ಯುವನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ. ದೇಶದ ಬಹುತೇಕ ಎಲ್ಲ ಪ್ರಮುಖ ತಾರೆಯರು ಬೆಂಗಳೂರಿಗೆ ಬಂದು ಪುನೀತ್ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸೋಮವಾರ ತಮಿಳು ಖ್ಯಾತ ನಟ ಶಿವಕಾರ್ತಿಕೇಯನ್ ಬೆಂಗಳೂರಿಗೆ ಆಗಮಿಸಿ ನಾಗವಾರದಲ್ಲಿರುವ ಶಿವಣ್ಣನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಶಿವ ಕಾರ್ತಿಕೇಯನ್ ಅವರು ಈ ಹಿಂದೆ ಶಿವರಾಜ್ ಕುಮಾರ್ ನಟನೆಯ ‘ವಜ್ರಕಾಯ’ ಚಿತ್ರದ ಹಾಡೊಂದರಲ್ಲಿಯೂ ಕಾಣಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಆನಂತರ ಅವರು ಪುನೀತ್ ಅವರ ಸದಾಶಿವನಗರದಲ್ಲಿರುವ ಮನೆಗೆ ಭೇಟಿ ನೀಡಿ ಪುನೀತ್ ಪತ್ನಿ ಅಶ್ವಿನಿಯವರಿಗೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲಿಂದ ನೇರವಾಗಿ ಕಂಠೀರವ ಸ್ಟುಡಿಯೋಗೆ ತೆರಳಿ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವ ಕಾರ್ತಿಕ್ ಅವರು “ಪುನೀತ್ ನಮ್ಮ ಜೊತೆಗೆ ಇಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಒಬ್ಬ ಅದ್ಭುತ ನಟರಾಗಿದ್ದರು. ಈಗಲೂ ಕೂಡ ನಾವು ಅವರ ಅಗಲಿಕೆಯ ಶಾಕ್‌ನಲ್ಲಿಯೇ ಇದ್ದೇವೆ. ಅದರಿಂದ ಹೊರಗೆ ಬರೋಕೆ ಆಗ್ತಿಲ್ಲ. ನಾನು ಒಂದು ತಿಂಗಳ ಹಿಂದಯಷ್ಟೇ ಪುನೀತ್ ಜೊತೆ ಮಾತನಾಡಿದ್ದೆ. ನನ್ನ ಚಿತ್ರಗಳಿಗೆ ಅವರು ವಿಶ್ ಮಾಡಿದ್ರು, ಅವರನ್ನು ಕಳೆದುಕೊಂಡಿದ್ದು ಇಡೀ ಸಿನಿಮಾ ರಂಗಕ್ಕೆ ಒಂದು ದೊಡ್ಡ ಲಾಸ್. ಆದ್ರೆ ಅವರು ಎಲ್ಲರ ಮನಸ್ಸಿನಲ್ಲೂ ಸದಾ ಚಿರಾಯು. ಅವರು ಎಲ್ಲಾ ನಟರಿಗೆ ದೊಡ್ಡ ಸ್ಫೂರ್ತಿ. ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿದ್ದ ಅವರು ಎಲ್ಲರನ್ನೂ ತುಂಬ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರೊಬ್ಬ ಅತ್ಯದ್ಭುತ ನಟ ಅವರ ನಿಧನ ಬಹಳ ನೋವು ತಂದಿದೆ. ನನ್ನ ಡಾಕ್ಟರ್ ಸಿನಿಮಾ ನೋಡಿ ಪುನೀತ್ ಮತ್ತು ಶಿವಣ್ಣ ಇಬ್ಬರೂ ವಿಶ್ ಮಾಡಿದ್ದರು.
ಅವಾರ್ಡ್ ಕಾರ್ಯಕ್ರಮದಲ್ಲಿ ನಾನು ಪುನೀತ್ ಅವರನ್ನ ಭೇಟಿಯಾಗಿದ್ದೆ. ಬಹಳಷ್ಟು ಸಾರಿ ನಾನು ಅವರ ಜೊತೆ ಫೋನಿನಲ್ಲಿ ಮಾತನಾಡಿದ್ದೇನೆ ಬಹಳ ಸರಳ ವ್ಯಕ್ತಿತ್ವ ಅವರದು. ಬೆಂಗಳೂರಿಗೆ ಬಂದರೆ ತಪ್ಪದೇ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಆದರೆ ಅವರನ್ನು ಬಂದು ಭೇಟಿ ಮಾಡಲು ಸಾಧ್ಯವೇ ಆಗಲಿಲ್ಲ. ಇಂದು ನಾನು ಅವರನ್ನ ಭೇಟಿಯಾಗಲು ಬಂದರೆ ಅವರೇ ಇಲ್ಲ. ನಮ್ಮ ಮನದಲ್ಲಿ ಯಾವತ್ತೂ ಅವರು ಇರ್ತಾರೆ. ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಅಂಥದರಲ್ಲಿ ಅಭಿಮಾನಿಗಳು ಕುಟುಂಬದವರು ಹೇಗೆ ನಂಬುತ್ತಾರೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಟ ಕಾರ್ತಿಕೇಯನ್ ಹೇಳಿದರು.