ಹಿರಿಯ ನಟ ಶಂಕರ್ ರಾವ್ ಇನ್ನಿಲ್ಲ

ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಹಾಸ್ಯದ ಪಾತ್ರಗಳ ಮೂಲಕ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಗುರುತಿಸಿಕೊಂಡಿದ್ದ ನಟ, ರಂಗಭೂಮಿ ಪ್ರತಿಭೆ ಶಂಕರ್ ರಾವ್ ಇಂದು ನಿಧನರಾಗಿದ್ದಾರೆ.

ಶಾಲಾ ದಿನಗಳಲ್ಲೇ ನಾಟಕಗಳತ್ತ ಆಕರ್ಷಿತರಾದ ಶಂಕರ ರಾವ್‌ ತಮ್ಮದೇ ‘ಗೆಳೆಯರ ಬಳಗ’ ರಂಗತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಸಿಮ್ಸನ್ ಅಂಡ್ ಸಿಮ್ಸನ್‌ ಕಂಪನಿಯಲ್ಲಿ ನೌಕರಿ ಮಾಡುತ್ತಲೇ ‘ಕಲಾಕುಂಜ’, ‘ನಟರಂಗ’ ರಂಗತಂಡಗಳ ಹಲವು ನಾಟಕಗಳಲ್ಲಿ ನಟಿಸುತ್ತಾ ಬಂದರು. ‘ನಟರಂಗ’ದ ಬಹುತೇಕ ಎಲ್ಲಾ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಕನಕೋಟೆ, ತೊಘಲಕ್‌, ಮೃಚ್ಛಕಟಿಕ ಪೋಲಿ ಕಿಟ್ಟಿ.. ಅವರ ಕೆಲವು ಪ್ರಮುಖ ನಾಟಕಗಳು. ಎಂ.ಆರ್.ವಿಠಲ್ ನಿರ್ದೇಶನದ ‘ಯಾರ ಸಾಕ್ಷಿ?’ (1972) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಶಂಕರರಾವ್‌ ಕಾಕನಕೋಟೆ, ಸಿಂಹಾಸನ, ಪುಟಾಣಿ ಏಜೆಂಟ್‌ 123, ಮೂಗನಸೇಡು, ಕಲ್ಯಾಣ ಮಂಟಪ.. ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸೆಕೆಂಡ್‌ ಹ್ಯಾಂಡ್ ಸದಾಶಿವ, ಪಲ್ಲವಿ, ಫೊಟೋಗ್ರಾಫರ್ ಪರಮೇಶಿ, ಯಾಕಿಂಗಾಡ್ತಾರೋ, ಪಾಪ ಪಾಂಡು, ಸಿಲ್ಲಿಲಲ್ಲಿ.. ಅವರು ಅಭಿನಯಿಸಿರುವ ಕೆಲವು ಪ್ರಮುಖ ಧಾರಾವಾಹಿಗಳು. ಶಂಕರ ರಾವ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಉಮಾ ಕಳೆದ ವರ್ಷ ನಿಧನರಾಗಿದ್ದರು. ಶಂಕರ್ ರಾವ್ ನಿಧನಕ್ಕೆ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದ ಹಲವರು ಕಂಬನಿ ಮಿಡಿದಿದ್ದಾರೆ.

ಕಿರುತೆರೆಯಲ್ಲಿ ‘ಮಾಯಾಮೃಗ’ ಮತ್ತು ‘ಪಾಪ ಪಾಂಡು’ ಧಾರಾವಾಹಿಗಳು ಅವರನ್ನು ದೊಡ್ಡ ಹೆಸರನ್ನು ತಂದುಕೊಟ್ಟಿದ್ದವು. ಕಳೆದ ಕೆಲ‌ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂಥ ಅವರು ಇಂದು ತಮ್ಮ 84ನೇ ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮೃತರ ಬಗ್ಗೆ ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ ಎನ್ ಸೀತಾರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಹೀಗೆ..

“ಬಹುಕಾಲದ ಗೆಳೆಯ , ಕನ್ನಡ ರಂಗಭೂಮಿಯ ಮಹಾನ್ ಕಲಾವಿದ ಶಂಕರ ರಾವ್ ಇಂದು ನಿಧನರಾಗಿದ್ದಾರೆ. ಶಂಕರರಾವ್ ನಟರಂಗ ತಂಡದ ಆಧಾರ ಸ್ಥಂಭಗಳಲ್ಲಿ ಒಬ್ಬರಾಗಿದ್ದರು.ಅವರಿಲ್ಲದೆ ಯಾವ ನಾಟಕವನ್ನೂ ಅವರು ಆಡುತ್ತಿರಲಿಲ್ಲ. ನಮ್ಮ ತಂಡದ ಮಾಯಾಮೃಗ ಧಾರಾವಾಹಿಯಲ್ಲಿ ಸಂತಾನಂ ಪಾತ್ರ ಮಾಡಿ ಬಹಳ ಜನಪ್ರಿಯರಾಗಿದ್ದರು. ಪಾಪ ಪಾಂಡು ಧಾರಾವಾಹಿಯಲ್ಲಿ ಎಲ್ಲರೂ ಇಷ್ಟ ಪಡುವ ಪಾತ್ರ ಮಾಡಿ ಜನಾನುರಾಗಿಯಾಗಿದ್ದರು. ಅವರಿದ್ದ ಕಡೆ ಪ್ರತಿಕ್ಷಣವೂ ನಗೆಬುಗ್ಗೆಗಳಿಗೆ ಬರವಿರಲಿಲ್ಲ. ಸದಾ ಹಸನ್ಮುಖಿ. ಎಲ್ಲರ ಕಷ್ಟಕ್ಕೆ ಹೃದಯದ ಮೂಲಕ ಸ್ಪಂದಿಸುತ್ತಿದ್ದ ವ್ಯಕ್ತಿ. ಅವರ ಮನೆಯವರ ಶೋಕ ದಟ್ಟವಾಗಿ ಕುಳಿತಿದೆ. ನಟರಂಗದವರ ತಬ್ಬಲಿತನ ದಿನೇ ದಿನೇ ಹೆಚ್ಚು ಹೆಚ್ಚು ಕಾಡುತ್ತಿದೆ. ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿಅವರ ಮನೆಯವರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದಿದ್ದಾರೆ.

ಮತ್ತೋರ್ವ ನಿರ್ದೇಶಕ ಹಾಗೂ ನಟ ನಾಗೇಂದ್ರ ಶಾ ಅವರು “ನಗೆ ಚಿಲುಮೆ… ಬದುಕನ್ನು ಅನಂದಮಯವಾಗಿಸಿಕೊಳ್ಳ ಬೇಕು ಅಂತ ಪಾಠ ಕಲಿಸಿದ ಗುರು ಶಂಕರ್ ರಾವ್. ಅಂತಿಮ ಶುಭ ವಿದಾಯ ಗುರುವೇ…” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯನಟ ಶ್ರೀನಾಥ್ ಕೂಡ ಶಂಕರ್ ರಾವ್ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Recommended For You

Leave a Reply

error: Content is protected !!
%d bloggers like this: