಾತ್ರಿ ಟಿಕ್ ಟಾಕ್ ಅಲೆಯಲ್ಲಿ ಸಿಲುಕಿ ವಿಡಿಯೋ ಮಾಡುತ್ತಿರುತ್ತಾರೆ ಎಂಬ ಅಂಶವನ್ನು ಕೂಡ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಇದೆಲ್ಲದರ ಜೊತೆಗೆ ನೋಡುಗರಿಗೆ ಒಂದು ಸಣ್ಣ ಭಯಾನಕ ಝಲಕ್ ಕೂಡ ನೀಡಿದೆ ಇಕ್ಕಟ್.
ಸೀಮಿತವಾದ ತಾರಾಗಣವನ್ನಿಟ್ಟುಕೊಂಡು, ಸರಳವಾದ, ಸುಂದರವಾದ ಸಿನಿಮಾ ಮಾಡಲಾಗಿದೆ. ಹಿರಿಯ ನಟರಾದ ಸುಂದರ್ ಅವರು ನಿರ್ವಹಿಸಿದ ಕರ್ಣನ ಪಾತ್ರ ಗಮನ ಸೆಳೆಯುತ್ತದೆ. ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಭೂಮಿ ಶೆಟ್ಟಿಯ ಅಭಿನಯ ಕೂಡ ಅವರಿಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ರೂಪಿಸಿಕೋಳ್ಳಬಹುದು ಎಂಬತೆ ಕಾಣುತ್ತದೆ. ನಾಗಭೂಷಣ್ ಅವರು ಹಾಗು ಇನ್ನೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆರ್.ಜೆ. ವಿಕ್ಕಿ ಅವರ ನಟನೆ ಕೂಡ ಅಭಿನಾರ್ಹ. ಆಗಾಗ ನಗು ತರಿಸುವ ಉತ್ತಮ ಹಾಸ್ಯಮಯವಾದ ಸಂಭಾಷಣೆ ಹೊಂದಿದ ಸಿನಿಮಾ. ಕ್ಯಾಮರದಲ್ಲಿ ಲವಿತ್ ಕೂಡ ಒಳ್ಳೆಯ ಕೆಲಸವನ್ನು ಮಾಡಿರುವುದು ನಾವು ನೋಡಬಹುದು.
ಹೇಗೆ ಈ ಕಥೆಯ ಕಲ್ಪನೆ ಬಂದಿದ್ದು ಎಂದು ಕೇಳಿದಾಗ ಚಿತ್ರದ ನಿರ್ದೆಶಕರು “ ಲಾಕ್ ಡೌನ್ ಪ್ರಭಾವ ನಮ್ಮ ಮೇಲು ಆಗಿತ್ತು. ಕೊರೋನಾದ ಮುಂಚೆ ನಮಗೂ ಹಲವಾರು ಯೋಚನಗಳಿತ್ತು ಆದರೆ ಅದೇಲ್ಲವು ತಲೆಕೆಳಗಾಗಿತ್ತು. ನಾವು ಯಾವ ಕಥೆಯಲ್ಲಿ ಸಿನಿಮಾ ಮಾಡಬಹುದು ಎಂದು ಯೋಚಿಸುತ್ತಿದ್ದಾಗ, ಯಾಕೆ ನಾವು ಹೀಗೊಂದು ಕಥೆ ಬರೆಯಬಾರದು ಎಂಬ ಯೋಚನೆ ಬಂತು. ಆಗ ಹುಟ್ಟಿಕೊಂಡ ಕಥೆಯೇ ಇಕ್ಕಟ್” ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಚಿತ್ರದಲ್ಲಿ ನಾವು ಏನೋ ಭರ್ಜರಿ ನಿರೀಕ್ಷೆ ಇಟ್ಟುಕೊಂಡು ನೋಡುವ ಬದಲು ಇದನ್ನು ನೋಡುವಾಗ ನಾವು ನಮ್ಮ ಲಾಕ್ ಡೌನ್ ಅನುಭವವನ್ನು ನೆನಪು ಮಾಡಿಕೊಂಡು ನೋಡಿದರೆ ಚಿತ್ರಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಚಿತ್ರದ ಕೊನೆಯವರೆಗೂ ಉತ್ತಮ ಗತಿಯನ್ನು ಕಾಪಾಡಿಕೊಂಡು, ಕೊನೆಯಲ್ಲಿ ಹಾಸ್ಯದ ತಿರುವು ಕೂಡ ನೀಡಲಾಗಿದೆ. ಇದು ಕೇವಲ ಸಿನಿಮಾ ಅಲ್ಲ ಒಂದು ಅನುಭವ.