ಸಾಗರ್ ಪುರಾಣಿಕ್ ಈಗಾಗಲೇ ತಮ್ಮ ಕಿರುಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ಯುವ ಪ್ರತಿಭೆ. ಇದೀಗ ಅವರ ನಿರ್ದೇಶಿಸಿರುವ ಸಿನಿಮಾ ‘ಡೊಳ್ಳು' ಪ್ರತಿಷ್ಠಿತ 20ನೇ ವರ್ಷದ '
ಢಾಕಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ಆಯ್ಕೆಯಾಗಿದೆ. ಕನ್ನಡದ ಜನಪ್ರಿಯ ನಿರ್ದೇಶಕ ಪವನ್ ಒಡೆಯರ್ ದಂಪತಿ ನಿರ್ಮಿಸಿರುವ ಚಿತ್ರ ಇದು. ಆಯ್ಕೆಯ ಖುಷಿಯನ್ನು ನಿರ್ದೇಶಕ ಸಾಗರ್ ಪುರಾಣಿಕ್ ಸಿನಿಕನ್ನಡ.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
`ಡೊಳ್ಳು’ ಚಿತ್ರದ ವಿಶೇಷತೆಗಳೇನು?
ಡೊಳ್ಳು ಎನ್ನುವ ಒಂದೂವರೆ ಗಂಟೆಯ ಈ ಸಿನಿಮಾದಲ್ಲಿ ನಗರೀಕರಣದ ಕುರಿತಾದ ಗಂಭೀರ ವಿಚಾರವನ್ನು ಆಯ್ಕೆ ಮಾಡಿದ್ದೇನೆ. ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯವಾಗಿ ಗುರುತಿಸಿಕೊಂಡಿರುವ ಕಲೆಗಳು ಹೇಗೆ ನಗರೀಕರಣದ ಮೂಲಕ ನಾಶವಾಗುತ್ತಿವೆ, ಅಂದರೆ ಜಾನಪದ ಕಲೆಗಳ ಮೇಲೆ ಅವುಗಳು ಹೇಗೆ ದುಷ್ಪರಿಣಾಮ ಬೀರುತ್ತಿವೆ ಎನ್ನುವುದು ಸಬ್ಜೆಕ್ಟ್. ಅಂದರೆ ಗ್ರಾಮೀಣ ಪ್ರದೇಶದವರು ಕೆಲಸಕ್ಕಾಗಿ ಊರು ಬಿಟ್ಟು ನಗರಕ್ಕೆ ಹೋಗುವುದು ತಪ್ಪಲ್ಲ. ಆದರೆ ನಗರದ ಸಂಸ್ಕೃತಿಯನ್ನೇ ಹರಡತೊಡಗಿದಾಗ ಹೇಗೆ ಗ್ರಾಮೀಣರ ಸಂಪ್ರದಾಯ, ಕಲೆಗಳು ಇನ್ನಿಲ್ಲವಾಗುತ್ತಿವೆ ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ.
ಇದನ್ನು ಯಾವ ಗ್ರಾಮದ ಕತೆಯಾಗಿ ತೋರಿಸಿದ್ದೀರಿ?
ವಾಸ್ತವದಲ್ಲಿ ಡೊಳ್ಳಿನ ಹಿನ್ನೆಲೆ ಯಾವ ಊರಿನದ್ದು ಎನ್ನುವ ಬಗ್ಗೆ ಚರ್ಚೆ ಇನ್ನೂ ಇದೆ. ಕೆಲವರು ಚಿತ್ರದುರ್ಗ ಎನ್ನುತ್ತಾರೆ. ಇನ್ನು ಕೆಲವರು ಶಿವಮೊಗ್ಗ ಎಂದು ಹೇಳುತ್ತಾರೆ. ನಾವು ಎರಡು ಊರನ್ನು ಹೋಲುವಂಥ ಒಂದು ಗ್ರಾಮೀಣ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಕಾಲ್ಪನಿಕ ಗ್ರಾಮವಾಗಿ ತೋರಿಸಿದ್ದೇವೆ. ಚಿತ್ರೀಕರಣವನ್ನು ಸಾಗರ ಮತ್ತು ಸೊರಬದಲ್ಲಿ ಮಾಡಿದ್ದೇವೆ. ಸಾಗರದ ಹೊಸಗುಂದ ದೇವಾಲಯದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಅದಕ್ಕಾಗಿ ಮಾಡಿರುವ ಖರ್ಚು ಸೇರಿದಂತೆ ಎಲ್ಲ ವಿಚಾರಗಳಲ್ಲಿ ಅಣ್ಣನಂಥ ನಿರ್ಮಾಪಕ ಪವನ್ ಒಡೆಯರ್ ಅವರು ಯಾವುದೇ ಪ್ರಶ್ನೆಗಳನ್ನು ಮಾಡಿಲ್ಲ ಎನ್ನುವುದನ್ನು ಕೂಡ ನಾನಿಲ್ಲಿ ನೆನಪಿಸಿಕೊಳ್ಳಲೇಬೇಕು. ಚಿತ್ರದ ಕತೆಯಲ್ಲಿ ಊರಿನ ಹಿನ್ನೆಲೆಯೂ ಬರುವ ಕಾರಣ ತಲೆಮಾರುಗಳ ಹಿಂದಿನ ಡೊಳ್ಳು ಕಲಾವಿದರ ಜೀವನವೂ ಚಿತ್ರದಲ್ಲಿದೆ.
ಚಿತ್ರದಲ್ಲಿ ನಿಜವಾದ ಡೊಳ್ಳು ಕುಣಿತದ ಕಲಾವಿದರೇ ನಟಿಸಿದ್ದಾರ?
ಒಂದು ರೀತಿಯಲ್ಲಿ ಹೌದು. ಅಂದರೆ ನಮ್ಮ ಚಿತ್ರತಂಡಕ್ಕೆ ವಿಷಯದ ಮೇಲೆ ಒಂದು ತಿಂಗಳ ತರಬೇತಿ ನೀಡಿದ್ದೇವೆ. ನಿಜ ಡೊಳ್ಳು ಕುಣಿತದ ತಂಡವನ್ನೂ ಬಳಸಿಕೊಂಡಿರುವ ಕಾರಣ ಅವರಿಗೆ ನಟನೆಯ ತರಬೇತಿಯನ್ನೂ ಕೊಟ್ಟಿದ್ದೇವೆ. `ಭೂಮಿಕನ್ಸ್’ ಕಲಾತಂಡದ ನೇತೃತ್ವ ವಹಿಸಿರುವ ಡಾ. ಪ್ರಭುದೇವ ಅವರು ಕೂಡ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಹಾಗೆಯೇ ಪರದೆಯ ಮೇಲೆ ನಟರಾಗಿ ಗುರುತಿಸಿಕೊಂಡಿರುವ ಕಲಾವಿದರಿಗೆ ಡೊಳ್ಳು ಕುಣಿತ ಕಲಿಸಿದ್ದೇವೆ. ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಮೂರು ಹಾಡುಗಳಿವೆ. ಅದಕ್ಕೆ ವಿಶೇಷ ನೃತ್ಯ ನಿರ್ದೇಶನವೇನೂ ಇಲ್ಲ. ಅವುಗಳನ್ನು ಮಾಂಟೇಜ್ ಮೂಲಕ, ಸಾಂದರ್ಭಿಕ ದೃಶ್ಯದ ಮೂಲಕ ತೋರಿಸಿದ್ದೇವೆ.
ಚಿತ್ರತಂಡದಲ್ಲಿ ಹೆಚ್ಚಾಗಿ ಹೊಸಬರೇ ಇರುವ ಹಾಗಿದೆ?
ನಿಜ; ಪ್ರಮುಖ ಪಾತ್ರಗಳನ್ನು ಹೊರತು ಪಡಿಸಿ ಹೆಚ್ಚಿನವರು ಸಿನಿಮಾರಂಗಕ್ಕೆ ಹೊಸಬರು. ಚಿತ್ರದ ನಾಯಕ ಕಿರುತೆರೆ ಮೂಲಕ ಗುರುತಿಸಿಕೊಂಡಿರುವ ಕಾರ್ತಿಕ್ ಮಹೇಶ್. ನಿಧಿ ಹೆಗ್ಡೆ ಚಿತ್ರದ ನಾಯಕಿ. ಅವರು ಒಂದಷ್ಟು ಕಿರುಚಿತ್ರ, ತೆಲುಗು ಸಿನಿಮಾಗಳ ಮೂಲಕ ಗುರುತಿಸಿಕೊಂಡವರು. ಹಿರಿಯ ಪೋಷಕ ನಟರಾದ ಬಾಬು ಹಿರಣ್ಣಯ್ಯ, ನಟ, ನೃತ್ಯನಿರ್ದೇಶಕ ಚಂದ್ರ ಮಯೂರ್, ನವನಟಿ ಶರಣ್ಯ ಸುರೇಶ್ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ಶ್ರೀನಿಧಿ ಡಿ ಎಸ್ ಅವರು ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅನಂತ್ ಕಾಮತ್ ಸಂಗೀತ ನೀಡಿದ್ದು, ನಿತಿನ್ ಲುಕೋಸ್ ಅವರು ಧ್ವನಿ ವಿನ್ಯಾಸ ಮಾಡಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಾಹಕರು. ಬಿ ಎಸ್ ಕೆಂಪರಾಜ್ ಅವರ ಸಂಕಲನವಿದೆ.
ನಿರ್ದೇಶಕರಾಗಿ ನಿಮ್ಮ ಮೇಲೆ ತಂದೆ ಸುನೀಲ್ ಪುರಾಣಿಕ್ ಅವರ ಪ್ರಭಾವ ಎಷ್ಟಿದೆ?
ನಾನು ಆರನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಮೊದಲ ಬಾರಿ ಕ್ಯಾಮೆರಾ ಮುಂದೆ ಬಂದು ಒಂದು ಪಾತ್ರ ಮಾಡಿದ್ದೆ. ಅದು ಜಿವಿ ಅಯ್ಯರ್ ಅವರ ನಿರ್ದೇಶನದ ಧಾರಾವಾಹಿ. ಆಗ ಅದಕ್ಕೆ ಸಂಚಿಕೆ ನಿರ್ದೇಶಕರಾಗಿದ್ದವರು ನಮ್ಮಪ್ಪ ಸುನೀಲ್ ಪುರಾಣಿಕ್. ಶಾಲಾದಿನಗಳಲ್ಲೇ ಒಂದಷ್ಟು ಧಾರಾವಾಹಿ, ಕಾರ್ಪೊರೇಟ್ ಫಿಲ್ಮ್ಸ್, ಡಾಕ್ಯುಮೆಂಟರಿ ಹೀಗೆ ಶೂಟಿಂಗ್ ಸೆಟ್‌ನಲ್ಲಿ ಪಾಲ್ಗೊಂಡು ಅಭ್ಯಾಸವಾಗಿತ್ತು. ಮುಂದೆ ತಂದೆಯ ನಿರ್ಮಾಣ, ನಿರ್ದೇಶನದ ಪ್ರಾಜೆಕ್ಟ್ ಮೂಲಕವೇ ನಾನು ನಿರ್ದೇಶನದ ಬಗ್ಗೆ ಆಸಕ್ತಿ, ಅರಿವು ಮೂಡಿಸಿಕೊಂಡೆ. ಹಾಗಾಗಿ ನಾನು ಏನೇ ಆಗಿದ್ದರೂ ಸಹಜವಾಗಿ ಅದು ಅವರ ಪ್ರಭಾವದಿಂದಲೇ. ಆದರೆ ಅದೇ ಸಂದರ್ಭದಲ್ಲಿಅದನ್ನು ನೆಗೆಟಿವ್ ಆಗಿ ಕೂಡ ಗುರುತಿಸುತ್ತಿರುವುದು ನೋವು ತಂದಿದೆ.
ಹಾಗಾದರೆ ನಿಮಗೆ ನೋವು ತಂದಿರುವ ವಿಚಾರವೇನು?
ಉದಾಹರಣೆಗೆ ನಾನು ಹೇಗೆ ಆರಂಭದಿಂದಲೇ ಆಸಕ್ತಿ ಬೆಳೆಸಿಕೊಂಡು ಬಂದು ನಿರ್ದೇಶಕನಾದೆ ಎನ್ನುವುದನ್ನು ಈಗಾಗಲೇ ಹೇಳಿದ್ದೇನೆ. ತಂದೆಯೂ ಕೂಡ ಚಿತ್ರರಂಗ ಸೇರಿದಂತೆ ಬಣ್ಣದ ಲೋಕದಲ್ಲಿ ಸಾಕಷ್ಟು ಅನುಭವ ಪಡೆದ ಬಳಿಕ ಪ್ರಸ್ತುತ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ. ಆದರೆ ಕಾಕಾತಾಳೀಯ ಎನ್ನುವ ಹಾಗೆ ಇದೇ ಸಂದರ್ಭದಲ್ಲಿ ನಾನು ನಿರ್ದೇಶಿಸಿದ ಕಿರುಚಿತ್ರ ಮಹಾನ್ ಹುತಾತ್ಮ’ಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಚಿತ್ರ ನಿಜಕ್ಕೂ ಚೆನ್ನಾಗಿದ್ದ ಕಾರಣ
ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಅಮೆರಿಕ ಮತ್ತು ನಮ್ಮ ದೇಶಾದ್ಯಂತ ಇರುವಂಥ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಗೆದ್ದಿತ್ತು. ಆದರೆ ಅವೆಲ್ಲವೂ ತಂದೆಯ ಪ್ರಭಾವದಿಂದಲೇ ಸಾಧ್ಯವಾಗಿದೆ ಎನ್ನುವಂತೆ ಸುದ್ದಿಯಾಗಿದ್ದು ನನಗೆ ಬೇಸರ ಮೂಡಿಸಿತು.
ಆದರೆ ಪ್ರಸ್ತುತ ಢಾಕಾದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ಅವೆಲ್ಲವನ್ನು ಸುಳ್ಳು ಮಾಡಿದಂತಾಗಿಲ್ಲವೇ?
ಖಂಡಿತವಾಗಿ. ಯಾಕೆಂದರೆ ಢಾಕಾ ಇರುವುದು ಬಂಗ್ಲಾದೇಶದಲ್ಲಿ. ವೈಯಕ್ತಿಕವಾಗಿ ನಮಗೆ ಸಂಬಂಧವೇ ಇರದ ಸಂಸ್ಕೃತಿ, ಸಿದ್ಧಾಂತಗಳಿರುವ ದೇಶ ಅದು. ಅಲ್ಲಿ ಚಿತ್ರದ ಅರ್ಹತೆಯನ್ನು ಗಮನಿಸಿಯೇ ಆಯ್ಕೆ ಮಾಡಿರುತ್ತಾರೆ. ಹಾಗಾಗಿ ಅಂದು ಕುಹಕ ಮಾಡಿದವರಿಗೆ ಈಗಲಾದರೂ ಅರ್ಥವಾಗಿರಬಹುದು ಎಂದುಕೊಳ್ಳುತ್ತೇನೆ. ಮಾತ್ರವಲ್ಲ, ಪ್ರಸ್ತುತ ಚಿತ್ರೋತ್ಸವಗಳಲ್ಲಿನ ಸಂಚಾರ ಮುಗಿಸಿದ ಬಳಿಕ ಪವನ್ ಒಡೆಯರ್ ಅವರು ಚಿತ್ರವನ್ನು ಬೆಂಗಳೂರಿನಲ್ಲೂ ಲಾಂಚ್ ಮಾಡಬಹುದು. ಆಗ ಚಿತ್ರ ನೋಡಿದವರಿಗೆ ನಿಜಕ್ಕೂ ಇದು ಗುರುತಿಸುವಂಥ ಚಿತ್ರ ಎಂದು ಅಭಿಪ್ರಾಯ ಬರಬಹುದು ಎಂದುಕೊಂಡಿದ್ದೇನೆ.