ಎ.ಪಿ. ಅರ್ಜುನ್ ನಿರ್ದೇಶಿಸಿದ ‘ಅದ್ಧೂರಿ’ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ನಟ ಧ್ರುವ ಸರ್ಜ. ಆ ಕಾಲಕ್ಕೆ ‘ಅದ್ದೂರಿ’ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತ್ತು. ಇದೀಗ ಅದೇ ಜೋಡಿ ಮತ್ತೆ ಒಂದಾಗಿದೆ. ಹೊಸ ಸಿನಿಮಾದ ಹೆಸರು ‘ಮಾರ್ಟಿನ್’.
ನಿರ್ದೇಶಕ ಅರ್ಜುನ್ ಮತ್ತು ಧ್ರುವ ಅವರ ಸಂಗಮದ ಚಿತ್ರದ ಮುಹೂರ್ತವನ್ನು ಸ್ವಾತಂತ್ರ್ಯ ದಿನಾಚರಣೆಯ ದಿನ ಮಾಡಲಾಗಿದೆ. ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಮುಖ್ಯಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಹಾರೈಸಿದ್ದಾರೆ.
ಈ ಹಿಂದೆ ಧ್ರುವ ಮತ್ತು ನಂದಕಿಶೋರ್ ಒಂದಾಗಿ ‘ದುಬಾರಿ’ ಅನ್ನೋ ಸಿನಿಮಾವನ್ನು ಘೋಷಣೆ ಮಾಡಿದ್ದರು. ಆದರೆ, ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಅದನ್ನು ಶುರು ಮಾಡುವುದು ಕಷ್ಟವಾಗಿದೆ. ಹಾಗಾಗಿ, ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರು ಈಗ ಅರ್ಜುನ್-ಧ್ರುವ ಕಾಂಬಿನೇಷನ್‌ನಲ್ಲಿ ‘ಮಾರ್ಟಿನ್’ ಶುರು ಮಾಡಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ ಅನ್ನೋದು ವಿಶೇಷ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೆ ಹೊಂದಿಕೊಳ್ಳುತವಂತಹ ಕಲಾವಿದರು ಇದರಲ್ಲಿ ಇರುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
‘ಆ್ಯಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಹೊಸ ಮಾದರಿಯ ಮೇಕಿಂಗ್ ಇರಲಿದೆ. “ನಾನು ಫೆಬ್ರವರಿಯಲ್ಲಿ ನಿರ್ಮಾಪಕರಿಗೆ ಜೊತೆಯಾದೆ. ಅಂದಿನಿಂದಲೂ ಕಥೆಯ ಮೇಲೆ ವರ್ಕ್ ಮಾಡಿದ್ದೇವೆ. ಕಥೆಯು ಎಲ್ಲ ಕಡೆಗೆ ಸಲ್ಲುವುದರಿಂದ, ಬೇರೆ ಬೇರೆ ಭಾಷೆಗಳಲ್ಲೂ ಮಾಡುವುದಕ್ಕೆ ಮುಂದಾಗಿದ್ದೇವೆ. ಆಗಸ್ಟ್ 18ರಿಂದ ಶೂಟಿಂಗ್ ನಿರಂತರವಾಗಿ ನಡೆಯಲಿದೆ. ಬೆಂಗಳೂರು ಹೊರವಲಯದಲ್ಲಿ 3 ಎಕರೆ ಜಾಗದಲ್ಲಿ ಬೃಹತ್ ಜೈಲಿನ ಸೆಟ್ ಹಾಕಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಎ.ಪಿ. ಅರ್ಜುನ್.
”ನಾನು ಸದಾ ಇದು ನನ್ನ ಮೊದಲ ಸಿನಿಮಾ ಎಂದುಕೊಂಡೇ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ತಡವಾಗುವುದಿಲ್ಲ. ಡಿಸೆಂಬರ್ ವೇಳೆಗೆ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಳಿಸಲಿದ್ದೇವೆ. ಭಾರತ ಮಾತ್ರವಲ್ಲದೆ, ವಿದೇಶದಲ್ಲಿಯೂ ಶೂಟಿಂಗ್ ಮಾಡಲಿದ್ದೇವೆ. ಈ ಬಾರಿ ನನ್ನ ಡೈಲಾಗ್ ಡೆಲಿವರಿ ಕೂಡ ಬದಲಾಗಲಿದೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಸಾಕಷ್ಟು ಬದಲಾವಣೆ ಇರಲಿದೆ” ಎನ್ನುತ್ತಾರೆ ಧ್ರುವ ಸರ್ಜಾ.
ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿರುವ ಮಣಿಶರ್ಮಾ ಈ ಸಿನಿಮಾಗೆ ಸಂಗೀತ ನಿರ್ದೇಶ ಮಾಡುತ್ತಿದ್ದಾರೆ. ಛಾಯಾಗ್ರಹಣವನ್ನು ಸತ್ಯ ಹೆಗಡೆ ಮಾಡುತ್ತಿದ್ದಾರೆ. ಉದಯ್ ಕೆ. ಮೆಹ್ತಾ ಅದ್ದೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೈಟಲ್ ಟೀಸರ್ ಭಾರಿ ವೈರಲ್ ಆಗಿದ್ದು, ಮಿಲಿಯನ್‌ಗಟ್ಟಲೇ ವ್ಯೂವ್ಸ್ ಪಡೆದುಕೊಂಡಿದೆ.