ಶುಭ ಮುಹೂರ್ತದಲ್ಲಿ ‘1975′

ದಿನಾಂಕ ನೋಡಿ ಮುಹೂರ್ತ ಮಾಡುವುದು ವಾಡಿಕೆ.‌ ಆದರೆ 1975 ಎನ್ನುವ ವರ್ಷಕ್ಕೇನೇ ಮುಹೂರ್ತ ನೆರವೇರಿಸಿದೆ ಚಿತ್ರತಂಡ. ಹೌದು, ಇದು ವಸಿಷ್ಠ ಬಂಟನೂರು ನಿರ್ದೇಶನದ 1975 ಎನ್ನುವ ಚಿತ್ರದ ಮುಹೂರ್ತದ ಸುದ್ದಿ.

ನಿರ್ದೇಶಕ ವಸಿಷ್ಠ ಬಂಟನೂರು ಅವರು ಈ ಹಿಂದೆ ‘ಒನ್ ಲವ್ ಟು ಸ್ಟೋರಿ’ ಎನ್ನುವ ಚಿತ್ರ ಮಾಡಿದ್ದರು. ಇದು ಅವರ ಎರಡನೇ ಚಿತ್ರ. ಈ ಬಾರಿ ಅವರು ಪ್ರಯೋಗಾತ್ಮಕ ಅಂಶಗಳನ್ನೊಳಗೊಂಡ ಚಿತ್ರಕ್ಕೆ ಸಾರಥ್ಯ ವಹಿಸಿದ್ದಾರೆ. ಹಲವಾರು ಕೌತುಕಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಮರ್ಡರ್ ಮಿಸ್ಟ್ರಿಯ ಹಾದಿ ಹಿಡಿದಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿಯೇ ಅಚ್ಚುಕಟ್ಟಾದ ಕತೆ ಸಿದ್ಧಪಡಿಸಿಕೊಂಡಿದ್ದ ವಸಿಷ್ಠ, ಇದೀಗ 1975ಕ್ಕೆ ಮುಹೂರ್ತವನ್ನೂ ಮುಗಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಮುಂದಿನ ತಿಂಗಳಿಂದಲೇ ಚಿತ್ರೀಕರಣಕ್ಕೆ ತೆರಳಲು ಸರ್ವ ತಯಾರಿಯನ್ನೂ ಮಾಡಿಕೊಂಡಿದ್ದಾರೆ.

ಬಗ್ಗೆ ಯಾವ ಸುಳಿವನ್ನೂ ಬಿಟ್ಟುಕೊಡದಂತೆ ನಿರ್ದೇಶಕರು ಎಚ್ಚರ ವಹಿಸಿದ್ದಾರೆ. ಆದರೆ ಸಣ್ಣ ಎಳೆಯನ್ನು ಬಿಚ್ಚಿಡುವ ಮೂಲಕ ಪ್ರೇಕ್ಷಕರೊಳಗೊಂದು ಕುತೂಹಲವನ್ನು ಪ್ರತಿಷ್ಠಾಪಿಸುವ ಜಾಣ್ಮೆಯನ್ನೂ ಪ್ರದರ್ಶಿಸಿದ್ದಾರೆ. ಆ ಬಗ್ಗೆ ಹೇಳುವುದಾದರೆ, ಈ ಚಿತ್ರದ ಕಥೆ ಒಂದು ಸ್ಕೂಟರ್ ಸುತ್ತ ಸುತ್ತುತ್ತೆ. ಆ ಸ್ಕೂಟರ್ ಕೂಡಾ ಒಂದು ಪಾತ್ರವಾಗುವಂಥಾ ಕುಸುರಿಯನ್ನು ಕಥೆಯಲ್ಲಿ ಅಡಕವಾಗಿಸಲಾಗಿದೆಯಂತೆ. ಇನ್ನುಳಿದಂತೆ ಜೆಮ್ ಶೆಟ್ಟಿ ಈ ಚಿತ್ರದ ನಾಯಕ. ಪ್ರತಿಭಾನ್ವಿತ ನಟಿ ಆರೋಹಿ ನಾಯಕಿ. ಇಂಥಾದ್ದೊಂದು ವಿಭಿನ್ನ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡು ದಿನೇಶ್ ರಾಜನ್ ಬಂಡವಾಳ ಹೂಡುತ್ತಿದ್ದಾರೆ. ಸಿಲ್ವರ್ ಸ್ಕ್ರೀನ್ಸ್ ಫಿಲಂ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ. ಈಗಾಗಲೇ ನಿರ್ದೇಶಕರು ಚಿತ್ರತಂಡದೊಡಗೂಡಿ ಲೊಕೇಶನ್ ಅನ್ನೂ ಕೂಡಾ ಪಕ್ಕಾ ಮಾಡಿಕೊಂಡಿದ್ದಾರೆ. ಬೆಂಗಳೂರು, ಬೀದರ್, ಮಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸದ್ಯ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿಗೆ. ಇನ್ನು ಮುಂದೆ ಹಂತ ಹಂತವಾಗಿ ಒಂದೊಂದೇ ಮಾಹಿತಿಗಳು ಪ್ರೇಕ್ಷಕರನ್ನು ಹಂತ ಹಂತವಾಗಿ ತಲುಪಿಕೊಳ್ಳಲಿವೆ.

Recommended For You

Leave a Reply

error: Content is protected !!
%d bloggers like this: