
ನವನಟ ಅಭಯ್ ನಾಯಕರಾಗಿ ಕನ್ನಡ ಚಿತ್ರರಂಕ್ಕೆ ಪದಾರ್ಪಣೆ ಮಾಡುತ್ತಿರುವ ಸಿನಿಮಾ ‘ಮನಸಾಗಿದೆ’ ಚಿತ್ರತಂಡದ ಮಾಧ್ಯಮಗೋಷ್ಠಿ ಇತ್ತೀಚೆಗೆ ನೆರವೇರಿತು.
ನಾಯಕ ಅಭಯ್ ಮಾತನಾಡಿ, “ಚಿತ್ರೀಕರಣ ಚೆನ್ನಾಗಿ ಮೂಡಿ ಬಂದಿದೆ. ಇದರಲ್ಲಿ ಕಾಮಿಡಿ ಕಿಲಾಡಿ ತಂಡದ ಎಂಟರ್ಟೇನ್ಮೆಂಟ್ ಇರುತ್ತದೆ. ಥ್ರಿಲ್ಲರ್ ಮಂಜು ಮಾಸ್ಟರ್ ಎರಡು ಫೈಟ್ ಎರಡು ಚೇಸ್ ಅದ್ಭುತವಾಗಿ ಮಾಡಿಕೊಟ್ಟಿದ್ದಾರೆ. ರಾಜು ಮಾಸ್ಟರ್ ಎಣ್ಣೆ ಸಾಂಗ್ ಮತ್ತು ಡ್ಯೂಯೆಟ್ ಸಾಂಗ್ ಚೆನ್ನಾಗಿ ತೆಗೆದಿದ್ದಾರೆ. ಕಾಲೇಜ್ ಟೈಮಲ್ಲಿ ಎಲ್ಲ ಎಲಿಮೆಂಟ್ಸ್ ತುಂಬಿರುವ ಪಾತ್ರ ನನ್ನದು. ಇಬ್ಬರು ನಾಯಕಿಯರು ಕೂಡ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ನನ್ನ ತಂದೆ ಮತ್ತು ತಮ್ಮ ಕೂಡ ಚಿತ್ರದಲ್ಲಿ ನಟಿಸಿರುವುದು ವಿಶೇಷ ಎಂದರು.
ಸಿನಿಮಾದಲ್ಲಿ ಅಭಯ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಆದಿರಾ “ನಿರ್ದೇಶಕರು ನನ್ನನ್ನು ನಂಬಿ ಪಾತ್ರಕೊಟ್ಟಿದ್ದಾರೆ. ಆದರೆ ಹೇಗೆ ನಟಿಸಬೇಕು ಎಂದು ಅವರೇ ನಟಿಸಿ ತೋರಿಸುತ್ತಿದ್ದುದು ತುಂಬ ಸಹಾಯವಾಗಿತ್ತು. ಚಿತ್ರದಲ್ಲಿ ಸಿಂಚನಾ ಎನ್ನುವ ಪಾತ್ರ ಮಾಡಿದ್ದೇನೆ. ಆಕೆ ಮುದ್ದಾದ, ಲವ್ಲಿ, ಎಮೋಶನಲ್ ಹುಡುಗಿ ಆಗಿರುತ್ತಾಳೆ” ಎಂದರು.
“ಚಿತ್ರದಲ್ಲಿ ನಾನು ಅಂಕಿತ ಎನ್ನುವ ಕಾಲೇಜ್ ಹುಡುಗಿಯ ಪಾತ್ರ ಮಾಡಿದ್ದೇನೆ” ಎಂದು ಮಾತು ಶುರು ಮಾಡಿದ ಮೇಘಾ ಶ್ರೀ, ಆಕೆಗೆ ಲವ್ ಗಿಂತ ಬದುಕಿನ ಗುರಿಗಳೇ ಮುಖ್ಯವಾಗಿರುತ್ತದೆ. ಏನಾದರೂ ಸಾಧಿಸಬೇಕು ಎನ್ನುವ ನಿರೀಕ್ಷೆಯಲ್ಲಿರುತ್ತಾಳೆ ಎಂದರು. ಜೊತೆಗೆ
“ನಾನು ಕೂಡ ‘ಮನಸಾಗಿದೆ’ ತಂಡದಲ್ಲಿ ಇರುವುದಕ್ಕೆ ಖುಷಿ ಇದೆ. ಕೋವಿಡ್ ಕಾರಣದಿಂದ ಎಲ್ಲವೂ ನಿಂತು ಹೋಗಿದ್ದಾಗಲೂ ವೇಗವಾಗಿ ಚಿತ್ರ ಮುಗಿಸಿದ ಕೀರ್ತಿ ನಮ್ಮ ತಂಡದ್ದು.
ನಿಜಕ್ಕೂ ತುಂಬ ವೇಗದ ತಂಡ. ಯಾಕೆಂದರೆ ಮಾರ್ಚ್ ನಲ್ಲಿ ಚಿತ್ರೀಕರಣ ಶುರುಮಾಡಿ ಈಗಾಗಲೇ ಶೂಟಿಂಗ್ ಪೂರ್ತಿ ಮಾಡಿದೆ. ಅದರಲ್ಲಿಯೂ ಒಬ್ಬ ಹೊಸ ಹೀರೋನ ಚಿತ್ರವಾದ ಕಾರಣ ನಿಧಾನವೇ ಆಗಬಹುದು ಎಂದುಕೊಂಡಿದ್ದೆ. ಆದರೆ ಇದು ನಾನು ಕೆಲಸದ ಮಾಡಿದ ಚಿತ್ರ ತಂಡಗಳಲ್ಲೇ ಹೆಚ್ಚು ವೇಗದಿಂದ ಕಾರ್ಯನಿರ್ವಹಿಸಿರುವ ತಂಡ ಎಂದು ಹೇಳಲೇಬೇಕು. ಛಾಯಾಗ್ರಾಹಕರು ನನ್ನನ್ನು ಸೇರಿದಂತೆ ಕಲಾವಿದರನ್ನು ತುಂಬ ಚೆನ್ನಾಗಿ ತೋರಿಸಿದ್ದಾರೆ” ಎಂದು ಸಂತೃಪ್ತಿ ವ್ಯಕ್ತಪಡಿಸಿದರು.
ನಿರ್ಮಾಪಕ ಚಂದ್ರಶೇಖರ್ ಎಸ್ ಅವರು ಮಾತನಾಡಿ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಮೂರು ಶೆಡ್ಯೂಲ್ ಮೂಲಕ ಸಿನಿಮಾ ಚಿತ್ರೀಕರಣ ಪೂರ್ತಿ ಮಾಡಿದ್ದೇವೆ ಎಂದರು. ಮಳೆಯಿದ್ದರೂ ಅದನ್ನೇ ಬಳಸಿಕೊಂಡು ಚಿತ್ರೀಕರಣ ಮಾಡಲಾಗಿದೆ. ಮಂಜಿನ ನಡುವೆಯೂ ಚೇಸಿಂಗ್ ದೃಶ್ಯ ಚಿತ್ರೀಕರಣ ಮಾಡಿರುವುದು ರಿಸ್ಕ್ ಆಗಿದ್ದರೂ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟ ಅವರು ಚಿತ್ರೀಕರಣ ನೆನೆದಂತೆ ನಡೆಯದಿದ್ದರೂ ಸುಸೂತ್ರವಾಗಿ ನೆರವೇರಿದೆ. ಅದಕ್ಕೆ ನಾಯಕ ಅಭಯ್ ಅದೃಷ್ಟವೇ ಕಾರಣ ಎಂದರು.