ಕನ್ನಡದ ಜನಪ್ರಿಯ ಕಿರುತೆರೆ ನಟಿ, ಕನ್ನಡತಿ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್. ಅವರು ಸ್ವತಃ ಬರೆದಿರುವ ಕತೆಗಳ ಸಂಕಲನ
ಕತೆಡಬ್ಬಿ’ಯ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಸಮಾರಂಭದಲ್ಲಿ ಜನಪ್ರಿಯ ಸಾಹಿತಿಗಳಾದ ಜೋಗಿ, ಚಿತ್ರ ನಿರ್ದೇಶಕ ಜಯತೀರ್ಥ, ಚಿತ್ರನಟ ರಿಷಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪುಸ್ತಕ ಲೋಕಾರ್ಪಣೆಯ ಬಳಿಕ ರಂಜನಿ ತಂದೆ ರಾಘವನ್ ಮಾತನಾಡಿ, “ಬಾಲ್ಯದಲ್ಲಿ ರಂಜನಿ ಕು.ವೆಂ.ಪು ಕಲಾಕ್ಷೇತ್ರದಲ್ಲಿ “ಏರುತಿಹುದು ಆರುತಿಹುದು ನೋಡು ನಮ್ಮ ಬಾವುಟ..” ಎನ್ನುವ ದೇಶಭಕ್ತಿಗೀತೆಯೊಂದಿಗೆ ಹಾಡಿನಲ್ಲಿರುವ ತನ್ನ ಪ್ರತಿಭೆ ತೋರಿಸಿ ಜನಮನ ಗೆಲ್ಲಲು ಆರಂಭಿಸಿದ್ದಳು. ಎಂಟು ವರ್ಷದವಳಾಗಿದ್ದಾಗಲೇ ಸಂಗೀತ ಕಲಿಸಲು ಶುರು ಮಾಡಿದ್ದೇವೆ. ಮನೆಯ ವಾತಾವರಣದಲ್ಲಿ ಸಂಗೀತ, ಕಲೆಗಳಲ್ಲಿ ಆಸಕ್ತಿ ಮೂಡಿಸಿದ್ದೇವೆ. ಅದೇ ಇಂದು ಆಕೆಗೆ ಸಾಹಿತ್ಯದ ಮೇಲೆ, ಬರವಣಿಗೆಯ ಮೇಲೆ ಆಸಕ್ತಿ ಮೂಡಿಸಲು ಕಾರಣವಾಗಿದೆ. ಎಲ್ಲರ ಮನೆಯಲ್ಲಿಯೂ ಇಂಥ ವಾತಾವರಣ ಸೃಷ್ಟಿಯಾದರೆ ಮಕ್ಕಳು ಮೊಬೈಲಿನೊಂದಿಗೆ ಕಾಲ ಕಳೆಯುವುದು ಕಡಿಮೆಯಾಗುತ್ತದೆ ಎಂದರು. ನಿಜ ಹೇಳಬೇಕೆಂದರೆ ರಂಗಭೂಮಿಯ ನಟನೆ, ಧಾರಾವಾಹಿಯಲ್ಲಿನ ಅಭಿನಯ ಮೊದಲಾದವು ಎಲ್ಲವೂ ಅವಳದೇ ಆಯ್ಕೆಯಾಗಿತ್ತು. ಆದರೆ ಅಲ್ಲಿಯೂ ಇವತ್ತು ಆಕೆ ಒಳ್ಳೆಯ ಹೆಸರು ಮಾಡಿದ್ದಾಳೆಂದರೆ `ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು’ ಎನ್ನುವುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ” ಎಂದರು. “ಹಿತ್ತಲ ಗಿಡ ಮದ್ದಲ್ಲ” ಎಂದು ನಾವು ಮನೆಯಲ್ಲಿ ಹೊಗಳುವುದಿಲ್ಲ. ಆದರೆ ಇಂಥದೊಂದು ವೇದಿಕೆಯಲ್ಲಿ ಎಲ್ಲರಿಂದ ಹೊಗಳಿಸಿಕೊಂಡಿರುವುದನ್ನು ಕಂಡಾಗ ನನ್ನ ಮನದ ಮಾತನ್ನೂ ಹೇಳಬೇಕೆನಿಸಿತು ಎಂದು ರಾಘವನ್ ಹೇಳಿದರು.
ಕತೆಗಾರ್ತಿ ರಂಜನಿ ಮಾತನಾಡಿ, “ಇಂದು ಜೀವನದ ಅತ್ಯಮೂಲ್ಯವಾದ ದಿನ ಎಂದುಕೊಂಡಿದ್ದೇನೆ. ಇದುವರೆಗಿನ ಎಲ್ಲ ಪ್ರಯತ್ನದ ಮೊದಲ ಫಲಿತಾಂಶ ಎಂದುಕೊಂಡಿದ್ದೇನೆ. ನನ್ನ ಪ್ರಪಂಚ ಎಂದುಕೊಳ್ಳುವ ಆತ್ಮೀಯರು ಎಲ್ಲರೂ ಇದ್ದಾರೆ. ಇದುವರೆಗೆ ನಾನು ತೊಡಗಿಸಿಕೊಂಡ ಕ್ಷೇತ್ರಗಳಲ್ಲಿ ಹೆಸರು ಮಾಡಲು ನಾನು ಮಾತ್ರ ಕಾರಣವಾಗಿರುವುದಿಲ್ಲ. ಯಾಕೆಂದರೆ ಅಲ್ಲಿ ಒಂದು ತಂಡದ ಪ್ರಯತ್ನವಿರುತ್ತದೆ. ಆದರೆ ಮೊದಲ ಬಾರಿಗೆ ನನಗೆ ಹೆಚ್ಚಿನ ಪಾಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಈ ಕಥಾ ಸಂಕಲನ ಸಾಧ್ಯಮಾಡಿಕೊಟ್ಟಿದೆ” ಎಂದು ಸಂತೃಪ್ತಿ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಫಾಲೋ ಮಾಡುವವರ ಪ್ರೋತ್ಸಾಹ ಕೂಡ ಖಂಡಿತವಾಗಿ ನನಗೆ ಸ್ಫೂರ್ತಿಯಾಗಿದೆ. ಕತೆ ಬರೆದಾಕ್ಷಣ ಮನೆಯಲ್ಲಿ ಎಲ್ಲರೊಂದಿಗೆ ಹಂಚಿಕೊಂಡಾಗ ಅವರು ನೀಡುತ್ತಿದ್ದ ಪ್ರತಿಕ್ರಿಯೆಗಳು ಮತ್ತಷ್ಟು ಕತೆ ಬರೆಯುವಂತೆ ಪ್ರೇರೇಪಿಸಿದ್ದವು” ಎಂದರು.
ಲೇಖಕರ ಕನಸನ್ನು ಅದೇ ರೀತಿಯಲ್ಲಿ ಸಾಕಾರಗೊಳಿಸುವ ಪ್ರಕಾಶಕ ಸಂಸ್ಥೆಯೇ ಬಹುರೂಪಿ ಎಂದರು ಅದರ ಸ್ಥಾಪಕ ಜಿ ಎನ್ ಮೋಹನ್. 42 ಪುಸ್ತಕಗಳಲ್ಲಿ ಈ ಪುಸ್ತಕ ಹೆಚ್ಚಿನ ಸಂಭ್ರಮ ನೀಡಿದೆ. ಅದಕ್ಕೆ ಕಾರಣ ರಂಜನಿ ಸೆಲೆಬ್ರಿಟಿ ಎನ್ನುವುದಕ್ಕೆ ಮಾತ್ರವಲ್ಲ, ಅವರ ಗುಣದಿಂದ ಸಿಕ್ಕ ಪ್ರಭಾವ ಅದು ಎಂದರು. ಮಾತ್ರವಲ್ಲ, ಇದುವರೆಗಿನ 42 ಪುಸ್ತಕಗಳ ಮಾರಾಟದ ದಾಖಲೆಯನ್ನು ಬಿಡುಗಡೆಗೆ ಮೊದಲೇ ಮುರಿಯುವ ಸ್ಪಷ್ಟ ಲಕ್ಷಣಗಳನ್ನು `ಕತೆ ಡಬ್ಬಿ’ ಅದರ ಅಡ್ವಾನ್ಸ್ ಬುಕ್ಕಿಂಗ್ ಮೂಲಕವೇ ತೋರಿಸಿಕೊಟ್ಟಿದೆ ಎಂದರು.
ಪುಸ್ತಕವು ತಂದೆ, ತಾಯಿ ಸಹೋದರಿಯರಾದ ಸೌಧಾಮಿನಿ ಮತ್ತು ವೈಷ್ಣವಿ ಹಸ್ತಗಳಿಂದ ಬಿಡುಗಡೆಯಾಗಿದ್ದು ವಿಶೇಷ. ಸಾಹಿತಿ ಜೋಗಿಯವರು ಮಾತನಾಡುತ್ತಾ “ಮೊದಲನೆಯದಾಗಿ ಪುಸ್ತಕದ ಲುಕ್ ಚೆನ್ನಾಗಿದೆ. ಕಥಾಪುಸ್ತಕದ ಒಳಪುಟಗಳು ಬಣ್ಣಗಳಿಂದ ಕೂಡಿರುವುದು ವಿಶೇಷ. ರಂಜನಿಯವರು ಸ್ನೇಹಿತ ವಿಕಾಸ್ ನೇಗಿಲೋಣಿಯವರ ಪುಸ್ತಕಕ್ಕೆ ಬರೆದ ಮುನ್ನುಡಿ ಕಂಡು ಇವರು ಕೂಡ ಕತೆ ಬರೆಯಬಹುದೇನೋ ಎಂದು ಪ್ರಶ್ನಿಸಿದ್ದೆ. ಅಷ್ಟರಲ್ಲಿ ರಂಜನಿಯವರು ಕೆತೆ ಬರೆದು ಕಳಿಸಿಯೇ ಬಿಟ್ಟಿದ್ದರು. ಹಾಗೆ ನಾಲ್ಕೈದು ತಿಂಗಳೊಳಗೆ ಹುಟ್ಟಿಕೊಂಡಿರುವ ಕಥಾ ಸಂಕಲನ ಇದು. ಇತ್ತೀಚೆಗೆ ಮೂವತ್ತು ವರ್ಷದೊಳಗಿನವರೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಟೀಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಆ ವಯಸ್ಸಿನೊಳಗೆ ಟೀಕೆ ಮಾಡುವುದಕ್ಕಿಂತ ಹೆಚ್ಚು ನೋಡಿ, ಓದಿ ಕಲಿಯುವುದು ತುಂಬ ಇರುತ್ತದೆ. ಮೊದಲು ಸುತ್ತಮುತ್ತಲಿನ ಜಗತ್ತನ್ನು ಮನಸು ತೆರೆದು ಆನಂದದಿಂದ ಅನುಭವಿಸಲು ಕಲಿಯಬೇಕು. ಅದರ ಬಳಿಕ ಮಾತ್ರ ವಿಮರ್ಶೆಗೆ ಸ್ಥಾನ” ಎಂದರು.
ಓದಿದ ಹದಿನಾಲ್ಕು ಕತೆಗಳು ಜೀವನವನ್ನು ಅವರು ನೋಡಿದ ರೀತಿ ಇರುವ ಸ್ಥಿತಿ ಮತ್ತು ಇರಬೇಕಾದ ಸ್ಥಿತಿಯ ಕುರಿತಾದ ಕತೆ. ವಾಸ್ತವ ಮತ್ತು ಆಶಯವನ್ನು ಇರಿಸಿಕೊಂಡಿರುವ ಕತೆಗಳು. ವೀಕೆಂಡ್ ಸ್ವಯಂವರ ಸೇರಿದಂತೆ ಒಂದಷ್ಟು ಕತೆಗಳಲ್ಲಿನ ಸಂದರ್ಭಗಳನ್ನು ಉದಾಹರಣೆ ಸಮೇತ ಉಲ್ಲೇಖ ಮಾಡಿ ಪಾತ್ರಗಳೊಳಗಿನ ದ್ವಂದ್ವಕ್ಕೆ ಧ್ವನಿಯಾಗಿರುವುದನ್ನು ಜೋಗಿ ಪ್ರಶಂಸಿಸಿದರು. `ಕಾಣೆಯಾದವರ ಬಗ್ಗೆ ಪ್ರಕಟಣೆ’ ಎನ್ನುವ ಕತೆ ಅದುವರೆಗಿನ ಎಲ್ಲ ಕತೆಗಳನ್ನು ಮೀರಿದ ಹಂತದಲ್ಲಿದೆ. ಕೋತಿಯ ಮೂಲಕ ಮನುಷ್ಯನ ದಾಹವನ್ನು, ಪಿಪಾಸುತನವನ್ನು ಪರೋಕ್ಷವಾಗಿ ಹೇಳಿರುವುದು ಕತೆಯ ಶಕ್ತಿಯನ್ನು ತೋರಿಸುತ್ತದೆ. ಸಾಮಾನ್ಯವಾಗಿ ಕತೆ ಬರೆಯುವಾಗ ಕಟ್ಟಿದ ಕತೆ ಮತ್ತು ಹುಟ್ಟಿದ ಕತೆ ಎನ್ನುವ ವಿಭಾಗಗಳಿರುತ್ತವೆ. ಕಟ್ಟಿದ ಕತೆಯಲ್ಲಿ ಬುದ್ಧಿಗೆ ಹೆಚ್ಚು ಪಾಲು ನೀಡಿ ಕತೆಯನ್ನು ತರ್ಕಬದ್ಧಗೊಳಿಸುವ ಪ್ರಯತ್ನ ಇರುತ್ತದೆ. ಆದರೆ ಹುಟ್ಟಿದ ಕತೆಗಳಲ್ಲಿ ವಿಚಾರಕ್ಕೆ ಬಂದರೆ ನಾವು ಅನುಭವಿಸಿದ ವಿಚಾರಗಳು ತುಂಬಿರುತ್ತವೆ. ನಿಮ್ಮ ಜೀವನ, ನಟನೆ ಎಲ್ಲವೂ ಸೇರಿಕೊಂಡ ಕತೆಗಳು ಇದ್ದಾಗ ಇನ್ನಷ್ಟು ಚೆನ್ನಾಗಿರುತ್ತವೆ. ಐದು ಪರ್ಸೆಂಟ್ ಆದರೂ ನಮ್ಮ ಅನುಭವಗಳು ಕತೆಯೊಳಗೆ ಇರಬೇಕು. ನಟನಾ ಜಗತ್ತು ಅಲ್ಲಿನ ಸತ್ಯಗಳು ಪರೋಕ್ಷವಾಗಿ ಕತೆಯೊಳಗೆ ಇದ್ದರೆ ಚೆನ್ನಾಗಿರುತ್ತದೆ. ಮುಂದಿನ ಸಂಕಲನಗಳಲ್ಲಿ ಅಂಥ ಪ್ರಯತ್ನ ಹೆಚ್ಚಾಗಿರಲಿ ಎಂದು ಹಾರೈಸಿದರು.
ಕನ್ನಡತಿ’ ಧಾರಾವಾಹಿಯ ಕೊನೆಗೆ ಪ್ರಸಾರವಾಗುವ
ಸರಿಗನ್ನಡಂ ಗೆಲ್ಗೆ’ ಕಾರ್ಯಕ್ರಮ ನೋಡಿ ಮೆಚ್ಚಿ ಅದರ ಹಿನ್ನೆಲೆಯಲ್ಲಿ ಕೆಲಸ ಮಾಡಿರುವವರಿಗೆ ಅಭಿನಂದನೆ ಹೇಳಲು ರಂಜನಿ ನಂಬರ್ ಪಡೆದುಕೊಂಡಿದ್ದೆ ಎಂದು ತಮಗೆ ರಂಜನಿ ಪರಿಚಯವಾದ ಸಂದರ್ಭವನ್ನು ನೆನಪಿಸಿಕೊಂಡರು ನಿರ್ದೇಶಕ ಜಯತೀರ್ಥ. ಬಳಿಕ ಅದೇ ಸಂಪರ್ಕ ನಮ್ಮ ಮುಂದಿನ ಹೊಸ ಪ್ರಾಜೆಕ್ಟ್ ನಲ್ಲಿ ಇವರೂ ಭಾಗಿಯಾಗುವಂತಾಯಿತು. ಇವರ ಗಾಯನ ಪ್ರತಿಭೆಯನ್ನು ಕಂಡು ಒಂದು ಹಾಡಿನ ಸನ್ನಿವೇಶವನ್ನು ಸೃಷ್ಟಿಸಿದ್ದೇನೆ. ನಮ್ಮ ಪ್ರಯತ್ನ ತೃಪ್ತಿ ತರುವಂತೆ ಮಾಡುವಲ್ಲಿ ರಂಜನಿ ಗೆದ್ದಿದ್ದಾರೆ. ಅವರಿಗೆ ಇರುವ ಓದುವ, ಬರೆಯುವ ಹವ್ಯಾಸದಿಂದಾಗಿ ಇತರ ನಟಿಯರಿಗಿಂತ ಯಾವತ್ತಿಗೂ ಖುಷಿಯಲ್ಲಿರುತ್ತಾರೆ. ಇಷ್ಟು ಜನಪ್ರಿಯತೆ ಇರುವ ನಟಿ ಬರೆಯುತ್ತಿರುವ ಕಾರಣ ಇವರ ಬರವಣಿಗೆಗಳನ್ನು ಓದಲೆಂದು ಹೊಸ ಓದುಗರು ಬರುತ್ತಿದ್ದಾರೆ. ಹೊಸ ಓದುಗರು ಇಷ್ಟಪಡುವಂತೆ ತುಂಬ ಸರಳವಾಗಿ ಬರೆದಿದ್ದಾರೆ ಕೂಡ. ಹಾಗಾಗಿ ಕತೆಡಬ್ಬಿ ಖಂಡಿತವಾಗಿ ಕನ್ನಡದಲ್ಲಿ ಹೆಚ್ಚು ಮಂದಿ ಓದುಗರನ್ನು ಸೃಷ್ಟಿಸಲಿದೆ ಎಂದು ಖುಷಿ ವ್ಯಕ್ತಪಡಿಸಿದರು .
ರಂಜನಿಯವರು ಪಾತ್ರಗಳ ಆಯ್ಕೆ ಮಾಡುವ ರೀತಿ ನೋಡಿದರೆ ಅವರು ಚಿತ್ರರಂಗ ಮತ್ತು ಸಾಹಿತ್ಯ ರಂಗದಲ್ಲಿ ಸದಾ ಸಕ್ರಿಯರಾಗಿರುತ್ತಾರೆ ಎನ್ನುವ ಭರವಸೆ ತಮಗಿದೆ ಎಂದು ನಟ ರಿಷಿ ಅನಿಸಿಕೆ ವ್ಯಕ್ತಪಡಿಸಿದರು.