‘ಟಾಮ್ ಆ್ಯಂಡ್ ಜೆರ್ರಿ’ ತೆರೆಗೆ ಬರಲು ತಯಾರಿ

ಕಲಿತಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಆರಿಸಿಕೊಂಡಿದ್ದು ಚಿತ್ರರಂಗವನ್ನು. ಹೆಸರು ಮಾಡಿದ್ದು ಕೆಜಿಎಫ್ ಚಿತ್ರದ ಸಂಭಾಷಣಾಕಾರನಾಗಿ. ಪ್ರಸ್ತುತ ಸ್ವತಂತ್ರ ನಿರ್ದೇಶಕರಾಗಿ ಮಾಡುತ್ತಿರುವ ಚಿತ್ರದ ಹೆಸರು ಟಾಮ್ ಆ್ಯಂಡ್ ಜೆರ್ರಿ. ‌ಇಂಥದೊಂದು ಹೆಸರಿನ ಚಿತ್ರದೊಳಗೂ ಆಧ್ಯಾತ್ಮಿಕ ಅಂಶ ಇರಿಸ ಬಯಸಿರುವುದು‌ ನಿರ್ದೇಶಕರ ವಿಶೇಷತೆ.

“ಚಿತ್ರದಲ್ಲಿ ಆಧ್ಯಾತ್ಮನ ಕಮರ್ಷಿಯಲ್ ಆಗಿ ಹೇಳಲು ಹೊರಟಿದ್ದೇನೆ. ನಾಯಕ ಧರ್ಮ ಮತ್ತು ನಾಯಕಿ ಸತ್ಯ ನಡುವಿನ ಕತೆ ಇದು. ಜೀವನದಲ್ಲಿ ಸತ್ಯ ಮತ್ತು ಧರ್ಮಗಳು ಹೇಗೆ ಹೊಂದಿಕೊಳ್ಳುತ್ತದೆ ಎನ್ನುವ ಕಲ್ಪನೆ. ನಮಗೆ ಸಂತೋಷ ಪಡಲು ಯಾಕೆ ಕಾರಣಗಳು ಬೇಕಾಗುತ್ತದೆ ಎನ್ನುವುದನ್ನು ತೋರಿಸುವಂಥ ಆಳವಾದ ಸಂದೇಶವನ್ನು ಕೂಡ ಹೇಳಲಾಗಿದೆ” ಎನ್ನುತ್ತಾರೆ ನಿರ್ದೇಶಕರು.

ಇಂದು ನಾವು ಹೆಮ್ಮೆಯಿಂದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಕಾರಣವಾಗಿರುವುದು ಚಿತ್ರದ ಹಾಡು ಎನ್ನುವುದು ನಿರ್ದೇಶಕರ ಮಾತು. ನಿಜಕ್ಕೂ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ಅವರು ‘ಹಾಯಾಗಿದೇ..’ ಎನ್ನುವ ಹಾಡಿನ ಮೂಲಕ ತಂದುಕೊಟ್ಟಿರುವ ಜನಪ್ರಿಯತೆ ಅಂಥದ್ದು. ಈ ಬಗ್ಗೆ ಮಾತನಾಡಿದ ಮ್ಯಾಥ್ಯೂಸ್ ಮನು, “ನಿದ್ದೆ ಬಿಟ್ಟು ನಿರ್ದೇಶಕರನ್ನು ಜೊತೆಗಿರಿಸಿಕೊಂಡು ಮ್ಯೂಸಿಕ್
ಮಾಡಿದ್ದೇವೆ. ಮಾತ್ರವಲ್ಲ ಸಿದ್ದ್ ಶ್ರೀರಾಮ್ ಅವರಿಂದ ಹಾಡಿಸುವ ಪ್ರಯತ್ನಕ್ಕೆ ನಿರ್ಮಾಪಕರು ನೀಡಿದ ಬೆಂಬಲವನ್ನು ಕೂಡ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಯಾಕೆಂದರೆ ಅವರಿಗೆ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಆಫರ್ಸ್ ಇತ್ತು. ಆದರೆ ಒಂದು ಒಳ್ಳೆಯ ಗೀತೆಗಾಗಿ ಕಾದಿದ್ದ ಅವರು ನಮ್ಮ ಟ್ಯೂನ್ ಕೇಳಿ ಒಪ್ಪಿದ್ದರು. ಆದರೆ ಅಂಥ ದುಬಾರಿ ಗಾಯಕರನ್ನು ಕರೆಸಲು ನಿರ್ಮಾಪಕರ ಒಪ್ಪಿಗೆ ಖಂಡಿತವಾಗಿ ಅಗತ್ಯವಿತ್ತು.

ಅದೇ ರೀತಿ ತಾಯಿಯ ಕುರಿತಾದ ಒಂದು ಗೀತೆ ಇದು. ಜೋಗಿ ಚಿತ್ರದಲ್ಲಿ ‘ಬೇಡುವೆನು ವರವನ್ನು’ ಜನಪ್ರಿಯವಾಗಿತ್ತೋ ಅದೇ ರೀತಿ ಈ ಹಾಡು ಕೂಡ ಚಿತ್ರಕ್ಕೆ ಹೆಸರು ತರುವ ನಿರೀಕ್ಷೆ ಇದೆ ಎಂದ ಮ್ಯಾಥ್ಯೂ ಮನು, ತಮ್ಮ ಸಂಗೀತ ನಿರ್ದೇಶನದಲ್ಲಿ ಗಾಯಕಿ‌ ಚಿತ್ರಾ ಅವರಿಂದ ಹಾಡು ಹಾಡಿಸಲು ಸಾಧ್ಯವಾಗಿದ್ದು ಅದೃಷ್ಟ ಎಂದರು. ಗಂಡು ಹೆಣ್ಣಿನ ಹುಸಿಮುನಿಸನ್ನು ಉತ್ತಮ ರೀತಿಯಲ್ಲಿ ಚಿತ್ರವಾಗಿಸುವಲ್ಲಿ‌ ಚಿತ್ರತಂಡ ಪ್ರಯತ್ನ ಮಾಡಿದೆ ಎಂದರು ನಿರ್ಮಾಪಕ ರಾಜು ಶೇರಿಗಾರ್.

ಚಿತ್ರದ ನಾಯಕಿ ಚೈತ್ರಾರಿಗೆ ಸಿನಿಮಾದಲ್ಲಿ ಅಘೋರಿ ಮಾದರಿಯ ಹೇರ್ ಸ್ಟೈಲ್ ಇದೆ. ಆಸೆಗಳೇ ಇರದಂಥ ಪಾತ್ರ ಅವರದಂತೆ. ನಾಯಕ ನಿಶ್ಚಿತ್ ಈ ಹಿಂದೆ ‘ಗಂಟು ಮೂಟೆ’ ಚಿತ್ರದಲ್ಲಿ ತುಂಟನಾಗಿ ಕಾಣಿಸಿದ್ದರು. ಈಗ ಒಬ್ಬ ಮಾಸ್ ಯುವಕನಿಗೆ ಬೇಕಾದ ಮೈಕಟ್ಟಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹೊಡೆದಾಟದ ದೃಶ್ಯಗಳಲ್ಲಿ ‌ನಟಿಸುವುದು ಅವರಿಗೆ ಇಷ್ಟವಂತೆ. ಹಾಗಾಗಿ ಭಯ ಮತ್ತು ಇಷ್ಟದಿಂದ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾಗಿ ಅವರು ಹೇಳಿದರು.

ಅಂದಹಾಗೆ ಈ ಚಿತ್ರದ ಮೂಲಕ ಹೊಸಬರಾಗಿ ಎಂಟ್ರಿ‌ ನೀಡಿದವರೆಲ್ಲ ಈಗ ಚಿತ್ರ ಬಿಡುಗಡೆಗೂ ಮೊದಲೇ ಉತ್ತಮ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಉದಾಹರಣೆಗೆ ಕಳೆದ 13 ವರ್ಷಗಳಿಂದ ಥ್ರಿಲ್ಲರ್ ಮಂಜು, ವಿನೋದ್ ಮಾಸ್ಟರ್‌ ಮೊದಲಾದವರ ಬಳಿ ಸಹಾಯಕರಾಗಿದ್ದ ಅರ್ಜುನ್ ರಾಜ್ ಈ ಚಿತ್ರದ ಮೂಲಕ ಪ್ರಥಮ ಬಾರಿಗೆ ಸಾಹಸ ನಿರ್ದೇಶಕರಾಗಿದ್ದಾರೆ. ಅದರ ಬಳಿಕ ‘ಮದಗಜ’ ಸೇರಿದಂತೆ ಒಂದಷ್ಟು ದೊಡ್ಡ ಚಿತ್ರಗಳಲ್ಲಿ ಕೂಡ ಸಾಹಸ ಸಂಯೋಜಿಸುವ ಅವಕಾಶ ‌ಪಡೆದುಕೊಂಡಿದ್ದಾರೆ‌. ಟಾಮ್ ಆ್ಯಂಡ್ ಜೆರ್ರಿಯಲ್ಲಿ ನೈಜವಾದ ಹೊಡೆದಾಟಗಳಿಗೆ ನಿರ್ದೇಶಕರು ಒತ್ತು ನೀಡಿದ್ದಾರೆ ಎಂದು ಅವರು ಹೇಳುತ್ತಾರೆ.

ಏನಿಲ್ಲವೆಂದರೂ ಸಿನಿಮಾದ ಮೂಲಕ ಒಬ್ಬ ಒಳ್ಳೆಯ ಖಳನಟನನ್ನು ನೀಡಿದ ಖುಷಿ ತಮಗಿದೆ ಎಂದ ನಿರ್ದೇಶಕ ವಿನಯ್ ಅವರು ಗುಣಶೇಖರ್ ಅವರನ್ನು ಪರಿಚಯಿಸಿದರು. ಕೆಜಿಎಫ್ ನಲ್ಲಿ ನಟಿಸಿದ್ದ ಗುಣಶೇಖರ್ ಈ ಚಿತ್ರದಲ್ಲಿ ವಿಭಿನ್ನ ನೋಟ, ವಿಭಿನ್ನ ಮ್ಯಾನರಿಸಂ ಮೂಲಕ ಗಮನ ಸೆಳೆಯಲಿದ್ದಾರಂತೆ. ಗಾತ್ರದಲ್ಲಿ ಕಿರಿಯನಾಗಿದ್ದರೂ ಪಾತ್ರದಲ್ಲಿ ಹಿರಿಮೆ ಹೊಂದಿರುವ ನಟ ಅನಂತ ಪದ್ಮನಾಭ , ಛಾಯಾಗ್ರಾಹಕ ಸಂಕೇತ್, ಕಾರ್ಯಕಾರಿ ನಿರ್ಮಾಪಕ ವಿನಯಚಂದ್ರ ಕೂಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರ ನವೆಂಬರ್ 12ರಂದು ತೆರೆಗೆ ಬರಲಿದೆ.

Recommended For You

Leave a Reply

error: Content is protected !!