
ಉಗ್ರಂ ಮುರಳಿ ಒಂದುಕಡೆ ಮದಗಜನಾಗಿ ಹೂಂಕರಿಸಲು ಸಿದ್ಧರಾಗುತ್ತಿದ್ದಾರೆ. ಮತ್ತೊಂದು ಕಡೆ
ತೆರೆಗಳ ನಡುವಿನ ಕತೆ ತೆರೆದಿಡಲಿರುವ ಚಿತ್ರವೊಂದರ ಶೀರ್ಷಿಕೆ ಬಿಡುಗಡೆಗೊಳಿಸಿದ್ದಾರೆ. ಅದುವೇ ಅನಿತಾಭಟ್ ನಾಯಕಿ, ನಿರ್ಮಾಪಕಿಯಾಗಿರುವ ‘ಸಮುದ್ರಂ’
ಕಡಲ ಕಿನಾರೆಯ ನಿಗೂಢತೆಯನ್ನು ಬಚ್ಚಿಟ್ಟುಕೊಂಡಿರುವ ಕತೆ ‘ಸಮುದ್ರಂ’ನಲ್ಲಿದೆಯಂತೆ. ಪ್ರತಿಭಾನ್ವಿತ ನಟಿ ಅನಿತಾ ಭಟ್ ಸದ್ದೇ ಇಲ್ಲದೆ ಒಂದು ಸಿನಿಮಾದ ಕೇಂದ್ರ ಪಾತ್ರವಾಗಿ ನಟಿಸಿದ್ದಾರೆ.
ಕೊರೊನಾ ಕಾಲದಲ್ಲಿ ಆಸ್ಥೆಯಿಂದ ತಯಾರಿ ನಡೆಸಿ, ಕೊರೊನಾ ಅಬ್ಬರ ತುಸು ತಗ್ಗುತ್ತಲೇ ಸಿನಿಮಾದ ಚಿತ್ರೀಕರಣವನ್ನೂ ಪೂರ್ಣಗೊಳಿಸಲಾಗಿದೆ. ಇದೀಗ ಚಿತ್ರದ ಶ್ರೀರ್ಷಿಕೆಯನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಲಾಂಚ್ ಮಾಡಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಮುಹೂರ್ತದ ಆಸುಪಾಸಲ್ಲಿಯೇ ಟೈಟಲ್ ಲಾಂಚ್ ಮಾಡಲಾಗುತ್ತದೆ. ಆದರೆ ಸಮುದ್ರಂ ತಂಡ ಚಿತ್ರೀಕರಣವೆಲ್ಲ ಸಂಪೂರ್ಣ ಮುಗಿದಾದ ನಂತರವೇ ಶೀರ್ಷಿಕೆ ಅನಾವರಣ ಮಾಡಿಕೊಂಡಿದೆ.
‘ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್’ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ‘ಅನಿತಾ ಭಟ್ ಕ್ರಿಯೇಷನ್ಸ್’ ಮತ್ತು ‘ಡಾಟ್ ಟಾಕೀಸ್’ ಸಹಯೋಗವಿದೆ. ಅನಿತಾ ಭಟ್ ಮತ್ತು ಶಿವಧ್ವಜ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜ್ ಕಿಶೋರ್ ಮತ್ತು ಸ್ವಾತಿ ಬಂಗೇರ ಜೋಡಿ ಮತ್ತೆರಡು ಪ್ರಧಾನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಮುದ್ರಂ ಎಂಬ ಶೀರ್ಷಿಕೆಯೇ ಕಥೆಯ ಜಾಡನ್ನು ಕಡಲ ಕಿನಾರೆಯತ್ತ ಸರಿಸುವಂತಿದೆ.
ಕಡಲೆಂದರೆ ಬಹುತೇಕರ ಮನಸು ನೀಲಾಕಾಶದಂತೆ ಪ್ರಪುಲ್ಲವಾಗುತ್ತದಲ್ಲಾ? ಅದರ ಕಿನಾರೆಗಳಲ್ಲಿ ಮೈಚಾಚಿಕೊಂಡ ಭೂಗತ ಚಟುವಟಿಕೆಗಳನ್ನು ಚಿತ್ರ ಹೇಳಲಿದೆ ಎಂದು ನಿರ್ದೇಶಕರು ನಿರ್ದೇಶಕ ರಾಘವ ಮಹರ್ಷಿ ಹೇಳಿದ್ದಾರೆ. ಶಿವಧ್ವಜ್ ಇಲ್ಲಿ ಡಾನ್ ಪಾತ್ರವನ್ನು ನಿರ್ವಹಿಸಿದ್ದರೆ, ಅನಿತಾ ಭಟ್ ಥರ ಥರದ ಶೇಡ್‌ಗಳಿರೋ ಸವಾಲಿನ ಪಾತ್ರವನ್ನು ನಿಭಾಯಿಸಿದ್ದಾರೆ. ಓರ್ವ ಗೃಹಿಣಿಯಾಗಿ, ಸಂದರ್ಭಾನುಸಾರ ರೆಬೆಲ್ ಆಗಿ ಈ ಸಮಾಜದೆದುರು ನಿಲ್ಲುವ ದಿಟ್ಟ ಹೆಣ್ಣಾಗಿಯೂ ಅವರು ನಟಿಸಿದ್ದಾರೆ.
ಉಡುಪಿ, ಮಲ್ಪೆ, ಬ್ರಹ್ಮಾವರ, ಸಕಲೇಶಪುರ ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಶರವೇಗದಲ್ಲಿ ಸಮುದ್ರಂ ಚಿತ್ರೀಕರಣ ಮುಗಿಸಿಕೊಳ್ಳಲಾಗಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಿನ ಕಾರ್ಯಚಟುವಟಿಕೆಗಳಿಗೂ ಚಾಲನೆ ಸಿಕ್ಕಿದೆ. ಚಿತ್ರಕ್ಕೆ ಆಕಾಶ್ ಪರ್ವ ಅವರ ಸಂಗೀತ ನಿರ್ದೇಶನವಿದೆ. ಛಾಯಾಗ್ರಹಣ, ಸಂಕಲನ ಮಾತ್ರವಲ್ಲದೆ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಹೃಷಿಕೇಶ್ ನಿಭಾಯಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಮುದ್ರಂನ ಇನ್ನೊಂದಷ್ಟು ಅಚ್ಚರಿದಾಯಕ ಅಂಶಗಳು ಜಾಹೀರಾಗಿ, ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ.
