ಕಪೋಲ ಕಲ್ಪಿತ ಎನ್ನುವ ಅರ್ಥದಲ್ಲಿ ತಮ್ಮ ಚಿತ್ರಕ್ಕೆ ‘ಕಪೋಕಲ್ಪಿತಂ’ ಎನ್ನುವ ಹೆಸರಿಟ್ಟಿರುವ ಚಿತ್ರತಂಡ ಮುಂದಿನ ತಿಂಗಳು ಸಿನಿಮಾ ಬಿಡುಗಡೆಗೊಳಿಸಲು ತಯಾರಾಗಿದ್ದಾರೆ.
ನವನಿರ್ದೇಶಕಿ ಸುಮಿತ್ರಾ ಗೌಡ. ಅವರು ಚಿತ್ರದ ನಾಯಕಿಯೂ ಹೌದು. ಮುಂಬೈನಲ್ಲಿ ಅನುಪಮ್ ಖೇರ್ ಅವರ ನಟನಾ ತರಬೇತಿ ಶಾಲೆಯಾದ ‘ಆ್ಯಕ್ಟರ್ ಪ್ರಿಪೇರ್ಸ್’ನಲ್ಲಿ ನಟನೆ ಮತ್ತು ನಿರ್ದೇಶನದ ಕಲಿಕೆ ಪಡೆದಿರುವುದಾಗಿ ತಿಳಿಸಿರುವ ಅವರು ಈ ಹಿಂದೆ ಗಣಿದೇವ್ ಕಾರ್ಕಳ ಅವರಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ಅನುಭವದಿಂದ ಈ ಚಿತ್ರ ಮಾಡಿದ್ದಾಗಿ ಹೇಳುತ್ತಾರೆ. “ಇದು ಹಾರರ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ವಿಚಾರಗಳನ್ನು ಹೊಂದಿರುವ ಚಿತ್ರ. ಆದರೆ ತಂದೆ ಮಗಳ ಬಧವ್ಯಕ್ಕೂ ಪ್ರಾಧಾನ್ಯತೆ ಇದೆ” ಎಂದರು ಸುಮಿತ್ರಾ ಗೌಡ.
ಪ್ರೀತಂ ಮಕ್ಕಿಹಾಲಿ ಎನ್ನುವ ಯುವ ಪ್ರತಿಭೆ ಚಿತ್ರದ ಮೂಲಕ ನಾಯಕರಾಗಿದ್ದಾರೆ. ಚಿತ್ರದಲ್ಲಿ ಗ್ರೇ ಶೇಡ್ ಪಾತ್ರವನ್ನು ನಿಭಾಯಿಸಿರುವುದಾಗಿ ಅವರು ಹೇಳಿದ್ದಾರೆ. ಸಿನಿಮಾ ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದ್ದು ಮೂರು ಹಾಡುಗಳಿವೆ ಎಂದಿದ್ದಾರೆ. ಚಿತ್ರಕ್ಕೆ ಕತೆ, ಸಂಭಾಷಣೆ ಬರೆದಿರುವ ಗಣಿದೇವ್ ಕಾರ್ಕಳ ಅವರೇ ಸಂಗೀತವನ್ನೂ ನೀಡಿದ್ದಾರೆ. ಗಣಿದೇವ್ ಅವರು ಮಾತನಾಡುತ್ತಾ, “ಮನೆಯೊಂದರ ರಹಸ್ಯ ಭೇದಿಸಲು ಬರುವ ಐದು ಮಂದಿ ಪತ್ರಕರ್ತರ ತಂಡದ ಕತೆ ಇದು. ತಂಡದಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಗಂಡಸರು ಇರುತ್ತಾರೆ. ಇದು ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಚಿತ್ರೀಕರಿಸಲಾದ ಸಿನಿಮಾ” ಎಂದರು. ಐದು ಮಂದಿಯ ತಂಡದಲ್ಲಿ ಒಬ್ಬರಾದ ಅಮೋಘ ಮೂಲತಃ ಉಡುಪಿಯವರಾಗಿದ್ದು ಭಂಡಾರ್ಕರ್ಸ್ ಕಾಲೇಜ್ ನಲ್ಲಿ ಶಿಕ್ಷಕರಾಗಿದ್ದಾರೆ. ಕೋಲ್ಡ್ ಬ್ಲಡೆಡ್ ವ್ಯಕ್ತಿತ್ವದ ಸೈಲೆಂಟ್ ಕಿಲ್ಲರ್ ಪಾತ್ರ ತಮ್ಮದು ಎಂದಿದ್ದಾರೆ.
ಕಿರುತೆರೆಯ ‘ಮಜಾಭಾರತ’ ರಿಯಾಲಿಟಿ ಶೋ ಖ್ಯಾತಿಯ ಶಿವರಾಜ್ ಕರ್ಕೇರ ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ನಟ ಸಂದೀಪ್ ಮಲಾನಿಯವರು ಚಿತ್ರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಿರ್ಮಾಪಕ ರಮೇಶ್ ಚಿಕ್ಕೇಗೌಡ ಅವರು ನಿರ್ದೇಶಕಿ ಸುಮಿತ್ರಾ ಗೌಡ ಅವರ ತಂದೆಯೂ ಹೌದು. ಎಚ್ ಪಿ ಸಿ ಎಲ್ ನ ನಿವೃತ್ತ ಕಾರ್ಮಿಕರಾಗಿರುವ ಅವರೊಂದಿಗೆ ಕವಿತಾ ಕನ್ನಿಕಾ ಪೂಜಾರಿ, ಗಣಿದೇವ್ ಕಾರ್ಕಳ ಚಿತ್ರದ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.