ನಿರ್ದೇಶಕ ಗುರುಪ್ರಸಾದ್ ತಮಗೆ ಹೆಸರು ತಂದುಕೊಟ್ಟ ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಚಿತ್ರದ ನಾಯಕನ ಜೊತೆಗೆ ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ಒಂದಾಗಿರುವ ಚಿತ್ರ ‘ರಂಗನಾಯಕ’. ಅದರ ಚಿತ್ರೀಕರಣದ ಜಾಗದಲ್ಲಿ ನಡೆಸಲಾದ ಮಾಧ್ಯಮಗೋಷ್ಠಿಯ ವಿವರಗಳು ಹೀಗಿವೆ.
ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಯಶಸ್ವಿಯಾಗಿರುವ ಕಾರಣ ಅದೇ ನಿರೀಕ್ಷೆ ಸದ್ಯ ಶೂಟಿಂಗ್ ಮಾಡಿಕೊಳ್ಳುತ್ತಿರುವ ‘ರಂಗ ನಾಯಕ’ ಸಿನಿಮಾದ ಮೇಲೆಯೂ ಇದೆ. ಇತ್ತೀಚೆಗೆ ಈ ಚಿತ್ರದ ಹಾಡೊಂದಕ್ಕೆ ‘ಸ್ಟುಡಿಯೋ ನೈನ್’ ಸಿನಿಮಾಸ್ ನಲ್ಲಿ ಸುಂದರವಾಗಿ ನಿರ್ಮಿಸಲಾದ ಅರಮನೆ ಹಾಗೂ ಉದ್ಯಾನವನದಲ್ಲಿ ಚಿತ್ರೀಕರಣ ಮಾಡಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕ ಗುರು ಪ್ರಸಾದ್ ಮಾತನಾಡುತ್ತಾ “ನಾನು ಜಗ್ಗೇಶ್ ಸಿಕ್ಕಾಗೆಲ್ಲಾ ರಂಗ ಗೀತೆಗಳ ಕುರಿತಾಗಿ ಮಾತನಾಡುತ್ತಿದ್ದೆವು. ಅವರು ರಂಗಗೀತೆಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇದರಮೇಲೆ ಒಂದು ಸಿನಿಮಾ ಮಾಡುವ ಯೋಚನೆ ಬಂದು ಕಥೆ ಮಾಡಿದೆ. ಅದು ಹೆಚ್ಚಿನ ಬಜೆಟ್ ಕೇಳುತ್ತಿತ್ತು. ಹಾಗಾಗಿ ಒಳ್ಳೆಯ ನಿರ್ಮಾಪಕರನ್ನು ನೋಡುವಂತೆ ಸಂಗೀತ ನಿರ್ದೇಶಕ ಅನೂಪ್ ಗೆ ಹೇಳಿದ್ದೆ. ಅವರು ವಿಖ್ಯಾತ್ ನನ್ನು ಪರಿಚಯ ಮಾಡಿಸಿದರು. ಕಥೆ ಕೇಳಿದ ವಿಖ್ಯಾತ್ ಮತ್ತು ಅವರ ತಂಡ ಸಿನಿಮಾ ಮಾಡಲು ಮುಂದಾದರು. ಹೀಗೆ ಶುರುವಾದ ಸಿನಿಮಾ ಕೊರೋನಾದಿಂದಾಗಿ ಲೇಟ್ ಆಗಿದೆ. ಇದೀಗ ಅರಮನೆ ಸೆಟ್ ಹಾಕಿ ಶೂಟ್ ಮಾಡಲಾಗುತ್ತಿದೆ.
ಇದೊಂದು ಭಿನ್ನವಾದ ಕಥೆ ಒಳಗೊಂಡ ಸಿನಿಮಾ. ನನ್ನ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಮೂರನೇ ಚಿತ್ರ. ಟಾಕಿ ಅರಮನೆಯಲ್ಲಿ ನಡೆಯಲಿದೆ. ಈ ಬೃಂದಾವನ ಸೆಟ್ ನಲ್ಲಿ ‘ಎನ್ನ ಮನದರಸಿ …’ ಎಂಬ ಸಾಂಗ್ ಶೂಟ್ ಮಾಡಲಾಗುತ್ತಿದೆ. ಈ ಗೀತೆಗೆ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡುತ್ತಿದ್ದು ಎಲ್ಲಾ ಸಾಂಗ್ ಗು ಅವರೆ ಕೊರಿಯೋಗ್ರಫಿ ಮಾಡಲಿದ್ದಾರೆ. ಇನ್ನು ಚಿತ್ರ ಅದ್ಭುತವಾಗಿ ಬರಲು ಕಲಾನಿರ್ದೇಶಕ ಕುಲಕರ್ಣಿ ತುಂಬಾ ಎಫರ್ಟ್ ಹಾಕಿದ್ದಾರೆ. ಇದೊಂದು ತುಂಟ ರಾಜನ ಕಥೆ” ಎಂದು ಸಿನಿಮಾ ಸೆಟ್ಟೇರಿದ ಬಗೆ ಹಾಗೂ ಸಾಂಗ್ ವಿಶೇಷತೆ ಬಗ್ಗೆ ವಿವರಿಸಿದರು.
ಚಿತ್ರದ ಮೂಲಕ ಕನ್ನಡದಲ್ಲಿ ಮತ್ತೋರ್ವ ರಚಿತಾ ತಾರೆಯಾಗುವ ನಿರೀಕ್ಷೆ ಇದೆ. ಈ ಹಿಂದೆ ಕನ್ನಡದ ಒಂದು ಧಾರಾವಾಹಿ ಸೇರಿದಂತೆ ತಮಿಳು ಧಾರಾವಾಹಿಗಳ ಮೂಲಕ ಜನಪ್ರಿಯವಾಗಿರುವ ನಟಿ ರಚಿತಾ ಮಹಾಲಕ್ಷ್ಮಿ ಚಿತ್ರದಲ್ಲಿ ಜಗ್ಗೇಶ್ ಗೆ ಜೋಡಿಯಾಗಿದ್ದಾರೆ. “ನಾನು ಕನ್ನಡದವಳೆ. ಬಾಂಬೆಯಲ್ಲಿದ್ದು ಸೀರಿಯಲ್ ನಲ್ಲಿ ನಟನೆ ಮಾಡಿದ್ದೇನೆ. ನನಗೆ ಹಳೆ ಸಿನಿಮಾ ಮತ್ತು ಗೀತೆಗಳನ್ನು ನೋಡಿದಾಗ, ಕೇಳಿದಾಗ ಆ ಕಾಲದಲ್ಲಿ ನಾನು ಹುಟ್ಟಬೇಕಿತ್ತು ಎಂದು ಅನಿಸುತ್ತಿತ್ತು. ಇದೀಗ ಲಕ್ಕಿ ಫೀಲ್ ಆಗುತ್ತಿದೆ. ಆ ಕಾಲದ ಮಾದರಿಯ ಸಿನಿಮಾ ಮತ್ತು ಹಾಡಿನಲ್ಲಿ ನಟಿಸುವುದು ಖುಷಿ ಕೊಟ್ಟಿದೆ. ನನ್ನ ಮೊದಲ ಸಿನಿಮಾದಲ್ಲೇ ಜಗ್ಗೇಶ್ ಜೊತೆ ಅಭಿನಯ ಮಾಡುತ್ತಿರುವುದು ಇನ್ನೂ ಖುಷಿ ಕೊಟ್ಟಿದೆ” ಎಂದಿದ್ದಾರೆ.
ನಾಯಕ ಜಗ್ಗೇಶ್ ಅವರ ಪ್ರಕಾರ “ಎರಡು ವರ್ಷಗಳ ಕಾಲ ಕಲಾವಿದರ ಬದುಕನ್ನು ಕೊರೋನಾ ನುಂಗಿದೆ. ಕಲಾವಿದ ಯಾವಾಗಲೂ ಬಣ್ಣ ಹಚ್ಚುತ್ತಲೇ ಇರಬೇಕು ಆವಾಗಲೇ ಖುಷಿ. ಈ ಗ್ಯಾಪ್ ನಲ್ಲಿ ನಂಗೆ ನಾಲ್ಕು ಸಿನಿಮಾಗಳ ಅವಕಾಶ ಬಂದಿವೆ. ಈ ಸಿನಿಮಾ ಬಗ್ಗೆ ಕೊರೋನಾ ಸಂದರ್ಭದಲ್ಲಿ ಮಾಹಿತಿ ಇರಲಿಲ್ಲ. ನಂತರ ಗುರು ಅರಮನೆ ಫೋಟೋಗ್ರಫಿ ತೋರಿಸಿದರು. ಅದನ್ನು ನೋಡಿ ನಂಗೆ ತುಂಬಾ ಖುಷಿ ಆಯ್ತು. ಮಠ, ಎದ್ದೇಳು ಮಂಜುನಾಥ ಹೇಗೆ ಜನರನ್ನು ರಂಜಿಸಿದ್ದವೂ ಹಾಗೆಯೇ ರಂಗನಾಯಕ ಕೂಡ ಮನಸ್ಸಿನಲ್ಲಿ ಉಳಿಯುವಂಥ ಸಿನಿಮಾ. ಪೌರಾಣಿಕ ಗೆಟಪ್ ಪಾತ್ರವಿದ್ದು ಹಾಸ್ಯ ಚೆನ್ನಾಗಿ ಮೂಡಿಬರುತ್ತಿದೆ.
ಚಿತ್ರದಲ್ಲಿ ತುಂಬಾ ಕಾಮಿಡಿ ಇರಲಿದೆ. ನಂಗೆ ಹೆಚ್ಚಾಗಿ ಖುಷಿ ಕೊಟ್ಟದ್ದು ಎಂದರೆ ಸುಮಾರು 150 ರಂಗ ಕಲಾವಿದರನ್ನು ಇದರಲ್ಲಿ ಬಳಸಿಕೊಂಡದ್ದು. ಅವರೆಲ್ಲಾ ಒಳ್ಳೆ ಪ್ರತಿಭೆಗಳು. ಅಲ್ಲದೆ ನಾನು ಒಂದು ಒಳ್ಳೆಯ ಪ್ರಾಜೆಕ್ಟ್ ನಲ್ಲಿ ಇದ್ದೇನೆ ಎಂಬ ಖುಷಿ ತುಂಬಾ ಇದೆ” ಎಂದರು. ಇದೇ ಸಂದರ್ಭದಲ್ಲಿ ನಿರ್ಮಾಪಕರಾದ ವಿಖ್ಯಾತ್ ದೇವೇಂದ್ರ ರೆಡ್ಡಿ, ಸಹ ನಿರ್ಮಾಪಕರಾದ ಪ್ರಶಾಂತ, ಸುರೇಶ್ ಹಾಜರಿದ್ದರು. ವೇದಿಕೆಯಲ್ಲಿ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಛಾಯಾಗ್ರಾಹಕ ಅಶೋಕ ಸಂಕಲನಕಾರ ಕೆಂಪರಾಜು ಹಾಗೂ ಕಲಾ ನಿರ್ದೇಶಕ ಕುಲಕರ್ಣಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.