ಪುರುಸೊತ್ತು ಮಾಡಿ ಟ್ರೇಲರ್ ನೋಡಿ!

ಬಿಡುಗಡೆಯ ಹೊಸ್ತಿಲಲ್ಲಿರುವ ಸಿನಿಮಾ ‘ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’. ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ನಟನೆಯ ಸಿನಿಮಾ ಇದು. ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವಿಶೇಷ ವರದಿ ಇಲ್ಲಿದೆ.

ಚಿತ್ರದಲ್ಲಿ ನಟಿಸಿರುವ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ನಟರು ತುಂಬಿದ್ದ ವೇದಿಕೆಯಲ್ಲಿ ಪರದೆಯ ಮೇಲೆ ಟ್ರೇಲರ್ ಬಿಡುಗಡೆಯಾದ ಬಳಿಕ ಹರಡಿಕೊಂಡಿದ್ದು ತುಸು ಮೌನ. ಅದಕ್ಕೆ ಕಾರಣ ಪರದೆಯ ಮೇಲೆ ಆಕರ್ಷಕ ಪಾತ್ರವಾಗಿ ಕಾಣಿಸಿರುವ ವಿಜಯ್ ಅವರ ನಟನೆಗೆ ಮೆಚ್ಚಿ ಚಪ್ಪಾಳೆ ತಟ್ಟುವುದೋ, ಅಥವಾ ಆ ಪಾತ್ರದೊಂದಿಗೆ ಅವರೂ ಮರೆಯಾಗಿದ್ದಾರೆ ಎಂದು ಕಂಬನಿ ಮಿಡಿಯುವುದೋ ಎಂದು ಅರ್ಥವಾಗದ ಕ್ಷಣ. ಕಾರ್ಯಕ್ರಮದ ಕೇಂದ್ರಬಿಂದುವಾಗಿರಬೇಕಿದ್ದ ಸಂಚಾರಿ ವಿಜಯ್ ಈ ಕ್ಷಣದಲ್ಲಿ ಇರಬೇಕಿತ್ತೆಂಬ ಆರ್ದ್ರ ಭಾವ ಚಿತ್ರ ತಂಡದಲ್ಲಿಯೂ ಇತ್ತು.

‘ಪುಕ್ಸಟ್ಟೆ ಲೈಫು’ ಅರವಿಂದ್ ಕುಪ್ಳೀಕರ್ ನಿರ್ದೇಶನದ ಚಿತ್ರ. ಖುದ್ದು ಸಂಚಾರಿ ವಿಜಯ್ ಬಹುವಾಗಿ ಮೆಚ್ಚಿಕೊಂಡು, ಲೀಡ್ ರೋಲನ್ನು ಆವಾಹಿಸಿಕೊಂಡು ನಟಿಸಿದ್ದ ಸಿನಿಮಾ ಇದು. ಟ್ರೇಲರ್ ಲಾಂಚ್ ನಲ್ಲಿ ಹಿರಿಯ ‌ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಬಿ ಜಯಶ್ರೀ ಮೊದಲಾದ ಅತಿಥಿಗಳ ಸಮ್ಮುಖದಲ್ಲಿ ಅರ್ಥವತ್ತಾಗಿ ನೆರವೇರಿತು. ಸಂಚಾರಿ ವಿಜಯ್ ಎಂಬ ಪ್ರತಿಭಾವಂತನ ಅಕಾಲಿಕ ನಿರ್ಗಮನಕ್ಕೆ ಮರುಗುತ್ತಲೇ ಈ ಟ್ರೈಲರ್ ಅನ್ನು ಲಾಂಚ್ ಆಯಿತು. ವೇದಿಕೆಯಲ್ಲಿ ಒಂದು ಆಸನವನ್ನು ಖಾಲಿ ಬಿಟ್ಟು ಅದನ್ನು ಸಂಚಾರಿಗೇ ಸೀಮಿತ ಎಂಬಂತೆ ಬಿಂಬಿಸಿದ್ದು ಅದೊಂದು ತೆರನಾದ ಭಾವುಕ ವಾತಾವರಣಕ್ಕೂ ಕಾರಣವಾಯಿತು. ನಟ ರಂಗಾಯಣ ರಘು ಸಂಚಾರಿ ವಿಜಯ್ ಅವರನ್ನು ಬಹು ಕಾಲದಿಂದ ಹತ್ತಿರದಿಂದ ಬಲ್ಲವರು. ವಿಜಯ್ ಎಂಬ ಪ್ರತಿಭೆ ನಟನಾಗಿ ಪಳಗಿಕೊಂಡಿದ್ದು ಅವರ ಪತ್ನಿ ಮಂಗಳಮ್ಮನ ನೆರಳಿನಲ್ಲಿಯೇ. ಅಂಥಾ ವಿಜಯ್ ಜೊತೆಗೆ ನಟಿಸಿದ ಚಿತ್ರದ ಕಾರ್ಯಕ್ರಮವನ್ನು ಅವರಿಲ್ಲದ ಘಳಿಗೆಯಲ್ಲಿ ನಡೆಸಬೇಕಾಗದ ನೋವು ರಂಗಾಯಣ ರಘು ಮಾತಲ್ಲಿ ಸ್ಪಷ್ಟವಾಗಿಯೇ ಕಾಣಿಸಿತ್ತು.

ಸಂಚಾರಿ ನೆನಪಲ್ಲಿ ಅಕ್ಷರಶಃ ಭಾವುಕರಾಗಿ ಅವರೊಂದಿಗಿನ ಆರಂಭಿಕ ಕ್ಷಣಗಳನ್ನು ಮೆಲುಕು ಹಾಕಿದ ಮತ್ತೊಬ್ಬರು ಅಚ್ಯುತ ಕುಮಾರ್. ದಾಸ್ವಾಳ ಚಿತ್ರದ ಮೂಲಕ ಪರಿಚಿತರಾದ ಸಂಚಾರಿ ಪಾತ್ರವನ್ನು ಆವಾಹಿಸಿಕೊಳ್ಳುತ್ತಿದ್ದ ರೀತಿ, ಆ ನಂತದ ರಾಷ್ಟ್ರ ಪ್ರಶಸ್ತಿ ಪಡೆಯುವಷ್ಟರ ಮಟ್ಟಿಗೆ ಬೆಳೆದು ನಿಂತ ವಿದ್ಯಮಾನಗಳನ್ನೆಲ್ಲ ಅಚ್ಯುತ್ ಕುಮಾರ್ ಮನ ಮುಟ್ಟುವಂತೆ ನೆನಪಿಸಿಕೊಂಡರು. ಇಂಥಾ ವಾತಾವರಣದಲ್ಲಿ ಬಿಡುಗಡೆಯಾಗಿರೋ ಪುಕ್ಸಟ್ಟೆ ಲೈಫು ಟ್ರೈಲರ್‌ಗೆ ವ್ಯಾಪಕ ಮನ್ನಣೆ ದೊರಕುತ್ತಿದೆ. ಕುತೂಹಲಕಾರಿಯಾಗಿ ಮೂಡಿ ಬಂದಿರುವ ಈ ಟ್ರೇಲರ್ ಅನ್ನು ವೀಕ್ಷಕರೆಲ್ಲ ಕೊಂಡಾಡುತ್ತಾ, ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಬೀಗ ರಿಪೇರಿ ಮಾಡುವ ಕಾಯಕದ ಶಹಜಹಾನ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅತ್ತ ಬೀಗ ರಿಪೇರಿಯಿಂದ ಬರೋ ಕಾಸಿನಿಂದ ಸಂಸಾರದ ಭಾರ ಹೊರಲಾರದೆ ಕಂಗಾಲಾಗಿರೋ ಶಹಜಹಾನ್ ಈ ವ್ಯವಸ್ಥೆಯ ಚಕ್ರಸುಳಿಗೆ ಸಿಕ್ಕು ನಲುಗುವ ಅಪರೂಪದ ಕಥೆಯೊಂದು ಪುಕ್ಸಟ್ಟೆ ಲೈಫಿನೊಳಗಿದೆ. ಒಟ್ಟಾರೆಯಾಗಿ, ಇದೊಂದು ಭಿನ್ನ ಕಥಾ ಹಂದರದ, ಹೊಸಾ ಅಲೆಯ ಚಿತ್ರ ಎನ್ನಲು ಅಡ್ಡಿಯಿಲ್ಲ.

ಚಿತ್ರದಲ್ಲಿ ಸಂಚಾರಿ ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ಮತ್ತು ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಗರಾಜ್ ಸೋಮಯಾಜಿ ನಿರ್ಮಾಣ ಮಾಡಿರುವ ‘ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲು ತಯಾರಿ ನಡೆಸಿದೆ.

Recommended For You

Leave a Reply

error: Content is protected !!