
ಯತಿರಾಜ್ ನಟನೆಯ `ಕಾಗೆ ಮೊಟ್ಟೆ’ ಕೊನೆಗೂ ಮರಿ ಹಾಕುವ ಕಾಲ ಕೂಡಿ ಬಂದಿದೆ! ಅಕ್ಟೋಬರ್ ಒಂದರಂದು ಕಾಗೆಮೊಟ್ಟೆ ಸಿನಿಮಾ ರಾಜ್ಯಾದ್ಯಂತ ನೂರಾರು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ.
“ಈ ಸಿನಿಮಾ ಎರಡು ವರ್ಷ ಮೊದಲೇ ಬರಬೇಕಿತ್ತು. ಆದರೆ ಅದಕ್ಕೆ ಹಲವಾರು ಕಾರಣಗಳಿವೆ. ಮೊದಲು, ಆನಂತರ ಎನ್ನುವುದು ನಮ್ಮ ಕೈಯ್ಯಲ್ಲಿ ಇರುವುದಿಲ್ಲ; ಉದಾಹರಣೆಗೆ ನನ್ನ ತೋತಾಪುರಿ’ ಚಿತ್ರವೇ ಮೂರು ವರ್ಷಗಳಿಂದ ತಡವಾಗುತ್ತಿದೆ. ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರುವಾಗ ಒಂದಲ್ಲ ಒಂದು ದಿನ ಅದಕ್ಕೆ ತಕ್ಕ ಫಲಿತಾಂಶ ಕಮಡಿತವಾಗಿ ದೊರಕುತ್ತದೆ. ಅಂಥ ನಿರೀಕ್ಷೆ ತಂದಿರುವಂಥ ಚಿತ್ರ ಇದು” ಎಂದರು ಜಗ್ಗೇಶ್. ಅವರು
ಕಾಗೆ ಮೊಟ್ಟೆ’ ಚಿತ್ರದ ಬಿಡುಗಡೆಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
“ಇಷ್ಟೊಂದು ಎಫರ್ಟ್ ಹಾಕಿ ಸಿನಿಮಾ ಮಾಡಿದ ಮತ್ತೊಂದು ತಂಡವನ್ನು ನಾನು ನೋಡಿಲ್ಲ” ಎಂದರು ಪರಿಮಳಾ ಜಗ್ಗೇಶ್. ಆರಂಭದಲ್ಲಿ ಚಿತ್ರದ ಒಂದು ಪೋಸ್ಟರ್ ಗಾಗಿ ಫೊಟೋ ಶೂಟ್ ಮಾಡಲು ಯಾವ ಮಟ್ಟಕ್ಕೆ ತಲೆ ಕೆಡಿಸಿಕೊಂಡಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ ಎಂದರು. ಚಿತ್ರಕ್ಕೆ ಸಂಭಾಷಣೆ ಬರೆದಿರುವ ವಿ ನಾಗೇಂದ್ರ ಪ್ರಸಾದ್ ಅವರು, ಯಾವುದೇ ಹಂಗಿಲ್ಲದ ರೀತಿಯಲ್ಲಿ ಬೆಳೆದ ಮೂವರು ಲೋಕಲ್ ಹುಡುಗರ ಕತೆಯನ್ನಿರಿಸಿಕೊಂಡಂಥ ಚಿತ್ರ ಇದು ಎಂದರು. ತುಂಬ ಸಮಯದ ಬಳಿಕ ಕಮರ್ಷಿಯಲ್ ಪಾತ್ರಗಳಿಗೆ ಬರೆದಿದ್ದೇನೆ ಎನ್ನುವುದು ಅವರ ಮಾತಾಗಿತ್ತು.
ಚಿತ್ರದ ನಾಯಕ ಗುರುರಾಜ್ ಮಾತನಾಡಿ, “ಸಿನಿಮಾ ತಡವಾಗಿದೆ ಎಂದು ಗೊತ್ತು. ಆದರೆ ಇದರ ಕಂಟೆಂಟ್ ಯಾವತ್ತಿಗೂ ಹಳೆಯದಾಗದು, ಯಾಕೆಂದರೆ ಇದು ಫ್ರೆಂಡ್‌ಶಿಪ್ ಕುರಿತಾದ ಚಿತ್ರ. ಫ್ರೆಂಡ್‌ಶಿಪ್ ಎನ್ನುವುದು ಔಟ್‌ಡೇಟೆಡ್ ಆಗುವುದೇ ಇಲ್ಲ. ಹಳ್ಳಿಯಲ್ಲಿ ರಾಬರಿ ಮಾಡಿಕೊಂಡು ಬೆಳೆದ ಮೂವರು ಹುಡುಗರ ಕತೆ ಇದು. ಇವರ ದೃಷ್ಟಿಯಲ್ಲಿ ದೊಡ್ಡವರು, ಚಿಕ್ಕವರು ಎನ್ನುವ ವ್ಯತ್ಯಾಸವೇ ಇರುವುದಿಲ್ಲ! ಅಂದುಕೊಂಡಿದ್ದನ್ನು ಸಾಧಿಸುವ ಪ್ರಯತ್ನದವರು” ಎಂದು ತಮ್ಮ ಪಾತ್ರವನ್ನು ಸೇರಿಸಿ ವಿವರಿಸಿದರು. ಈ ಸಂದರ್ಭದಲ್ಲಿ ಮೂವರು ಹುಡುಗರಿಗೆ ಸಪೋರ್ಟಿವ್ ಆಗಿರುವಂಥ ವೇಶ್ಯೆಯೊಬ್ಬಳ ಪಾತ್ರವನ್ನು ನಟಿ ಸೌಜನ್ಯ ನಿರ್ವಹಿಸಿದ್ದಾರೆ.
ಕಾಗೆಮೊಟ್ಟೆ ನಿರ್ದೇಶಕ ಬಿ.ಕೆ ಚಂದ್ರಹಾಸ್ ಸಿನಿಮಾಗೆ ನಿರ್ಮಾಪಕರೂ ಹೌದು. ಪಿ ಎಲ್ ರವಿ ಛಾಯಾಗ್ರಾಹಕರು. ಶರತ್ ಲೋಹಿತಾಶ್ವ, ಗುಂಡ್ರುಗೋವಿ ಸತ್ಯ, ತಮಿಳಿನ ಪೊನ್ನಂಬಲಮ್ ಮೊದಲಾದವರು ನಟಿಸಿದ್ದಾರೆ. ಈಗಾಗಲೇ ಸಿನಿಮಾರಂಗದ ನಿರ್ದೇಶನ, ನಿರ್ಮಾಣ, ವಿತರಣೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಜಗ್ಗೇಶ್ ಅವರು ಈ ಚಿತ್ರದಲ್ಲಿ ಒಂದು ಬಿಟ್ ಸಾಂಗ್ ಕೂಡ ರಚಿಸಿದ್ದಾರಂತೆ. ಶ್ರೀವತ್ಸ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಿತರಕ ಆಟೊ ರಾಜ ಅವರು ಹೇಳುವ ಪ್ರಕಾರ ಸಿನಿಮಾವು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.