
ಕಟ್ಟಳೆ ಎನ್ನುವುದನ್ನು ಕೇಳಿದ್ದೇವೆ. ಕ್ವಾಟಲೆ ಎನ್ನುವುದನ್ನೂ ಕೇಳಿದ್ದೇವೆ. ಆದರೆ ಕಟ್ಲೆ ಎಂದರೇನು? ‘ಒಳ್ಳೆಯ ಸಮಯ’ ಎಂದೇ ಅದರ ಅರ್ಥ ಅಂತಾರೆ ನಟ ಕೆಂಪೇಗೌಡ. ಅದು ಅವರು ನಾಯಕರಾಗಿರುವ ಪ್ರಥಮ ಚಿತ್ರದ ಹೆಸರು.
ಕೆಂಪೇಗೌಡ ಅವರಿಗೆ ನಾಯಕರಾಗಿ ಇದು ಪ್ರಥಮ ಚಿತ್ರ. ಆದರೆ ಇದಕ್ಕೂ ಮೊದಲು 89 ಚಿತ್ರಗಳಲ್ಲಿ ಹಾಸ್ಯದ ಪಾತ್ರಗಳನ್ನು ನಿಭಾಯಿಸಿದ ಅನುಭವಿ. ಶ್ರುತಿಯಂಥ ಶ್ರೇಷ್ಠನಟಿಯ ತಮ್ಮನಾದರೂ ನಾಯಕನಾಗಲು ನೂರು ಚಿತ್ರಗಳವರೆಗೆ ಕಾದವರು ಶರಣ್. ಅದೇ ರೀತಿ ಕೆಂಪೇಗೌಡ ಕೂಡ ದಶಕದ ಹಿಂದೆಯೇ ನಾಯಕನಾಗುವ ಆಫರ್ ಇದ್ದರೂ ತಮಗೊಪ್ಪುವ ಪಾತ್ರಕ್ಕಾಗಿ ಇಷ್ಟು ವರ್ಷ ಕಾದಿದ್ದಾರೆ. ‘ಕಟ್ಲೆ’ ಮೂಲಕ ಅಂಥದೊಂದು ಸಮಯ ಕೂಡಿ ಬಂದಿದೆ ಎನ್ನುವುದು ಅವರ ನಂಬಿಕೆ.
ಇದು ಸುದೀಪ್, ದರ್ಶನ್, ಯಶ್ ಮೊದಲಾದವರ ಸಿನಿಮಾಗಳಲ್ಲಿ ನಟಿಸಿದ್ದ ಕೆಂಪೇಗೌಡ ಅವರು ನಾಯಕರಾಗುತ್ತಿರುವ ಈ ಚಿತ್ರದಲ್ಲಿ ಅವರ ಪಾತ್ರ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ವಿಚಾರಗಳೂ ಇವೆಯಂತೆ. ಜೊತೆಗೆ ಒಂದೊಳ್ಳೆಯ ಸಾಮಾಜಿಕ ಮೌಲ್ಯವಿರುವ ಸಂದೇಶವೂ ಇದೆ ಎನ್ನಲಾಗಿದೆ. ಚಿತ್ರದಲ್ಲಿ ಕೆಂಪೇಗೌಡ ಅವರಿಗೆ ಇಬ್ಬರು ನಾಯಕಿಯರಾಗಿ ಯುವನಟಿಯರಾದ ಅಮೃತಾ ಮತ್ತು ಶರಣ್ಯ ಇದ್ದಾರೆ. ಟೆನ್ನಿಸ್ ಕೃಷ್ಣ, ಪವನ್, ಹರೀಶ್ ರಾಜ್ , ಹರ್ಷಿಕಾ ಪೂಣಚ್ಚ, ರಮೇಶ್ ಪಂಡಿತ್, ಬಿರಾದಾರ್, ಕರಿಸುಬ್ಬು ಮತ್ತು ಎಂ ಎಸ್ ಉಮೇಶ್ ಮೊದಲಾದ ತಾರಾಗಣ ಇದೆ.

ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ತಿಯಾಗಿದ್ದು ಡಬ್ಬಿಂಗ್ ಕೂಡ ಪೂರ್ತಿಯಾಗಿದೆ. ಹಾಡೊಂದರ ಚಿತ್ರೀಕರಣ ಮುಗಿದರೆ ಚಿತ್ರ ತೆರೆಗೆ ಸಿದ್ಧವಾಗಲಿದೆ. ಇಂದು ಜನ್ಮದಿನಾಚರಣೆಯ ಸಂಭ್ರಮದಲ್ಲಿರುವ ಕೆಂಪೇಗೌಡ ಅವರಿಗಾಗಿ ಚಿತ್ರದ ನಿರ್ಮಾಪಕರು ಒಂದು ಪ್ರಾಜೆಕ್ಟ್ ಘೋಷಿಸಿದ್ದಾರೆ.
ಒಟ್ಟಿನಲ್ಲಿ ಹೊಸ ವರ್ಷದಲ್ಲಿ ಕನ್ನಡದ ಹೊಸ ಹೀರೋವಾಗಿ ಕೆಂಪೇಗೌಡ ಗುರುತಿಸಿಕೊಳ್ಳಲಿದ್ದಾರೆ.
ಇದೇ ನಿರ್ಮಾಪಕರಿಂದ ಮತ್ತೊಂದು ಸಿನಿಮಾ!
ಕಟ್ಲೆ ಸಿನಿಮಾದ ಕತೆ,ಚಿತ್ರಕತೆ,ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಎಸ್.ಎಸ್ ವಿಧಾ ಅವರು ವಹಿಸಿಕೊಂಡಿದ್ದಾರೆ. ನಿರ್ಮಾಪಕರು ಹೊಸಕೋಟೆ ಮೂಲದ ಭರತ್‌ಗೌಡ. ಅವರು ಮಂಚೂಣಿ ರಾಜಕೀಯ ಪಕ್ಷದ ಕಾರ್ಯಕರ್ತ, ಸಮಾಜ ಸೇವಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದವರು. ನಿರ್ಮಾಪಕರಾಗಿ ಅವರಿಗೆ ಇದು ಮೊದಲ ಅನುಭವ. ಇಂದು ನಾಯಕ ಕೆಂಪೇಗೌಡ ಅವರ ಜನ್ಮ ದಿನವಾದ ನಿರ್ಮಾಪಕರು ಹೊಸ ಚಿತ್ರದ ಯೋಜನೆಯನ್ನು ಕೂಡ ಪ್ರಕಟಿಸಿದ್ದಾರೆ. ಚಿತ್ರಕ್ಕೆ ಜಾಕಿ ನಿರ್ದೇಶನ, ಶ್ರೀಧರ್ ವಿ ಸಂಭ್ರಮ್ ಸಂಗೀತ, ಎಸ್ ನವೀನ್‌ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಚಿತ್ರಕತೆ-ಸಂಭಾಷಣೆ ಪ್ರಶಾಂತ್ ರಾಜಪ್ಪ ಅವರದಾಗಿರುತ್ತದೆ. ಸದ್ಯದಲ್ಲೆ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ತಂಡವು ಹೇಳಿಕೊಂಡಿದೆ.
