ಪ್ರೇಮ್ ನಾಯಕರಾಗಿ ನಟಿಸುತ್ತಿರುವ 25ನೇ ಚಿತ್ರ `ಪ್ರೇಮಂ ಪೂಜ್ಯಂ’ನ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರತಂಡದ ಪ್ರಮುಖರೆಲ್ಲ ಪಾಲ್ಗೊಂಡಿದ್ದರು.
“ಜಗತ್ತಿನಲ್ಲಿ ಮೊದಲ ಪ್ರೀತಿಯನ್ನು ಯಾರಿಂದಲೂ ಕೂಡ ಮರೆಯಲಾಗುವುದಿಲ್ಲ. ಅದೇ ರೀತಿ ಈ ಜಗತ್ತಿನಲ್ಲಿ ಎಷ್ಟೋ ಯುದ್ಧಗಳು ಬಯಕೆಗಳಿಗಾಗಿಯೇ ನಡೆದಿವೆ. ಆದರೆ ಯುದ್ಧ ಗೆದ್ದ ಬಳಿಕ ಶಾಂತಿ, ನೆಮ್ಮದಿ ಬೇಕು ಎಂದವರಿದ್ದಾರೆ. ಹಾಗಾದರೆ ಶಾಂತಿ ಎಲ್ಲಿ ಸಿಗುತ್ತದೆ? ಯಾರಾದರೂ ನಿರ್ಮಲವಾದ ಮನಸಿನಿಂದ ಪ್ರೀತಿಸಿದರೆ ಆಗ ಸಿಗುತ್ತದೆ. ಅದೇ ರೀತಿ ಪ್ರೀತಿ, ಪ್ರೇಮ, ದೈವೀಕ ಭಾವನೆಗೆ ಹೊಸ ವ್ಯಾಖ್ಯಾನ ನೀಡುವಂಥ ಸಿನಿಮಾ ಇದು ಎಂದು ಹೇಳಲು ಹೆಮ್ಮೆ ಇದೆ.” ಎಂದಿದ್ದಾರೆ ಚಿತ್ರದ ನಾಯಕ ಪ್ರೇಮ್.
ಪಾತ್ರದ ಬಗ್ಗೆ ಹೆಚ್ಚೇನು ಹೇಳದ ಪ್ರೇಮ್, “ಸಿನಿಮಾ ಮಾಡೋದೇ ಬೇಡ ಎಂದುಕೊಂಡಿದ್ದ ಸಂದರ್ಭದಲ್ಲಿ ನನ್ನನ್ನು ಅರಸಿಕೊಂಡು ಬಂದಿರುವ ಸಿನಿಮಾ ಇದು. ಚಿತ್ರದಲ್ಲಿ ನನಗೆ ಏಳು ಶೇಡ್ಸ್ ಇವೆ. ಏಳನ್ನು ಕೂಡ ಇಷ್ಟಪಟ್ಟಿದ್ದೇನೆ” ಎಂದರು. ಚಿತ್ರದ ನಿರ್ದೇಶಕ ರಾಘವೇಂದ್ರ ಅವರು ಸ್ವತಃ ಕತೆ,ಚಿತ್ರಕತೆ ಬರೆದಿರುವುದರ ಜೊತೆಗೆ ಸಂಗೀತವನ್ನೂ ನೀಡಿದ್ದಾರೆ. ತ್ಯಾಗರಾಜ್, ಚರಣ್ ಮಹಾದೇವನ್ ಸೇರಿದಂತೆ ಪೂರ್ತಿ ಸಂಗೀತದ ತಂಡಕ್ಕೆ ಕೃತಜ್ಞತೆ ಅರ್ಪಿಸಿದರು. ಆರಂಭದಿಂದಲೂ ಜೊತೆಗಿದ್ದ ಸ್ನೇಹಿತ ಮಾಧವ ಕಿರಣ್ ತಮ್ಮ ಬೆನ್ನೆಲುಬು ಎಂದರು. ವೃತ್ತಿಯಲ್ಲಿ ವೈದ್ಯರಾಗಿರುವ ಅವರು “ಇದು ಎಲ್ಲೋ ಆಸ್ಪತ್ರೆಯಲ್ಲಿ ಹುಟ್ಟಿದ ಕತೆ. ಆದರೆ ರೆಬಲ್ ಸ್ಟಾರ್ ಅಂಬರೀಷ್ ಅವರಿಂದ ಹಿಡಿದು ಮಾಸ್ಟರ್ ಆನಂದ್, ಪ್ರೇಮ್ ತನಕ ಪ್ರತಿಯೊಬ್ಬರು ಮೆಚ್ಚಿ ಕೇಳಿರುವಂಥ ಕತೆ ಇದು” ಎಂದರು. ಚಿತ್ರವು ಇದೇ ತಿಂಗಳಾಂತ್ಯದಲ್ಲಿ ತೆರೆಗೆ ಬರಲಿರುವುದಾಗಿ ನಿರ್ದೇಶಕರು ತಿಳಿಸಿದರು.
ಚಿತ್ರದಲ್ಲೊಂದು ಪ್ರಧಾನ ಪಾತ್ರ ಮಾಡಿರುವ ಟಿ ಎಸ್ ನಾಗಾರಭರಣ ಮಾತನಾಡಿ, “ಪ್ರತಿ ಸಿನಿಮಾ ಕೂಡ ಒಂದು ಪ್ರಯೋಗ. ಪ್ರಯೋಗ ಶೀಲ ಮನಸುಗಳು ಒಂದು ಸೇರಿದಾಗಲೇ ಒಂದು ಒಳ್ಳೆಯ ಸಿನಿಮಾ ಸಂಭವಿಸುತ್ತದೆ. ಸಾಂಘಿಕ ಕೆಲಸವನ್ನು ಕೂಡ ಒಬ್ಬರ ಮೂಲಕ ತಲುಪಿಸುವ ಕ್ರಿಯೆಯೇ ಸಿನಿಮಾ. ಈ ಸಿನಿಮಾ ಕೂಡ ಉತ್ತಮವಾಗಿದೆ ಎಂದು ನೂರರಷ್ಟು ಬಲವಾಗಿ ಹೇಳುತ್ತೇನೆ. ಕೊರೊನಾ ಮನಸ್ಥಿತಿ ಒಳಸೇರಿಕೊಂಡ ಹೊತ್ತಿನಲ್ಲಿ ಮುದನೀಡಲು ಡಾಕ್ಟರ್ ಬಂದಿದ್ದಾರೆ ” ಎಂದರು. ಸಮಾರಂಭದಲ್ಲಿ ಚಿತ್ರದ ನಾಯಕಿ ಬೃಂದಾ ಆಚಾರ್ಯ ಸೇರಿದಂತೆ ಪ್ರಮುಖ ಕಲಾವಿದರಾದ ಮಾಸ್ಟರ್ ಆನಂದ್, ಚಿತ್ಕಳಾ ಬಿರಾದಾರ, ಕಾಮಿಡಿ ಕಿಲಾಡಿ ಖ್ಯಾತಿಯ ನಟ ಗೋವಿಂದೇಗೌಡ ಮೊದಲಾದವರು ಭಾಗವಹಿಸಿದ್ದರು. ಕೆದಂಬಾಡಿ ಕ್ರಿಯೇಶನ್ಸ್ ಮೂಲಕ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕರ ತಂಡವು ಉಪಸ್ಥಿತಿಯಿತ್ತು.