ಸಾಮಾನ್ಯರ ಮನೆಯೊಳಗಿನ ‘ಎಕ್ಸ್ಟ್ರಾರ್ಡಿನರಿ’ ಕತೆ..!

ಇದು ಒಂದು ಮನೆಯ ಕಥೆ. ನಮ್ಮೆಲ್ಲರ ದಿನ ನಿತ್ಯದ ಜೀವನದಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಡೆಯುವ ಘಟನೆಯನ್ನು ಪರದೆ ಮೇಲೆ ನೋಡಿದಾಗ ಅದು ಹೋಮ್ ಸಿನಿಮಾದ ಹಾಗಿರುತ್ತದೆ. ಅಮೆಝಾನ್ ಪ್ರೈಮ್ ಅಲ್ಲಿ ಬಿಡುಗೊಡೆಗೊಂಡ ಮಲಯಾಳಂ ಸಿನಿಮಾ ತುಂಬಾ ಸರಳವಾದ, ಸುಂದರವಾಗಿ ಚಿತ್ರಿಸಿದ ಸಿನಿಮಾ.

ಮಧ್ಯಮ ವರ್ಗದ ತಂದೆ ಆಲಿವರ್ ತನ್ನ ಹಿರಿಯ ಮಗನ ಜೊತೆ ಒಂದು ಗಟ್ಟಿಯಾದ ಸಂಬಂಧ ಬೆಳೆಸಿಕೊಳ್ಳಲು ಪರದಾಡುತ್ತಾನೆ. ಹಿರಿಯ ಮಗ ಆಂಟೊನಿ ಸಿನಿಮಾದ ನಿರ್ದೇಶಕ, ಬರಹಗಾರ ಆಗಿದ್ದು, ಕಿರಿಯ ಮಗ ಚಾರ್ಲ್ಸ್ ಈಗಿನ ಕಾಲದ ಮಕ್ಕಳಂತೆ ಸದಾ ಕಾಲ ಮೊಬೈಲಿನ ಪ್ರಪಂಚದಲ್ಲಿ ಮುಳುಗಿರುತ್ತಾನೆ. ಹಳೆಯ ತಲೆಮಾರಿನವನಾದ ತಂದೆ ಈಗಿನ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಸ್ಮಾರ್ಟ್‌ಫೋನ್‌ ಬಳಕೆ ಕಲಿತುಕೊಂಡು ಮಕ್ಕಳ ಜೊತೆ ಬೆರೆಯಲು ಪ್ರಯತ್ನಿಸುತ್ತಾನೆ. ಆದರೆ ಅದಾವುದು ಅವರಿಗೆ ಒಳ್ಳೆಯ ಫಲವನ್ನು ನೀಡದೆ, ಮಗನ ದೃಷ್ಠಿಯಲ್ಲಿ ಗೌರವ ಇನ್ನೂ ಕಡಿಮೆಯಾಗಿಸುವ ಸನ್ನಿವೇಶಗಳು ಸೃಷ್ಠಿಯಾಗುತ್ತದೆ.

ಆಂಟೊನಿ ಮೊದಲ ಸಿನಿಮಾದ ಮೂಲಕ ಒಬ್ಬ ಹಿಟ್ ಡೈರೆಕ್ಟರ್ ಆಗಿ ಗುರುತಿಸಿಕೊಂಡವನು. ಎರಡನೆಯ ಪ್ರಾಜೆಕ್ಟ್ ಮೇಲೆ ನಿರೀಕ್ಷೆಯನ್ನು ಉಳಿಸುವಂಥ ಪ್ರಯತ್ನ ನಡೆಸುತ್ತಿರುತ್ತಾನೆ. ಆದರೆ ಅವನಿಗೆ ಹೊಸ ಕತೆಗೆ ಯಾವುದೇ ರೀತಿಯ ಪ್ರೇರಣೆ ಸಿಗದೆ ಒದ್ದಾಡುತ್ತಿರುತ್ತಾನೆ. ಇದರ ನಡುವೆ ಪ್ರೇಯಸಿಯೊಂದಿಗಿನ ಜಗಳವೂ ಆತನಲ್ಲಿ ಮಾನಸಿಕ ಅಶಾಂತಿ ಮೂಡಿಸುತ್ತದೆ. ತನ್ನ ತಂದೆಯ ಹಿರಿತನ, ಸಾಧನೆಯ ಪ್ರಯತ್ನಗಳನ್ನು ಕೂಡ ಕಾಣದೇ ಹೋಗುತ್ತಾನೆ. ಒಟ್ಟಿನಲ್ಲಿ ಒಬ್ಬ ಬರಹಗಾರನ ಅಭದ್ರತೆ, ತಳಮಳಗಳನ್ನು ನಿರ್ದೇಶಕರು ಆಂಟೊನಿ ಪಾತ್ರದ ಮೂಲಕ ನಿರ್ದೇಶಕರ ರೊಜಿನ್ ಥಾಮಸ್ ಚೆನ್ನಾಗಿ ತೋರಿಸಿದ್ದಾರೆ.

ಇದರ ನಡುವೆ ಸ್ನೇಹಿತನನ್ನು ಸೈಕಾಲಜಿಸ್ಟ್ ಬಳಿ ಕರೆದುಕೊಂಡು ಹೋಗಿದ್ದ ಆಲಿವರ್ ಅಲ್ಲಿ ತಾನೇ ಚಿಕಿತ್ಸೆ ಪಡೆಯಲು ಶುರು ಮಾಡುತ್ತಾನೆ! ಒಟ್ಟಿನಲ್ಲಿ ಒಂದು ಮನೆಯೊಳಗೆ ತಂದೆ ಮಕ್ಕಳ ನಡುವೆ ಜನರೇಶನ್ ಗ್ಯಾಪ್ ಕಾರಣದಿಂದ ಉದ್ಭವಿಸುವ ಸಮಸ್ಯೆ, ಅಪಾರ್ಥ, ಅವಮಾನಗಳ ನಡುವೆ ಸಂದರ್ಭ ಹೇಗೆ ವಾಸ್ತವವನ್ನು ಹೊರಗೆ ತರುತ್ತದೆ ಎನ್ನುವುದನ್ನು ಭಾವ ಪೂರ್ಣವಾಗಿ ತೋರಿಸಲಾಗಿದೆ.

ಒಟ್ಟು ಬದಲಾವಣೆಯ ನಡುವೆ ಒಂದು ಸ್ಮಾರ್ಟ್‌ಫೋನ್‌ನ ಯಾವ ಮಟ್ಟದ ಪಾತ್ರವಹಿಸಿದೆ ಎನ್ನುವುದನ್ನು ಕೂಡ ದೃಶ್ಯಗಳ ಮೂಲಕ ಸೆರೆ ಹಿಡಿಯಲಾಗಿದೆ.

ನಮ್ಮ ನಿತ್ಯದ ಬದುಕಿನಲ್ಲಿ ನಡೆಯುವ ಸಣ್ಣ ಪುಟ್ಟ ಸಂಗತಿಗಳೂ ಹೇಗೆ ಒಟ್ಟು ಜೀವನದ ಸುಖ ಸಂತೋಷಗಳಿಗೆ ಕಾರಣವಾಗುತ್ತವೆ ಎನ್ನುವುದನ್ನು ಚಿತ್ರಿಸಿದ ಈ ಸಿನಿಮಾ ನೋಡುವಾಗ ನಮ್ಮ ಬದುಕಿಗೆ ಹತ್ತಿರವೆನಿಸುವುದರಲ್ಲಿ ಅಚ್ಚರಿ ಇಲ್ಲ. ತಂದೆ-ಮಕ್ಕಳು, ತಾಯಿ-ಮಕ್ಕಳು, ಗಂಡ-ಹೆಂಡತಿ, ಅಣ್ಣ-ತಮ್ಮಂದಿರು, ಗೆಳೆಯರು, ಎಲ್ಲ ಸಂಬಂಧಗಳ ಮಹತ್ವ ತಿಳಿಸುವ ಚಿತ್ರ ಹೋಮ್. ಚಿತ್ರದ ಕ್ಲೈಮಾಕ್ಸ್ ಅಂತೂ ಒಂದು ಅದ್ಭುತ, ಸರ್‌ಪ್ರೈಸ್ ಎಂದೆ ಹೇಳಬಹುದು. ಎಕ್ಸ್ಟ್ರಾ ಆರ್ಡಿನರಿ ಕತೆಗಾಗಿ ಹುಡುಕುವ ಹೊಸ ತಲೆಮಾರಿನ ಯುವಕನಿಗೆ ಬದುಕನ್ನು ಪ್ರಾಮಾಣಿಕವಾಗಿ ಅನುಭವಿಸುವುದೇ ಹೇಗೆ ಎಕ್ಸ್ಟ್ರಾರ್ಡಿನರಿಯಾಗಿರುತ್ತದೆ ಎಂದು ಅರಿವು ಮಾಡಿಸುವ ಚಿತ್ರ.

ಚಿತ್ರದಲ್ಲಿ ಆಲಿವರ್ ಪಾತ್ರದ ಮೂಲಕ ಇಂದ್ರನ್ಸ್ ಮನಮುಟ್ಟುವಂತೆ ನಟಿಸಿದ್ದಾರೆ. ಪ್ರತಿಯೊಂದು ಫ್ರೇಮ್‌ ಅನ್ನು ಕಣ್ಣೊಳಗೆ ತುಂಬಿಕೊಳ್ಳುವಂತೆ ಸಹಜವಾಗಿ ಸೆರೆ ಹಿಡಿದ ಛಾಯಾಗ್ರಾಹಕ ನೀಲ್ ಡಿ’ಚುಂಚಾ ಅವರು ಅದ್ಭುತವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿಧಾನ ಗತಿಯಲ್ಲಿ ಸಾಗುವ ಸಿನಿಮಾ ಸುಮಾರು 161 ನಿಮಿಷಗಳ ಕಾಲಾವಧಿ ಸ್ವಲ್ಪ ದೀರ್ಘವಾದಂತೆ ಅನಿಸಬಹುದು. ಆದರೆ ಅದರ ಹೊರತಾಗಿಯೂ ಮನೆಯಲ್ಲೇ ಎಲ್ಲರೊಂದಿಗೆ ಕೂತು ನೋಡಬಹುದಾದ, ನೋಡಲೇಬೇಕಾದ ಸಿನಿಮಾ ಹೋಮ್.

Recommended For You

Leave a Reply

error: Content is protected !!
%d bloggers like this: