ನಟ, ಪತ್ರಕರ್ತ ಮಾತ್ರವಲ್ಲ ವೇದಿಕೆ ಕಾರ್ಯಕ್ರಮಗಳ ನಿರೂಪಕರಾಗಿಯೂ ಗುರುತಿಸಿಕೊಂಡವರು ಯತಿರಾಜ್. ಇತ್ತೀಚೆಗೆ ತಮ್ಮ ‘ಕಲಾವಿಧ’ ಯೂಟ್ಯೂಬ್ ವಾಹಿನಿಯ ಮೂಲಕ ಒಂದಷ್ಟು ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿ ಗಮನ ಸೆಳೆದಿದ್ದರು. ಇದೀಗ ಅವರ ನಿರ್ದೇಶನದ 18ನೇ ಕಿರುಚಿತ್ರ ‘ಆರಾಧ್ಯ’ದ ವಿಶೇಷ ಪ್ರದರ್ಶನ ಮತ್ತು ಮಾಧ್ಯಮಗೋಷ್ಠಿ ನಡೆಸಲಾಗಿದೆ.
“ಫಾದರ್ಸ್ ಡೇ ದಿನ ಬಹಳ ಜನ ತಮ್ಮ ತಮ್ಮ ತಂದೆಯ ಜೊತೆಗೆ ನಿಂತು ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನ್ನು ನೋಡಿದೆ. ಆಗ ನಿಜಕ್ಕೂ ಅಪ್ಪ ಇಲ್ಲದವರ ಮನದೊಳಗೆ ಏನೆಲ್ಲ ಓಡುತ್ತಿರಬಹುದು ಎನ್ನುವ ಯೋಚನೆ ಮೂಡಿತು. ಅದೇ ಸ್ಫೂರ್ತಿಯಿಂದ ಈ ಕತೆ ಬರೆದಿದ್ದೇನೆ ಎಂದರು ಯತಿರಾಜ್. ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಗೆ ಒಂದು ಪಾತ್ರವನ್ನೂ ನಿಭಾಯಿಸಿರುವ ಯತಿರಾಜ್ ಎಲ್ಲವೂ ಆಗಿದ್ದಾರೆ.
ಬಾಲನಟಿ ಆರಾಧ್ಯಗೆ ಚಿತ್ರದಲ್ಲಿ ಟೈಟಲ್ ರೋಲ್ ಲಭಿಸಿರುವುದಷ್ಟೇ ಅಲ್ಲ; ಆ ಶೀರ್ಷಿಕೆಯೇ ಆಕೆಯ ನಿಜವಾದ ಹೆಸರು ಎನ್ನುವುದು ವಿಶೇಷ. ಈಗಾಗಲೇ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ 25ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಆರಾಧ್ಯ ನಟನೆಯ ‘ವಿಕ್ರಾಂತ್ ರೋಣ’ ಕೂಡ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಆದರೆ ತನಗೆ ಇಷ್ಟು ದೊಡ್ಡ ಹೆಸರಿದ್ದರೂ ಯತಿರಾಜ್ ಅವರು ಕಿರುಚಿತ್ರ ನಿರ್ಮಾಣಕ್ಕೆ ಪಡುವ ಕಷ್ಟವನ್ನು ಅರಿತುಕೊಂಡು ಯಾವುದೇ ಸಂಭಾವನೆ ಇರದೆ ನಟಿಸುವ ಮೂಲಕ ತಂಡದ ಮನಗೆದ್ದಿದ್ದಾರೆ. ಅಭಿನಯದಿಂದ ಚಿತ್ರ ನೋಡಿದವರ ಹೃದಯ ಕದ್ದಿದ್ದಾರೆ. “ಇದು ನನ್ನ ಮೂರನೇ ಕಿರುಚಿತ್ರ. ಯತಿರಾಜ್ ಅವರ ಜೊತೆಗೆ ಎರಡನೇ ಕಿರುಚಿತ್ರ” ಎಂದು ಹೆಮ್ಮೆಯಿಂದ ಹೇಳಿಕೊಂಡಳು ಆರಾಧ್ಯ.
ಚಿತ್ರದಲ್ಲಿ ಶಿಕ್ಷಕಿಯ ಪಾತ್ರ ನಿಭಾಯಿಸಿರುವ ಯುವನಟಿ ಅಂಜಲಿಯವರು ಕೂಡ ನೀಡಿರುವ ಸಹಕಾರ ದೊಡ್ಡದು ಎಂದಿರುವ ಯತಿರಾಜ್ ಒಟ್ಟಿನಲ್ಲಿ ಇದು ಜೀರೊ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರ ಎನ್ನುವ ಮೂಲಕ ಒಟ್ಟು ತಂಡದ ಸಹಕಾರವನ್ನು ಸ್ಮರಿಸಿಕೊಂಡರು. “ಕತೆ ಕೇಳಿದಾಗ ಮಗುವಿನ ಸೂಕ್ಷ್ಮ ಮನಸು ಮತ್ತು ಅದರಲ್ಲಿ ಬರುವ ದಂಪತಿಯ ಪಾತ್ರ ಅವರ ನಡುವಿರುವ ಅಂಡರ್ ಸ್ಟ್ಯಾಂಡಿಂಗ್ ನನಗೆ ಇಷ್ಟವಾಯಿತು. ಅದಕ್ಕೆ ಒಪ್ಪಿಕೊಂಡೆ” ಎಂದ ಅಂಜಲಿ ತಮ್ಮ ಬೆಂಬಲಕ್ಕೆ ಸಮರ್ಥನೆ ನೀಡಿದರು.
ಅದೇ ರೀತಿ ಆಕರ್ಷಕವಾದ ಶಾಲೆಯೊಳಗೆ ಚಿತ್ರೀಕರಿಸಲು ಅವಕಾಶ ಮಾಡಿಕೊಟ್ಟ ವಿ ಎಲ್ ಎಸ್ ಸ್ಕೂಲ್ ನ ದೇವಿಕಾ ಅವರಿಗೆ, ಮಾಧ್ಯಮಗೋಷ್ಠಿಗೂ ಪ್ರಾಯೋಜಕತ್ವ ನೀಡಿದ ಸ್ನೇಹಿತ ಮಹೇಶ್ ಮೊದಲಾದವರಿಗೆ ಯತಿರಾಜ್ ಕೃತಜ್ಞತೆ ಹೇಳಿದರು.
ವೇದಿಕೆಯಲ್ಲಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಜಂಕಾರ್ ಮ್ಯೂಸಿಕ್ ಬನ ಭರತ್ ಜೈನ್ ಅವರು “ಅವರ ಚಿತ್ರಗಳನ್ನು ನೋಡಿ ಅಭಿಪ್ರಾಯ ಹೇಳುತ್ತಿರುತ್ತೇನೆ. ಈ ಚಿತ್ರ ಕೂಡ ತುಂಬ ಇಷ್ಟವಾಯಿತು. ಸದ್ಯಕ್ಕೆ ಸಿನಿಮಾ ನಿರ್ಮಾಣ ಬೇಡ ಎಂದು ಕುಳಿತ ನನ್ನನ್ನು ಚಿತ್ರ ನಿರ್ಮಿಸುವ ಮಟ್ಟಕ್ಕೆ ಟೆಂಪ್ಟ್ ಮಾಡುವಂಥ ಕತೆಗಳನ್ನು ಹೇಳುತ್ತಾರೆ. ಬಹುಶಃ ಮುಂದೆ ಇವರ ಚಿತ್ರಕ್ಕೆ ನಾನೇ ನಿರ್ಮಾಪಕನಾಗಬಹುದು” ಎಂದು ಹೇಳಿ ಯತಿರಾಜ್ ಆಶಯಗಳಿಗೆ ಭರವಸೆ ತುಂಬಿದ್ದಾರೆ. ಮತ್ತೋರ್ವ ಅತಿಥಿ ‘ಗೆಜ್ಜೆನಾದ’ ಖ್ಯಾತಿಯ ವಿಜಯಕುಮಾರ್ ಅವರು ಮಾತನಾಡಿ “ಇಂಥ ಕೊರೊನಾ ಸಂದರ್ಭದಲ್ಲಿ ಕೂಡ ಕಲಾವಿದರು, ತಂತ್ರಜ್ಞರು ಹಣ ತೆಗೆದುಕೊಂಡಿಲ್ಲ ಎನ್ನುವುದನ್ನು ಕೇಳಿ ಅವರ ಸಹಕಾರ ಮನೋಭಾವದ ಬಗ್ಗೆ ತಿಳಿದು ಖುಷಿ ಆಯಿತು” ಎಂದರು. ಈ ಸಂದರ್ಭದಲ್ಲಿ ಯತಿರಾಜ್ ಅವರ ಸ್ನೇಹಿತರೂ ಆದ ಪಿ ಆರ್ ಒ ವೆಂಕಟೇಶ್ “ಸಮಾಜಕ್ಕೆ ಅಗತ್ಯವಾದ ಸಬ್ಜೆಕ್ಟ್ ಆಯ್ದುಕೊಳ್ಳುವ ಬುದ್ಧಿವಂತ ಯತಿರಾಜ್ ಆಗಿದ್ದು, ನಟ ಯಶ್ ಅವರ ಸಮಾಜಸೇವೆಯ ಕುರಿತಾದ ಕಿರುಚಿತ್ರ ಮಾಡಿದ ಸಂದರ್ಭದಲ್ಲಿ ನನ್ನಿಂದಲೂ ಒಂದು ಕ್ಯಾಮಿಯೋ ಎಂಟ್ರಿ ಮಾಡಿಸಿದ್ದರು” ಎಂದು ನೆನಪಿಸಿಕೊಂಡರು. ಮಾಧ್ಯಮದ ಸ್ನೇಹಿತರ ಪರವಾಗಿ ವೇದಿಕೆಯೇರಿ ಮಾತನಾಡಿದ ವಿಸಿಎನ್ ಮಂಜು, “ಯತಿರಾಜ್ ಅವರ ಇಷ್ಟು ಚಿತ್ರಗಳಿಗಿಂತ ಇದು ನನಗೆ ತುಂಬ ಇಷ್ಟವಾಯಿತು” ಎಂದರು. ಕಲಾವಿದರಾದ ಶಾಂತಕುಮಾರ್, ಭಗತ್ ಮತ್ತು ಚಿತ್ರದ ಛಾಯಾಗ್ರಾಹಕ ಜೀವನ್ ರಾಜ್ ಉಪಸ್ಥಿತರಿದ್ದರು.
ಎಂಟು ನಿಮಿಷಗಳ ಚಿತ್ರದಲ್ಲಿ ಬೆರಳೆಣಿಕೆಯ ಪಾತ್ರಗಳೇ ಇದ್ದರೂ ಪ್ರತಿಯೊಂದಕ್ಕೂ ಅದರದ್ದೇ ಆದ ಗಟ್ಟಿತನವಿದೆ. ಸಂಭಾಷಣೆಯೇ ಇರದ ಪಾತ್ರಗಳಿಂದಲೂ ಅವುಗಳ ಇಮೇಜ್ ಹೊರಗಿಡುವ ಪ್ರಯತ್ನವನ್ನು ಯತಿರಾಜ್ ಯಶಸ್ವಿಯಾಗಿ ಮಾಡಿದ್ದಾರೆ. ವಿನುಮನಸು ಅವರ ಸಂಗೀತ, ಹಿನ್ನೆಲೆ ಸಂಗೀತ ಕೂಡ ಸಂದರ್ಭಕ್ಕೆ ಪೂರಕವಾಗಿದೆ.
ಪತ್ರಕರ್ತನಾಗಿ ಕೆಲಸ ಮಾಡುತ್ತಲೇ ನಟನಾಗಿಯೂ ಗಮನ ಸೆಳೆದ ಯತಿರಾಜ್ ‘ಫೇರ್ ಆ್ಯಂಡ್ ಲವ್ಲಿ’ ಎನ್ನುವ ಚಿತ್ರಕ್ಕೆ ಕತೆಯನ್ನೂ ಬರೆದಿದ್ದರು. ‘ಪೂರ್ಣ ಸತ್ಯ’ ಎನ್ನುವ ಸಿನಿಮಾ ನಿರ್ದೇಶಿಸಿದ ಹೊರತಾಗಿಯೂ ಲಾಕ್ಡೌನ್ ಟೈಮಲ್ಲಿ ಮಾಡಿದ ಕಿರುಚಿತ್ರಗಳಾದ ‘ಚಿಂಟು’, ‘ಸೌಂಡ್’ ಮೊದಲಾದವುಗಳು ಒಂದಷ್ಟು ಸೌಂಡ್ ಮಾಡಿದ್ದವು. “ಸೌಂಡ್ ಕಿರುಚಿತ್ರ ನೋಡಿ ಅದರ ಸಂದೇಶ ಅರ್ಥ ಮಾಡಿಕೊಂಡು ತಮ್ಮ ಬೈಕ್ ಸೌಂಡ್ ಬದಲಾಯಿಸಿದ ಘಟನೆಗಳೂ ನಡೆದಿವೆ” ಎನ್ನುವ ಅಪರೂಪದ ಸಂಗತಿಯನ್ನು ಹಂಚಿಕೊಂಡ ಯತಿರಾಜ್ ‘ಆರಾಧ್ಯ’ ಕೂಡ ಅಂಥ ಸಾಮಾಜಿಕ ಪರಿಣಾಮ ಬೀರುವ ಚಿತ್ರವಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಆರಾಧ್ಯ ಕಿರುಚಿತ್ರ ಈಗಾಗಲೇ ಕಲಾವಿಧ ಯೂಟ್ಯೂಬ್ ನಲ್ಲಿ ಲಭ್ಯವಿದ್ದು ವೀಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.