
ನವ ನಿರ್ದೇಶಕ ರಘುವರ್ಮ ನಿರ್ದೇಶನದ ‘ಪ್ರೇಮಮಯಿ’ ಸಿನಿಮಾದ ಮುಹೂರ್ತ ಇಂದು ಸೆ.15ರಂದು ವಸಂತಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು.
ನಿರ್ದೇಶಕ ರಘುವರ್ಮ ಅವರು ಈ ಹಿಂದೆ ಆರ್ ಚಂದ್ರು ಅವರ ಬಳಿಯಲ್ಲಿ ಕೆಲಸ ಮಾಡಿದ ಅನುಭವಿಯಾಗಿದ್ದು, ಈಗಾಗಲೇ ‘ದೌಲತ್’ ಎನ್ನುವ ಹೊಸಬರ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದು ತೆರೆಗೆ ಬರುವ ಮೊದಲೇ ಹೊಸ ಅವಕಾಶ ಪಡೆದುಕೊಂಡಿದ್ದು, ‘ಪ್ರೇಮಮಯಿ’ ಎನ್ನುವ ಈ ಚಿತ್ರಕ್ಕೆ ನಿರ್ದೇಶಕರಾಗಿದ್ದಾರೆ.
ಚಿತ್ರದ ಹೆಸರು ಕೇಳಿದಾಕ್ಷಣ ಯಾರು ಪ್ರೇಮಮಯಿ ಎನ್ನುವ ಕುತೂಹಲ ಮೂಡುವುದು ಸಹಜ. ಆದರೆ ಪ್ರೇಮ ಚಿತ್ರದ ಹೆಚ್ಚಿನ ಪಾತ್ರಗಳಲ್ಲಿ ಇರುತ್ತದೆ. ಅದರಲ್ಲಿಯೂ ನಾಯಕನ ತಂದೆಯ ಪಾತ್ರಕ್ಕೆ ಈ ಪದ ಹೆಚ್ಚು ಹೊಂದುತ್ತದೆ. ಹಾಗಾಗಿ ಇದೊಂದು ಪ್ರೇಮಚಿತ್ರ ಎನ್ನುವುದರ ಜೊತೆಗೆ ಸಾಂಸಾರಿಕ ಚಿತ್ರವೂ ಹೌದು ಎಂದರು ನಿರ್ದೇಶಕ ರಘುವರ್ಮ.
ಚಿತ್ರದ ನಾಯಕ ರಾಮ್ ನಿರ್ದೇಶಕ ರಘುವರ್ಮ ಅವರ ಸಹೋದರ ಎನ್ನುವುದು ವಿಶೇಷ. ಈ ಹಿಂದೆ ದೌಲತ್ ಚಿತ್ರದಲ್ಲಿ ನಟಿಸಿದ ಅನುಭವ ಹೊಂದಿರುವ ಅವರು ಚಿತ್ರದಲ್ಲಿ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್ ಅವರಿಗೆ ಜೋಡಿಯಾಗಿ ನಾಯಕಿಯ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ಸುರಕ್ಷಿತ. ಅವರು ಈ ಹಿಂದೆ ಗಡಿಯಾರ, ಸಿಂಧೂರ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದು ತಮ್ಮ 16ನೇ ವರ್ಷ ವಯಸ್ಸಿನಿಂದಲೇ
ರಂಗಭೂಮಿ ಕಲಾವಿದೆಯಾಗಿರುವುದಾಗಿ ತಿಳಿಸಿದರು.
ಕತೆ ಇಷ್ಟವಾದ ಕಾರಣ ಕಾಲೇಜು ಹುಡುಗಿಯ ಈ ಪಾತ್ರವನ್ನು ಮಾಡುತ್ತಿರುವುದಾಗಿ ಅವರು ಹೇಳಿದರು. ಚಿತ್ರದಲ್ಲಿ ನಾಯಕಿಯ ಶ್ರೀಮಂತ ತಂದೆಯಾಗಿ ಬಿಸ್ನೆಸ್ ಮ್ಯಾನ್ ಒಬ್ಬರ ಪಾತ್ರದಲ್ಲಿ ಸಂದೀಪ್ ಮಲಾನಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕರಾಗಿಯೂ ಇರುವ ಕಾರ್ತಿಕ್ ವೆಂಕಟೇಶ್ ‘ಪ್ರೇಮಮಯಿ’ ಚಿತ್ರದ ಒಂದೆಳೆ ಕತೆಯನ್ನು ಹೀಗೆ ವಿವರಿಸಿದರು. ಚಿತ್ರದಲ್ಲಿ ನಾಯಕಿ ಸಂಗೀತ ಪ್ರಿಯೆಯಾಗಿರುತ್ತಾಳೆ. ಕಾಲೇಜು ದಾರಿಯಲ್ಲಿ ವಯಸ್ಸಾದ ಭಿಕ್ಷುನೋರ್ವನ ಸಂಗೀತವನ್ನು ಮೆಚ್ಚಿ ಆತನೊಂದಿಗೆ ಆತ್ಮೀಯವಾಗಿರುತ್ತಾಳೆ. ಕಾಲೇಜಲ್ಲಿ ಆಕೆಯ ಪ್ರಿಯಕರನಾದವನು ಒಮ್ಮೆ ತಂದೆಯನ್ನು ಕರೆದುಕೊಂಡು ಬರುವ ಪರಿಸ್ಥಿತಿ ಬರುತ್ತದೆ. ಆದರೆ ಅದೇ ಭಿಕ್ಷುಕ ತನ್ನ ತಂದೆ ಎನ್ನುವುದನ್ನು ನಾಯಕಿಯಿಂದ ಅಡಗಿಸಿಡುತ್ತಾನೆ. ತಂದೆಯನ್ನೇ ಮರೆಯುವ ಯುವಕ ತನ್ನನ್ನು ಹೇಗೆ ಪ್ರೀತಿಸಬಲ್ಲ ಎಂದು ಯುವತಿ ಆತನಲ್ಲಿ ಮುನಿಸಾಗುತ್ತಾಳೆ. ಮುಂದೆ ಕತೆ ಹೇಗೆ ಸಾಗುತ್ತದೆ ಎನ್ನುವುದನ್ನು ಕುತೂಹಲಕರವಾಗಿ ತೆರೆಯ ಮೇಲೆ ತೋರಿಸಲಾಗುತ್ತದೆ ಎಂದಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲವನ್ನು ನಿರ್ದೇಶಕ ರಘುವರ್ಮ ಅವರೇ ರಚಿಸಿದ್ದಾರೆ ಎನ್ನುವ ಮಾಹಿತಿಯನ್ನು ಸ್ವತಃ ಸಂಗೀತ ನಿರ್ದೇಶಕರೂ ಆದ ಕಾರ್ತಿಕ್ ವೆಂಕಟೇಶ್ ತಿಳಿಸಿದರು. ಅವರೊಂದಿಗೆ ಮತ್ತೋರ್ವ ನಿರ್ಮಾಪಕರಾಗಿ ರಿಯಲ್ ಎಸ್ಟೇಟ್ ಉದ್ಯಮಿ ಎಲ್ ನಾಗಭೂಷಣ್ ಅವರು ಕೈ ಜೋಡಿಸಿದ್ದಾರೆ.

ಚಿತ್ರದಲ್ಲಿ ನಾಯಕನಷ್ಟೇ ಪ್ರಾಧಾನ್ಯತೆ ಪಡೆದಿರುವ ತಂದೆಯ ಪಾತ್ರದಲ್ಲಿ ಮೀಸೆ ಆಂಜನಪ್ಪ ನಟಿಸುತ್ತಿರುವುದು ವಿಶೇಷ. ಶಂಖನಾದದಿಂದ ಇಲ್ಲಿಯವರೆಗೆ ನೂರಾರು ಚಿತ್ರಗಳಲ್ಲಿ ನಟಿಸಿರುವ ಆಂಜನಪ್ಪ ಅವರಿಗೆ ಇದು ಚಿತ್ರ ಜೀವನದ ಉಲ್ಲೇಖಾರ್ಹ ಪಾತ್ರವಾಗಬಹುದೆನ್ನುವ ನಿರೀಕ್ಷೆ ಇದೆ. ಉಳಿದಂತೆ ಕುರಿ ಬಾಂಡ್ ರಂಗ, ಶಿವಕುಮಾರ್ ಆರಾಧ್ಯ, ಶಿಲ್ಪಾ ಮೂರ್ತಿ ಮೊದಲಾದವರು ನಟಿಸಲಿದ್ದಾರೆ.
ಇದೇ ತಿಂಗಳ 25ರಿಂದ ಚಿತ್ರೀಕರಣ ಆರಂಭಿಸಲಿದ್ದು ಶಿವಮೊಗ್ಗ, ಗೋವಾ ಮತ್ತು ಬೆಂಗಳೂರಿನ ಕನಕಪುರದಲ್ಲಿ ಶೂಟಿಂಗ್ ಯೋಜನೆ ಹಾಕಿರುವುದಾಗಿ ತಂಡ ತಿಳಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿಯಲ್ಲಿ ಸಂಕ್ರಾಂತಿ ಸಂಭ್ರಮಕ್ಕೆ ಚಿತ್ರ ತೆರೆಗೆ ಬರಲಿದೆ.
