
ಡಾ.ಶಿವರಾಮ ಕಾರಂತ ಅವರಿಗೆ ಇದ್ದ ಬಿರುದು ‘ಕಡಲ ತಡಿಯ ಭಾರ್ಗವ’ ಎನ್ನುವುದು. ಚಿತ್ರದ ಶೀರ್ಷಿಕೆ ಕೂಡ ಒಂದಷ್ಟು ಅದನ್ನೇ ಹೋಲುವ ಕಾರಣ ಅವರದೇ ಜೀವನ ಚರಿತ್ರೆ ಇರಬಹುದೆನ್ನುವ ತೀರ್ಮಾನ ಬೇಡ. ಯಾಕೆಂದರೆ ಅವರಿಗೂ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲವೆಂದಿದೆ ಚಿತ್ರತಂಡ.
ಇದು ಕಡಲ ತೀರದಲ್ಲಿ ವಾಸಿಸುವ ನಾಯಕನ ಕತೆ ಇರುವ ಚಿತ್ರ. ಇದರಲ್ಲಿ ಆತನ ಹೆಸರು ಭಾರ್ಗವ ಎಂದಾಗಿರುತ್ತದೆ. ಹಾಗಾಗಿ ಚಿತ್ರಕ್ಕೆ ‘ಕಡಲ ತೀರದ ಭಾರ್ಗವ’ ಎಂದು ಹೆಸರಿಟ್ಟಿರುವುದಾಗಿ ಚಿತ್ರತಂಡ ಮೊದಲೇ ಸ್ಪಷ್ಟನೆ ನೀಡಿದೆ. ಈಗ ಬರುತ್ತಿರುವ ಚಿತ್ರಗಳಿಗಿಂತ ವಿಭಿನ್ನ ಕತೆ ಹೊಂದಿರುವ ಕಾರಣ ‘ಕಡಲ ತೀರದ ಭಾರ್ಗವ’ ಎನ್ನುವ ತಮ್ಮ ಚಿತ್ರ ವಿಭಿನ್ನವಾಗಿದೆ ಎನ್ನುತ್ತದೆ ಚಿತ್ರತಂಡ. ಪ್ರಸ್ತುತ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸೋಮವಾರ ಟೀಸರ್ ಬಿಡುಗಡೆಗೊಳಿಸುವ ತಯಾರಿ ನಡೆದಿದೆ.
ಟೀಸರ್ ಚಿತ್ರದ ಕತೆಗಿಂತಲೂ ತಂಡದ ಮಾಹಿತಿ ನೀಡಲಿದೆ ಎನ್ನುವುದು ವಿಶೇಷ. ಅಂದರೆ ಟೀಸರ್ ಮೂಲಕ ಟ್ರೇಲರ್ ಹಾಗೂ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಿದೆ ಚಿತ್ರತಂಡ.

‘ಏವಕಲ ಸ್ಟುಡಿಯೋ’ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ಈ ಚಿತ್ರದ ನಿರ್ಮಾಪಕರು. ‘ವಿಜಯಂ ವಜ್ರ ವೆಂಕ್ಚರ್ಸ್’ ಸಹ ನಿರ್ಮಾಣ ಈ ಚಿತ್ರಕ್ಕಿದೆ. ಇನ್ನೊಂದು ವಿಶೇಷ ಎನ್ನುವಂತೆ ನಿರ್ಮಾಪಕರಾದ ಭರತ್ ಗೌಡ ಹಾಗೂ ವರುಣ್ ರಾಜು ಪಟೇಲ್ ಈ ಚಿತ್ರಕ್ಕೆ ಪರದೆ ಮೇಲಿನ ನಾಯಕರೂ ಹೌದು. ಶ್ರುತಿ ಪ್ರಕಾಶ್ ಚಿತ್ರದ ನಾಯಕಿದ್ದಾರೆ. ಈಟಿವಿ ಶ್ರೀಧರ್, ರಾಘವ್ ನಾಗ್ , ಅಶ್ವಿನ್ ಹಾಸನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಉಡುಪಿ, ಮುರುಡೇಶ್ವರ ಹಾಗೂ ಇನ್ನಿತರ ಕರಾವಳಿಯ ಕಡಲತೀರಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ , ಉಮೇಶ್ ಭೋಸಗಿ ಅವರ ಸಂಕಲನವಿದೆ.