
ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಶಶಿಕುಮಾರ್ ನಟನೆಯಲ್ಲಿ ದಶಕಗಳ ಹಿಂದೆ ‘ಕುಂತೀಪುತ್ರ’ ಎನ್ನುವ ಚಿತ್ರ ತೆರೆಕಂಡಿತ್ತು. ಇದೀಗ ಅದೇ ಹೆಸರಿನಲ್ಲಿ ಹೊಸಬರ ತಂಡವೊಂದು ಚಿತ್ರ ಮಾಡಿದೆ. ಸರಿಯಾಗಿ ಗಮನಿಸಿದರೆ ಶೀರ್ಷಿಕೆಯಲ್ಲಿ ಸ್ವಲ್ಪ ಬದಲಾವಣೆಯೂ ಇದೆ.
ಚಿತ್ರದಲ್ಲಿ ನಾಯಕನಿಗೆ ಹುಟ್ಟಿನಿಂದ ತಂದೆ, ತಾಯಿ ಯಾರು ಎನ್ನುವ ಬಗ್ಗೆ ಅರಿವಿರುವುದಿಲ್ಲ. ಹಾಗಾಗಿ ಆತನ ಬದುಕು ಕರ್ಣನಂತೆ ಆಗಿರುವ ಕಾರಣ ಈ ಹೆಸರು ಇರಿಸಲಾಗಿದೆ ಎಂದರು ನಿರ್ದೇಶಕ ರಾಜು ಬೋನಗಾನಿ. ಚಿತ್ರಕ್ಕೆ ರಾಜು ಅವರೇ ಕತೆ, ಚಿತ್ರಕತೆ ಬರೆದಿದ್ದಾರೆ. ಗುಲ್ಬರ್ಗದಲ್ಲಿ ನಡೆದ ನೈಜ ಘಟನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಚಿತ್ರ ಮಾಡಿರುವುದಾಗಿ ಹೇಳಿದ ನಿರ್ದೇಶಕರು ಆ ಘಟನೆ ಏನು ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು ಎಂದರು.
ಚಿತ್ರದ ನಾಯಕ ಗೋಪಿಕೃಷ್ಣ ಮಾತನಾಡಿ, “ಇದು ಕೌಟುಂಬಿಕ ಪ್ರೇಕ್ಷಕರು ನೋಡುವಂಥ ಕತೆ. ಇದರಲ್ಲಿ ಲವ್, ಸ್ನೇಹ, ತಾಯಿ ಸೆಂಟಿಮೆಂಟ್ ಎಲ್ಲವೂ ಇದೆ. ಹಾಗಾಗಿಯೇ ಚಿತ್ರ ಖಂಡಿತವಾಗಿ ಯಶಸ್ಸಾಗುವ ಭರವಸೆ ಇದೆ. ಸಾಹಸ ಪ್ರಿಯರಿಗೆ ಡ್ರ್ಯಾಗನ್ ಪ್ರಕಾಶ್ ಅವರ ಹೊಡೆದಾಟದ ಸನ್ನಿವೇಶಗಳು ಇಷ್ಟವಾಗಬಹುದು” ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.
ತಮಿಳಿನ ಖ್ಯಾತ ಪೋಷಕ ನಟ ಜಯಪ್ರಕಾಶ್ ಅವರು ಕೂಡ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದು ತಮ್ಮ ಜೊತೆಗಿನ ಸ್ನೇಹದಿಂದ ಈ ಪಾತ್ರ ಒಪ್ಪಿಕೊಂಡಿರುವುದಾಗಿ ನಿರ್ದೇಶಕರು ತಿಳಿಸಿದರು. ನಾಯಕಿಯಾಗಿ ಪ್ರಿಯಾಂಕಾ ಚೌಧರಿ, ಜಸ್ಮಿತಾ ಮತ್ತು ಆರತಿ ರಾಜ್ ಮೊದಲಾದವರ ತಾರಾಗಣ ಇದೆ.
ಈ ಸಿನಿಮಾದಲ್ಲಿ ಐದು ಹಾಡುಗಳಿದ್ದು ಅವುಗಳಲ್ಲಿ ಎರಡು ಮೆಲೊಡಿ, ಒಂದು ಪ್ರೇಮಗೀತೆ, ಒಂದು ಪ್ಯಾತೊ ಮತ್ತು ಒಂದು ಐಟಂ ಸಾಂಗ್ ಇವೆ ಎಂದು ಗೀತ ಸಾಹಿತಿ ಎಲ್ ಎನ್ ಸೂರ್ಯ ತಿಳಿಸಿದರು. ಅವರು ಈ ಹಿಂದೆ ಸುವರ್ಣ ಸುಂದರಿ, ಅನಾಥ ಸೇರಿದಂತೆ ಸುಮಾರು ಇಪ್ಪತ್ತರಷ್ಟು ಚಿತ್ರಗಳಿಗೆ ಹಾಡು ಬರೆದಿದ್ದಾಗಿ ಹೇಳಿದರು. ಚಿತ್ರಕ್ಕೆ ದಿಲೀಪ್ ಭಂಡಾರಿಯವರು ಸಂಗೀತ ನೀಡಿದ್ದಾರೆ.
ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು ಚಿಕ್ಕ ಬಳ್ಳಾಪುರ, ಪಾಂಡವಪುರ ಮೊದಲಾದೆಡೆಗಳಲ್ಲಿ ಅರವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ಮಾಪಕ ಶಶಾಂಕ್ ಗೌಡ ಅವರು ಸಾಫ್ಟ್‌ವೇರ್ ವಿಭಾಗದಲ್ಲಿ ವೃತ್ತಿ ನಿರತರಾಗಿದ್ದು ಇದು ಅವರ ನಿರ್ಮಾಣದ ಮೊದಲ ಚಿತ್ರ ಎಂದರು. ಅವರಿಗೆ ನಿರ್ಮಾಣದಲ್ಲಿ ದೇವೇಂದ್ರ ಗೌಡ ಅವರು ಕೈ ಜೋಡಿಸಿದ್ದಾರೆ.