ತೆರೆ ಮೇಲೆ `ಇದು ಆಕಾಶವಾಣಿ ಬೆಂಗಳೂರು ನಿಲಯ’

ಬೆಳ್ಳಿ ಪರದೆಯ ಮೇಲೆ ಆಕಾಶವಾಣಿ ಕಾಣಿಸಲಿದೆ! ಹೌದು, `ಇದು ಆಕಾಶವಾಣಿ ಬೆಂಗಳೂರು ನಿಲಯ’ ಹೆಸರಿನ ಸಿನಿಮಾ ನಾಳೆ ಅಕ್ಟೋಬರ್ 8ರಿಂದ ರಾಜ್ಯಾದ್ಯಂತ ತೆರೆಕಾಣಲಿದೆ.

ಈ ಹಿಂದೆ ನಾವೇ ಭಾಗ್ಯವಂತರು’ ಎನ್ನುವ ಚಿತ್ರ ನಿರ್ದೇಶಿಸಿದ್ದ ಎಂ ಹರಿಕೃಷ್ಣ ಅವರ ನಿರ್ದೇಶನದ ಎರಡನೇ ಸಿನಿಮಾಆಕಾಶವಾಣಿ ಬೆಂಗಳೂರು ನಿಲಯ’. ಅಂದಹಾಗೆ ಚಿತ್ರದ ಹೆಸರಿಗೂ ಒಳಗಿನ ಕತೆಗೂ ದೊಡ್ಡ ಸಂಬಂಧವೇನೂ ಇಲ್ಲವಂತೆ. ಹಾಗಾಗಿ ಇಂದು ಬೆಂಗಳೂರು ಆಕಾಶವಾಣಿಯ ಕತೆಯಲ್ಲ. ಆದರೆ ರೇಡಿಯೋ ಕೂಡ ಚಿತ್ರದಲ್ಲೊಂದು ಪಾತ್ರವಾಗಿರುವ ಕಾರಣ ಇಂಥದೊಂದು ಹೆಸರನ್ನು ಇಡಲಾಗಿದೆ ಎಂದು ನಿರ್ದೇಶಕ ಎಂ ಹರಿಕೃಷ್ಣ ತಿಳಿಸಿದ್ದಾರೆ.

“ಇದೊಂದು ಹಾರರ್ ಸಬ್ಜೆಕ್ಟ್. ಜೊತೆಗೆ ಮಹಿಳಾ ಪ್ರಧಾನ್ಯತೆಯೂ ಇದೆ. ಹಳ್ಳಿಯಲ್ಲಿ ಮೋಸಕ್ಕೆ ಒಳಗಾದ ಯುವತಿ ಬೆಂಗಳೂರಿಗೆ ಬಂದಾಗ ಆಕೆಯನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತೆ ಎನ್ನುವುದನ್ನು ಕೂಡ ಚಿತ್ರದಲ್ಲಿ ತೋರಿಸಲಾಗಿದೆ. ಹಳ್ಳಿ ಹುಡುಗಿಯಾಗಿ ನಾನು ನಟಿಸಿದ್ದೇನೆ” ಎಂದರು ಚಿತ್ರದ ನಾಯಕಿ ನಿಖಿತಾ ಸ್ವಾಮಿ. ಮ್ಯಾಟ್ರಿಮೊನಿಯಲ್ಲಿ ಆಗುವ ಮೋಸದ ಬಗ್ಗೆಯೂ ಚಿತ್ರ ಹೇಳಲಿದೆ. ಇಂಥದೊಂದು ಚಿತ್ರ ತಂಡವನ್ನು ಪರಿಚಯ ಮಾಡಿಕೊಟ್ಟ ನಟ ನಾರಾಯಣ ಸ್ವಾಮಿಯವರಿಗೆ ಕೃತಜ್ಞರಾಗಿರುವುದಾಗಿ ಅವರು ಹೇಳಿದರು. ಚಿತ್ರದ ನಾಯಕ ಉತ್ತರ ಕರ್ನಾಟಕದ ಪ್ರತಿಭೆ ರಣವೀರ್ ಪಾಟೀಲ್. ಅವರು ಕೂಡ ನಾರಾಯಣ ಸ್ವಾಮಿಗೆ ವಂದನೆ ಹೇಳಿ ಮಾತು ಶುರು ಮಾಡಿದರು. ಚಿತ್ರದಲ್ಲಿ ಮೂರು ಶೇಡ್ ಇರುವ ಪಾತ್ರ ತಮ್ಮದಾಗಿದ್ದು, ಮೂರು ಕೂಡ ಮೂರು ರೀತಿಯಲ್ಲಿರುತ್ತದೆ. ಅದರಲ್ಲಿ ಒಂದು ದೆವ್ವದ ಪಾತ್ರವೂ ಇದೆ ಎಂದರು.

ನಟ ನಾರಾಯಣ ಸ್ವಾಮಿ ಮಾತನಾಡಿ, ನಿರ್ದೇಶಕ ಹರಿಯವರು ಕಲಾ ನಿರ್ದೇಶಕ ಮುದ್ದುಕೃಷ್ಣರ ಪುತ್ರ. ವಜ್ರೇಶ್ವರಿಯಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ನನಗೆ ಅವರೊಂದಿಗೆ ಎರಡು ದಶಕಗಳ ಸ್ನೇಹವಿದೆ. ಅವರ ಹಿಂದಿನ ಚಿತ್ರದಲ್ಲಿ ಖಳನಟನಾಗಿದ್ದೆ. ಈ ಸಿನಿಮಾದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ ನೀಡಿದ್ದಾರೆ. ಪ್ಯಾಂಡಮಿಕ್ ಸಮಯದಲ್ಲಿಯೂ ಚಿತ್ರೀಕರಣ ಮಾಡಿ ಪೂರ್ತಿಗೊಳಿಸಿದ ನಿರ್ಮಾಪಕರನ್ನು ಮೆಚ್ಚಲೇಬೇಕು ಎಂದರು.

ಚಿತ್ರದಲ್ಲೊಂದು ಪಾತ್ರ ನಿಭಾಯಿಸಿರುವ ಟೆನ್ನಿಸ್ ಕೃಷ್ಣ ಅವರು ಮಾತನಾಡಿ, “ಕೊರೊನಾ ಟೈಮಲ್ಲಿ ಮನೆಯಲ್ಲೇ ಕುಳಿತಿದ್ದಾಗ ಸಿಕ್ಕ ಅವಕಾಶ ಇದು. ಚಿತ್ರ ಚೆನ್ನಾಗಿ ಬಂದಿದೆ” ಎಂದರು. `ಕಾಮಿಡಿ ಕಿಲಾಡಿ’ ಖ್ಯಾತಿಯ ದಿವ್ಯಾ ಮಂಡ್ಯದ ಕಡೆಯ ಮನೆ ಕೆಲಸದ ಮಹಿಳೆಯ ಪಾತ್ರ ಮಾಡಿರುವುದಾಗಿ ತಿಳಿಸಿದರು.ಗೀತ ರಚನೆಕಾರ ಶಿವರಾಜ್ ಗುಬ್ಬಿ ಅವಕಾಶಕ್ಕಾಗಿ ಸಂಗೀತ ನಿರ್ದೇಶಕ ಎ.ಟಿ ರವೀಶ್ ಅವರಿಗೆ ಧನ್ಯವಾದ ಹೇಳಿದರು.

ಸಿನಿಮಾದಲ್ಲಿ ಹಿರಿಯ ನಟನರಾದ ಸುಚೇಂದ್ರ ಪ್ರಸಾದ್, ನಾಗೇಂದ್ರ ಶಾ ಮೊದಲಾದವರ ತಾರಾಗಣವಿದೆ. ವಿಜಯಕುಮಾರ್ ಅವರು ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದು ಚಿತ್ರಕ್ಕೆ ಪ್ರವೀಣ್ ಶೆಟ್ಟಿ ಛಾಯಾಗ್ರಹಣ, ಪವನ್ ಗೌಡ ಸಂಕಲನ ಇದೆ. ಚಿತ್ರವನ್ನು ಬೆಂಗಳೂರು, ತಿಪಟೂರು ಹಾಗೂ ನೊಣವಿನಕೆರೆ ಮೊದಲಾದೆಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಶಿವಾನಂದಪ್ಪ ಬಳ್ಳಾರಿಯವರು ಚಿತ್ರವನ್ನು ನಿರ್ಮಿಸಿದ್ದಾರೆ.

Recommended For You

Leave a Reply

error: Content is protected !!