
ಸುದೀಪ್ ನಟಿಸಿರುವ ‘ವಿಕ್ರಾಂತ್ ರೋಣ’ ಚಿತ್ರವು ಫ್ಯಾಂಟಂ ಎನ್ನುವ ಹೆಸರಿದ್ದಾಗಿನಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಚಿತ್ರ. ನಿರ್ದೇಶಕ ಅನೂಪ್ ಭಂಡಾರಿಯವರು ಪ್ರತಿಯೊಂದು ಪಾತ್ರದ ಸನ್ನಿವೇಶಗಳ ಅನಾವರಣವನ್ನು ಸಣ್ಣಪುಟ್ಟ ವಿಡಿಯೋಗಳ ಮೂಲಕ ಮಾಡುತ್ತಿದ್ದರೆ ಅಭಿಮಾನಿಗಳ ಗುಂಡಿಗೆ ಸದ್ದು ತಾರಕಕ್ಕೇರುವಂತಿದೆ. ಇದೀಗ ಕಿಚ್ಚ ಸುದೀಪ್ ಅವರ ಜನ್ಮದಿನದ ಸಮಯದಲ್ಲಿ ಬಿಡುಗಡೆಗೊಂಡಿರುವ ಗ್ಲಿಂಪ್ಸ್ ಆ ಕುತೂಹಲವನ್ನು ನೂರ್ಮಡಿಗೊಳಿಸಿರುವುದು ಸತ್ಯ.
ಮೊದಲ ಲಾಕ್ಡೌನ್ ಬಳಿಕ ಶುರುವಾದ ಮೊದಲ ಮೆಗಾ-ಬಡ್ಜೆಟ್ ಚಿತ್ರ ಇದಾಗಿದ್ದು, ಚಿತ್ರತಂಡದ ಪ್ರತಿ ಘೋಷಣೆಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ‘ದಿ ಡೆಡ್ ಮಾನ್ಸ್ ಆಂಥಮ್’, ನಿರೂಪಕನ ಧ್ವನಿಯನ್ನು ಹಿಂಬಾಲಿಸುತ್ತ ಕಗ್ಗತ್ತಲೆಯ ಲೋಕದ ಒಡೆಯ, ಸುದೀಪ್ ಪಾತ್ರ ಶತ್ರುಗಳಿಗೆ ಭಯ ಹುಟ್ಟಿಸುವ ಸನ್ನಿವೇಶದೊಂದಿಗೆ ಶುರುವಾಗುತ್ತದೆ. ಗಮನ ಸೆಳೆಯುವ ದೃಶ್ಯಗಳು, ವಿಸ್ಮಯಗೊಳಿಸುವ ಹಿನ್ನೆಲೆ ಸಂಗೀತ, ಸುದೀಪ್ ರವರ ಖದರ್ ಗೆ ಪೂರಕವಾಗಿವೆ. ಈ ಎಲ್ಲಾ ಅಂಶಗಳಿಂದಾಗಿ, ಸೂಕ್ತ ಶೀರ್ಷಿಕೆಯೊಂದಿಗೆ ಇಂದು ರಿಲೀಸ್ ಆಗಿರುವ ‘ದಿ ಡೆಡ್ ಮಾನ್ಸ್ ಆಂಥಮ್’ ಅಭಿಮಾನಿಗಳ ಆಂಥಮ್ ಆಗಿದೆ.
“ವಿಕ್ರಾಂತ್ ರೋಣ ಪಾತ್ರದ ನಿಘೂಡತೆಯನ್ನು ಫಸ್ಟ್ ಗ್ಲಿಂಪ್ಸ್ ಅದ್ಭುತವಾಗಿ ಸೆರೆ ಹೆಡಿದಿದೆ. ಚಿತ್ರೀಕರಣದ ಸಮಯದಲ್ಲೇ ನನಗೆ ಇದರ ಮೇಲಿರುವ ಅಪಾರ ಪ್ರಮಾಣದ ನಿರೀಕ್ಷೆಯ ಬಗ್ಗೆ ಅರಿವಿತ್ತು. ಆದರೆ ಸುದೀಪ್ ರವರು ಈ ಪಾತ್ರವನ್ನು ಸಾಕಾರಗೊಳಿಸುತ್ತಿರುವುದು, ನನ್ನ ನಿರೀಕ್ಷಣೆಯನ್ನು ಇನ್ನೂ ಹೆಚ್ಚಾಗಿಸಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು,” ಎಂದು ಹಾರೈಸಿದ್ದಾರೆ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ.

ನಿರ್ಮಾಪಕರಾದ ಜಾಕ್ ಮಂಜುನಾಥ್ ರವರು, “ಸುದೀಪ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು, ವಿಕ್ರಾಂತ್ ರೋಣ ಫಸ್ಟ್ ಗ್ಲಿಂಪ್ಸ್ ನೊಂದಿಗೆ ವ್ಯಕ್ತ ಪಡಿಸುತ್ತಿದ್ದೇವೆ. ಎಲ್ಲರ ಕೈ ಕಟ್ಟುವಂತಹ ಸಂದರ್ಭದಲ್ಲಿ ನಾವು ಇಷ್ಟು ಸಕಾರಾತ್ಮಕವಾಗಿ ಮುನ್ನಡೆಯುತ್ತಿರುವುದೇ ಸಂತೋಷದ ವಿಷಯ. ಅವರ ಹುರುಪು, ಉತ್ಸಾಹ ಮತ್ತು ಸಿನೆಮಾ ಮಾಡುವ ಛಲಕ್ಕೆ ಯಾವುದೇ ಸಮಯದ ಪರೀಕ್ಷೆಯನ್ನು ತಡೆಯುವ ಶಕ್ತಿಯಿದೆ. ಇದೇ ವಿಕ್ರಾಂತ್ ರೋಣ ಚಿತ್ರವನ್ನು ವಿಶೇಷವಾಗಿಸುತ್ತದೆ” ಎಂದಿದ್ದಾರೆ.
ವಿಕ್ರಾಂತ್ ರೋಣ, ಒಂದು ಬಹುಭಾಷಾ ಆಕ್ಷನ್ ಅಡ್ವೆಂಚರ್ ಪ್ರಕಾರದ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3-D ಬಿಡುಗಡೆಯನ್ನು ಕಾಣಲಿದೆ. ಅನೂಪ್ ಭಂಡಾರಿಯವರ ನಿರ್ದೇಶನ, ಜಾಕ್ ಮಂಜುನಾಥ್ ಹಾಗು ಶಾಲಿನಿ ಮಂಜುನಾಥ್ ನಿರ್ಮಾಣ, ಅಲಂಕಾರ್ ಪಾಂಡಿಯನ್ ರವರ ಸಹ-ನಿರ್ಮಾಣವಿರುವ ಚಿತ್ರಕ್ಕೆ ಬಿ. ಅಜನೀಶ್ ಲೋಕ್ ನಾಥ್ ರವರು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಪ್ರಶಸ್ತಿ ವಿಜೇತರಾದ ಕಲಾ ನಿರ್ದೇಶಕ ಶಿವಕುಮಾರ್ ಹಾಗು ಛಾಯಾಗ್ರಾಹಕ ವಿಲಿಯಮ್ ಡೇವಿಡ್ ತಂಡದಲ್ಲಿರುವುದು ಇನ್ನಷ್ಟು ಸೊಬಗು ತಂದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗು ಜಾಕ್ವಲಿನ್ ಫೆರ್ನಾಂಡಿಸ್ ತಾರಾಗಣದಲ್ಲಿದ್ದಾರೆ.