
ಬೆಂಗಳೂರಿನ ಹಂಪಿ ನಗರದಲ್ಲಿನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದ ವಾತಾವರಣ.ಕಾರಣ ಶ್ರೀನಗರ ಕಿಟ್ಟಿ ನಟನೆಯ
ಗೌಳಿ’ ಚಿತ್ರದ ಮಹೂರ್ತ.
ನಿರ್ಮಾಪಕರ ತಂದೆ ಡಿ ಮರಿದೊಡ್ಡಯ್ಯ ಗೌಳಿ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ನಿರ್ಮಾಪಕ ಸಿಂಘಂ ರಘು ಅವರ ಪುಟ್ಟ ಮಕ್ಕಳಾದ ಸೋಹನ್ ಮತ್ತು ಶ್ರೇಯಾ ಕ್ಯಾಮೆರಾ ಚಾಲನೆ ಮಾಡಿದರು. ಕೊಡಲಿಯಾಕಾರದಲ್ಲಿದ್ದ ಕ್ಲ್ಯಾಪ್ ಬೋರ್ಡ್ ಇದೊಂದು ಆಕ್ಷನ್ ಚಿತ್ರ ಎನ್ನುವುದನ್ನು ಸಾರಿ ಹೇಳುತ್ತಿತ್ತು. ಹೌದು, ಇದು ಮುಗ್ದನೊಬ್ಬ ಆಯುಧ ಕೈಗೆತ್ತಿಕೊಳ್ಳುವ ಕತೆ.. ಹಾಗಂತ ನಿರ್ದೇಶಕ ಸೂರ ಅವರೇ ಹೇಳಿದ್ದಾರೆ. ಅಂದಹಾಗೆ ಸೂರ ಎನ್ನುವುದು ತಮ್ಮ ತಂದೆಯ ಪೆಟ್ ನೇಮ್ ಆಗಿದ್ದು, ಅದನ್ನೇ ತಾವು ಇರಿಸಿಕೊಂಡಿರುವುದಾಗಿ ನಿರ್ದೇಶಕರು ಹೇಳಿದ್ದಾರೆ.

ನಾಯಕ ಕಿಟ್ಟಿ ಹಾಲು ಮಾರುವ ಗೌಳಿ ಜನಾಂಗದವನು. ಹಾಗಾಗಿ ಚಿತ್ರದಲ್ಲಿ ಆತನನ್ನು ಗೌಳಿ ಎಂದೇ ಕರೆಯಲಾಗುತ್ತದೆ. ಇದು ಸುಮಾರು ಅರವತ್ತು ವರ್ಷಗಳ ಹಿಂದೆ ಶಿವಮೊಗ್ಗ ಸಮೀಪ ನಡೆದಿದೆ ಎನ್ನಲಾದ ಕತೆ.. ಅದನ್ನೇ ಸ್ಫೂರ್ತಿ ಮಾಡಿಕೊಂಡು ತೊಂಬತ್ತರ ದಶಕದ ಹಿನ್ನೆಲೆ ಇರಿಸಿಕೊಂಡು.. ಚಿತ್ರ ಮಾಡುತ್ತಿದ್ದಾರಂತೆ ನಿರ್ದೇಶಕರು. ಪಾತ್ರಕ್ಕಾಗಿ ವರ್ಷಗಳಿಂದ ಗಡ್ಡಬಿಟ್ಟುಕೊಂಡಿರುವ ಕಿಟ್ಟಿಗೆ ಕೊನೆಗೂ ಸುಮುಹೂರ್ತ ಕೂಡಿ ಬಂದಿದೆ. ಅಂದಹಾಗೆ ಚಿತ್ರದಲ್ಲಿ ಯುವನಟ ಯಶ್ ಶೆಟ್ಟಿಯವರು ಒಂದು ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ನಾಯಕಿ ಪಾವನಾಗೌಡ ಮಾತನಾಡಿ, ತಮ್ಮನ್ನು ಚಿತ್ರಕ್ಕೆ ರೆಫರ್ ಮಾಡಿದ ನಟ ಯಶ್ ಶೆಟ್ಟಿಯವರಿಗೆ ಕೃತಜ್ಞತೆ ಹೇಳಿದರು.

ಇದೇ ಸಪ್ಟೆಂಬರ್ 21ರಿಂದ ಚಿತ್ರೀಕರಣ ಶುರುವಾಗಲಿದ್ದು, ಚಿತ್ರತಂಡದಲ್ಲಿ ಶ್ರೀನಗರ ಕಿಟ್ಟಿ ಪಾವನಾ ಗೌಡ ಅವರ ಜೊತೆಗೆ ಯಶ್ ಶೆಟ್ಟಿ, ರಂಗಾಯಣ ರಘು, ಶರತ್ ಲೋಹಿತಾಶ್ವ ಮಾತ್ರವಲ್ಲದೆ, ಕಾಕ್ರೋಚ್ ಸುಧಿ ಮೊದಲಾದ ಕಲಾವಿದರ ದೊಡ್ಡ ತಂಡವೇ ಇದೆ. ಶಶಾಂಕ್ ಶೇಷಗಿರಿ ಸಂಗೀತ ನೀಡಲಿದ್ದು ಸಂದೀಪ್ ವಳ್ಳೂರಿಯವರು ಛಾಯಾಗ್ರಹಣ ಮಾಡಲಿದ್ದಾರೆ.

