ಖ್ಯಾತ ಮಲಯಾಳಂ ನಟ ನಿಧನ

ಮಲಯಾಳಂನ ಖ್ಯಾತ ನಟ ನೆಡುಮುಡಿ ವೇಣು (73) ನಿಧನರಾಗಿದ್ದಾರೆ. ತಿರುವನಂತಪುರದ ಖಾಸಗಿ ಆಸ್ಪತ್ರೆ ಇಂದು ಮಧ್ಯಾಹ್ನ ಅವರ ಸಾವನ್ನು ದೃಢಪಡಿಸಿದೆ.

ಕಳೆದ ನಾಲ್ಕು ದಶಕಗಳಿಂದ ಮಲಯಾಳ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರ ನಟನೆಯ ನಾಲ್ಕು ಚಿತ್ರಗಳು ಇನ್ನೂ ಬಿಡುಗಡೆ ಕಾಣಬೇಕಿದೆ. ಅವುಗಳಲ್ಲಿ ಮೋಹನ್ ಲಾಲ್ ನಾಯಕರಾಗಿ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಕಾಣುತ್ತಿರುವ ಪ್ರಿಯದರ್ಶನ್ ಸಿನಿಮಾ ‘ಮರಕ್ಕಾರ್- ಅರಬಿ ಕಡಲಿಂಡೆ ಸಿಂಹ’ ಕೂಡ ಸೇರಿದೆ.

ನಾಯಕನಾಗಿ, ಪೋಷಕ ನಟನಾಗಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ನೆಡುಮುಡಿವೇಣು ನಿರ್ದೇಶಕನಾಗಿಯೂ ಚಿತ್ರ ಮಾಡಿದ್ದರು. ಮೂಲತಃ ರಂಗಭೂಮಿ ಕಲಾವಿದರಾಗಿದ್ದ ಅವರು ಮೃದಂಗ ನುಡಿಸುವುದರಲ್ಲಿಯೂ ಪರಿಣಿತರಾಗಿದ್ದರು. ಒಟ್ಟು ಮೂರು ಬಾರಿ ಅವರ ನಟನೆಯು ರಾಷ್ಟ್ರ ಪ್ರಶಸ್ತಿ ವಿಭಾಗದಲ್ಲಿ ಗುರುತಿಸಿಕೊಂಡಿದ್ದರೆ ಆರು ಬಾರಿ ಕೇರಳ ಶ್ರೇಷ್ಠ ನಟನಾಗಿ ಕೇರಳ ರಾಜ್ಯ ಸರ್ಕಾರದ ಪ್ರಶಸ್ತಿ ಬಾಚಿಕೊಂಡಿದ್ದರು.

ನಿಜ‌ ಜೀವನದಲ್ಲಿಯೂ ಮೋಹನ್ ಲಾಲ್ ಗೆ ಆತ್ಮೀಯ ವಲಯದಲ್ಲಿದ್ದ ನೆಡುಮುಡಿ ವೇಣು ಸಿನಿಮಾಗಳಲ್ಲಂತೂ ಮೋಹನ್ ಲಾಲ್ ಜೊತೆಗಿನ ದೃಶ್ಯಗಳನ್ನು ಅವಿಸ್ಮರಣೀಯಗೊಳಿಸಿದ್ದಾರೆ. ಸ್ನೇಹಿತನಾಗಿ, ಅಣ್ಣನಾಗಿ, ಖಳನಾಗಿ, ತಂದೆಯಾಗಿ ಅವರು ನೀಡಿರುವ ನಟನೆ ಪ್ರತಿ ಬಾರಿಯೂ ಪ್ರಶಂಸಿಸಲ್ಪಟ್ಟಿದೆ. ವೈವಿಧ್ಯಮಯ ಪಾತ್ರಗಳನ್ನು ಲೀಲಾಜಾಲವಾಗಿ ನಟಿಸುವ ಮೂಲಕ ದೇಶದ ಶ್ರೇಷ್ಠ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ನೆಡುಮುಡಿ ವೇಣು ಅವರ ನಿಧನ ನಿಜಕ್ಕೂ ಮಲಯಾಳಂ ಚಿತ್ರರಂಗದ ನಷ್ಟ ಎಂದು ಹೇಳಬಹುದು.

Recommended For You

Leave a Reply

error: Content is protected !!
%d bloggers like this: