ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರಾದ ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚೆಗೆ ಒಂದು ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅವರು ಬಿಡುಗಡೆಗೆ ಸಜ್ಜಾಗಿರುವ ಚಿತ್ರ ‘ಕನ್ನೇರಿ’ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಆಡಿದ ಮಾತುಗಳಾದರೂ ಅವರ ಸ್ವಭಾವದಂತೆ ಎಲ್ಲವನ್ನು ಮನದಾಳದಂತೆ ಹೇಳಿಕೊಂಡಿರುವುದು ಸತ್ಯ.
‘ಕನ್ನೇರಿ’ ಎನ್ನುವುದು ನೀನಾಸಂ ಮಂಜು ನಿರ್ದೇಶನದ ಚಿತ್ರ. ಈ ಹಿಂದೆ ಅವರು ಮೂಕಹಕ್ಕಿ ಎನ್ನುವ ಚಿತ್ರದ ಮೂಲಕ ಗಮನ ಸೆಳೆದಿದ್ದರು. ಪ್ರಸ್ತುತ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಇದು. ಪೋಸ್ಟರ್ ಬಿಡುಗಡೆ ಮಾಡಿದ ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರತಂಡಕ್ಕೆ ಶುಭ ಕೋರಿ ಆಡಿರುವ ಮಾತುಗಳು ನಿಜಕ್ಕೂ ಉಲ್ಲೇಖಾರ್ಹ. ಯಾಕೆಂದರೆ ಅವರು ಬಿಡುಗಡೆ ಮಾಡಿರುವುದು ಫೋಸ್ಟರ್ ಹೌದಾದರೂ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಪೂರ್ತಿಯಾಗಿ ನೋಡಿದ ಮೇಲೆಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನೀನಾಸಂ ಮಂಜು ಬದ್ಧತೆಯಿಂದ ಕೆಲಸ ಮಾಡುವ ವ್ಯಕ್ತಿ. ‘ಕನ್ನೇರಿ’ ಚಿತ್ರದಲ್ಲಿ ಬುಡಕಟ್ಟು ಜನರ ಸಂಕಟ, ಅವರ ವಲಸೆ ಬದುಕಿನ ಬಗ್ಗೆ ತೋರಿಸಿದ್ದಾರೆ. ಆ ಬಗ್ಗೆ ಅಧ್ಯಯನ ಮಾಡಿಕೊಂಡು ಆಧುನಿಕ ಜಗತ್ತು ಹೇಗೆ ಅವರ ಜೀವನವನ್ನು ಬಲಿ ತೆಗೆದುಕೊಂಡಿದೆ ಎನ್ನುವ ವಿಚಾರ ಇರಿಸಿಕೊಂಡು ತುಂಬ ಶ್ರದ್ಧೆಯಿಂದ ಚಿತ್ರ ಮಾಡಿದ್ದಾರೆ. ಛಾಯಾಗ್ರಹಣ ಸಂಯೋಜನೆ ಮಾಡಿರುವ ರೀತಿ, ಜೊತೆಗೆ ಪ್ರತಿಭಾವಂತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿಯವರು ಜನಪದೀಯ ಮಾದರಿಯಲ್ಲಿ ನೀಡಿರುವ ಸಂಗೀತ, ಕ್ಷೀರ ಸಾಗರ ಅವರ ಕತೆ, ಕೋಟಗಾನಹಳ್ಳಿ ರಾಮಯ್ಯನವರ ಸಾಹಿತ್ಯ ಚಿತ್ರಕ್ಕೆ ಘನತೆ ತಂದುಕೊಟ್ಟಿದೆ” ಎಂದಿದ್ದಾರೆ.
ಸಿನಿಮಾಗಳನ್ನು ಸಾಮಾಜಿಕ ಬದ್ಧತೆಯೊಂದಿಗೆ ಮಾಡುವ ನೀನಾಸಂ ಮಂಜು ಅವರ ಪ್ರಯತ್ನವನ್ನು ಮೆಚ್ಚಿದ್ದೇನೆ. ಅರ್ಚನಾ, ಕರಿಸುಬ್ಬು, ಅರುಣ್ ಸಾಗರ್ ಸೇರಿದಂತೆ ಚಿತ್ರತಂಡದ ಕಲಾವಿದರು ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರಿಗೆ ಗೆಲುವು ನಿರ್ದೇಶಕರಿಗೆ ಹೆಸರು ಎರಡೂ ಬರುವಂತಾಗಲಿ ಎಂದು ನಾಗತಿಹಳ್ಳಿಯವರು ಮನತುಂಬಿ ಹಾರೈಸಿದ್ದಾರೆ.
ಬುಡ್ಡಿದೀಪ ಫಿಲ್ಮ್ಸ್ ಲಾಂಛನದಲ್ಲಿ ಹೆಬ್ಬಾರ್ ಅವರ ನಿರ್ಮಾಣದ ಚಿತ್ರ ಇದು. ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡವೇ ಇದೆ. ಚಿತ್ರೀಕರಣ ಪೂರ್ತಿಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ.