‘ಅಂಜನ್’ ಸಿನಿಮಾ ವಿಶೇಷ

ನಾಯಕ ನಟ ಅಂಜನ್ ನಟಿಸಿರುವ ಎರಡನೇ ಸಿನಿಮಾಕ್ಕೆ ‘ಅಂಜನ್’ ಎಂದೇ ನಾಮಕರಣ ಮಾಡಲಾಗಿದೆ. ಚಿತ್ರದ ಮೊದಲ ಮಾಧ್ಯಮಗೋಷ್ಠಿ ಸ್ವಾತಂತ್ರ್ಯ ದಿನದಂದು ನೆರವೇರಿತು.

“ಈ ಹಿಂದೆ ‘ವಜ್ರಾಸ್ತ್ರ’ ಚಿತ್ರದಲ್ಲಿ ನಟಿಸಿದ ಬಳಿಕ ನಾನು ನಟಿಸುತ್ತಿರುವ ಎರಡನೇ ಚಿತ್ರ ಇದು. ತಂದೆ, ತಾಯಿ ಇರದೆ ಬೆಳೆದ ತಂಗಿಯನ್ನು ಅಣ್ಣನಾದವನು ಯಾವ ಮಟ್ಟಕ್ಕೆ ಪ್ರೀತಿಸಬಹುದು ಎನ್ನುವುದನ್ನು ತೋರಿಸಿರುವ ಚಿತ್ರವೇ ಅಂಜನ್” ಎಂದರು ನಾಯಕ ಅಂಜನ್. ನಿರ್ದೇಶಕ ಆರ್ ಸಾಗರ್ ಅವರು ಮಾತನಾಡಿ “ನನಗೆ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿ ಪ್ರಶಸ್ತಿ ಪಡೆದ ಅನುಭವ ಇದೆ. ಆದರೆ ಕಮರ್ಷಿಯಲ್ ಮಾದರಿಯಾಗಿ ಚಿತ್ರವಾಗಿ ಇದು ನನ್ನ ಮೊದಲ ಅನುಭವ” ಎಂದರು. ನಿರ್ದೇಶಕರಾದ ಹ.ಸೂ‌ ರಾಜಶೇಖರ್, ತಮಿಳಿನ ಪ್ರವೀಣ್ ಗಾಂಧಿ ಜೊತೆಗೆ ಕೆಲಸ ಮಾಡಿದ ಅನುಭವ ಇರುವುದಾಗಿ ಸಾಗರ್ ಹೇಳಿದರು. ಅಂಜನ್ ಚಿತ್ರದಲ್ಲಿ ಎಲ್ಲ ರೀತಿಯ ಮಸಾಲೆಗಳಿವೆ. ಚಿತ್ರಮಂದಿರಗಳಲ್ಲಿ ನೂರು ಪರ್ಸೆಂಟ್ ಆಸನಗಳು ತೆರವಾದಾಗ ತಮ್ಮ ಚಿತ್ರ ತೆರೆಗೆ ಬರಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿಂದೆ ‘ಪ್ರತಿಬಿಂಬ’ ಎನ್ನುವ ಕಲಾತ್ಮಕ ಚಿತ್ರ ಮಾಡಿ ಪ್ರಶಸ್ತಿ ಪಡೆದಿದ್ದ ಸಾಗರ್ ಅವರು ಅಂಜನ್ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯೂ ಇವರದ್ದಾಗಿದೆ.

ನಿರ್ಮಾಪಕ ಪ್ರದೀಪ್ ಸೋನ್ಸ್ ಅವರು ಎರಡು ದಶಕಗಳ ಕಾಲ ವಿದೇಶದಲ್ಲಿದ್ದವರು ಪ್ರಸ್ತುತ ತವರಿಗೆ ಮರಳಿ ಸಿನಿಮಾ ಮಾಡುವ ಕನಸು ಕಂಡಿದ್ದಾರೆ. ಈ ಹಿಂದೆ ಸಿನಿಮಾವೊಂದರಲ್ಲಿ ಸ್ಕೂಲ್ ಮಾಸ್ಟರ್ ಆಗಿ ನಟಿಸಿದ್ದ ನಿರ್ಮಾಪಕರು ಈ‌ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿರುವುದಾಗಿ ತಿಳಿಸಿದರು. ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ನೀಡಿ ಕನ್ನಡ ಸಿನಿಮಾಗಳಿಂದಲೇ ಹೆಸರು ಮಾಡಬೇಕು ಎನ್ನುವ ಉದ್ದೇಶದಿಂದ ಚಿತ್ರ ನಿರ್ಮಾಣರಂಗ ಪ್ರವೇಶಿಸಿರುವುದಾಗಿ ಪ್ರದೀಪ್ ಸೋನ್ಸ್ ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ನಟ ಗುರುದತ್ ಮುಸುರಿ “ಇದು ಹಳ್ಳಿ ಬ್ಯಾಕ್ ಡ್ರಾಪ್ ಸ್ಟೋರಿ” ಎಂದು ಮಾಹಿತಿ ನೀಡಿದ್ದಾರೆ.

ದರ್ಶನ್ ಅವರ ಹಾರೈಕೆ.!

ಚಿತ್ರದ ಪೋಸ್ಟರ್ ನೋಡಿದ ಒಂದಷ್ಟು ಮಂದಿ ‘ಕರಿಯ’ ಚಿತ್ರದ ದರ್ಶನ್ ಪೋಸ್ಟರ್ ನೋಡಿದ ಅನಭುವ ಆಗುತ್ತಿದೆ ಎಂದಿದ್ದಾರೆ. ನಾನು ಈ ಹಿಂದೆ ದರ್ಶನ್ ಅವರಿಗೆ ಜಿಮ್ ಟ್ರೇನರ್ ಆಗಿದ್ದೆ. ಹೀರೋ ಆಗುವುದಾಗಿ ತಿಳಿದಾಗ ಶುಭ ಕೋರಿದ್ದರು ಎಂದು ನೆನಪಿಸಿಕೊಂಡ ಅಂಜನ್ ಚಿತ್ರದ ಬಗ್ಗೆ ಸಹಜ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

Recommended For You

Leave a Reply

error: Content is protected !!