ಮೂರು ಮಂದಿ ಸೋಮಾರಿಗಳ ಬದುಕಿನ ಕತೆಯಾಗಿ ಮೂಡಿ ಬಂದಿರುವ ಸಿನಿಮಾ ‘ಮನೆಗೊಬ್ಬ ಮಂಜುನಾಥ.’ ಅದರಲ್ಲಿನ ವಿಶೇಷತೆ ಬಗ್ಗೆ ಚಿತ್ರತಂಡ ಪೋಸ್ಟರ್ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿ ಮೂಲಕ ಒಂದಷ್ಟು ಮಾಹಿತಿ ನೀಡಿದೆ.
‘ಮನೆಗೊಬ್ಬ ಮಂಜುನಾಥ’ ಎನ್ನುವ ಚಿತ್ರ ಮೂಡಿ ಬರಲು ಮೊದಲ ಕಾರಣ ‘ಉಗ್ರಂ ರೆಡ್ಡಿ’ ಎಂದೇ ಗುರುತಿಸಿಕೊಳ್ಳುವ ನಿರ್ಮಾಪಕ ಆರ್ ನಾರಾಯಣ ಮೂರ್ತಿ ಎಂದೇ ಹೇಳಬಹುದು. ಚಿತ್ರದ ಬಗ್ಗೆ ಮಾತನಾಡಿದ ಅವರು “ನಿರ್ದೇಶಕ ರವಿರಾಮ್ ನಿರ್ದೇಶನದಲ್ಲಿ ಈ ಹಿಂದೆ ‘ದೇವತೆ’ ಎನ್ನುವ ಚಿತ್ರದಲ್ಲಿ ಮಾಡಿದ್ದೆ. ‘ರಾಜಸಿಂಹ’ದಲ್ಲಿಯೂ ಮಾಡಿದ್ದೆ. ಚಿತ್ರವನ್ನು ನಮ್ಮದೇ ಸಂಸ್ಥೆಯ ಮೂಲಕ ನಿರ್ಮಿಸುವುದು ಎಂದಾದ ಮೇಲೆ ಅವಿರಾಮ್ ಅವರನ್ನೇ ಆಯ್ಕೆ ಮಾಡಲು ತೀರ್ಮಾನಿಸಿದೆವು. ಈ ಚಿತ್ರದಲ್ಲಿ ಹೊಡೆದಾಟ ಇಲ್ಲ. ನಾನು ಈ ಹಿಂದಿನ ಚಿತ್ರಗಳಲ್ಲಿ ಕಾಣಿಸಿಕೊಂಡಂತೆ ಭಯಾನಕ ಖಳನಾಗಿ ನಟಿಸಿಲ್ಲ. ಆದರೆ ಸೋಮಾರಿ ಹುಡುಗರನ್ನು ದಾರಿ ತಪ್ಪಿಸುವ ಸೋಮಣ್ಣನಾಗಿ ಕಾಣಿಸಿಕೊಂಡಿದ್ದೇನೆ” ಎಂದು ಅವರು ಹೇಳಿದರು.
ನಿರ್ದೇಶಕ ರವಿರಾಮ್ ಮಾತನಾಡಿ, “ಮನೆಗೊಬ್ಬ ಮಂಜುನಾಥ ಚಿತ್ರದ ಮೂರು ಪಾತ್ರಗಳ ಹೆಸರು
ವೆಂಕಿ, ನಾಣಿ, ಸೀನ ಎಂದಾಗಿರುತ್ತದೆ. ಈ ಮೂರು ಜನ ಸ್ನೇಹಿತರ ಪಾತ್ರವನ್ನು ಕೇಶವ್, ಪವನ್, ಕಾರ್ತಿಕ್ ನಿಭಾಯಿಸಿದ್ದಾರೆ. ‘ಎದ್ದೇಳು ಮಂಜುನಾಥ’ ಚಿತ್ರದಲ್ಲಿನ ಮಂಜುನಾಥನ ಪಾತ್ರದ ಸ್ಫೂರ್ತಿ ಪಡೆದಂತೆ ಇಲ್ಲಿನ ಮೂರು ಪಾತ್ರಗಳು ಇರುತ್ತವೆ. ಕಷ್ಟಪಡದೆ ಹಣ ಸಂಪಾದಿಸಬೇಕು ಎನ್ನುವ ಸೋಮಾರಿಗಳ ಕತೆ ಇದು. ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಹಿರಿಯನಟ ಡಿಂಗ್ರಿ ನಾಗರಾಜ್ ಚಿತ್ರತಂಡಕ್ಕೆ ಶುಭಕೋರಿದರು.
ಕಥಾನಾಯಕರಲ್ಲೊಬ್ಬರಾದ ಕೇಶವ್ ನಾಣಿಯ ಪಾತ್ರ ನಿಭಾಯಿಸಿದ್ದಾರೆ. ಪತ್ನಿ ಮಗು ಇದ್ದರೂ ಕೆಲಸದತ್ತ ಗಮನ ನೀಡದ ವ್ಯಕ್ತಿತ್ವ ಆತನದು. ಅಂದಹಾಗೆ ಈ ಪಾತ್ರವನ್ನು ನವನಟ ಕೇಶವ್ ಅವರು ನಿಭಾಯಿಸಿದ್ದು, ಉಗ್ರಂ ರೆಡ್ಡಿಯ ಸಹೋದರರಾದ ಅವರು ಚಿತ್ರದ ನಿರ್ಮಾಣದಲ್ಲಿ ಸಹಭಾಗಿಯೂ ಹೌದು. ಸುದ್ದಿಗೋಷ್ಠಿಯಲ್ಲಿ ಛಾಯಾಗ್ರಾಹಕ ಬಿ ಎಲ್ ಬಾಬು ಕೂಡ ಉಪಸ್ಥಿತರಿದ್ದರು. ಹಿರಿಯ ನಟ ದತ್ತಣ್ಣ, ಕೆಜಿಎಫ್ ಚಿತ್ರದ ತಾತ ಕೃಷ್ಣೋಜಿರಾವ್ ಮೊದಲಾದವರು ಸಿನಿಮಾದ ತಾರಾಗಣದಲ್ಲಿದ್ದಾರೆ. ಸುದ್ದಿಗೋಷ್ಠಿಗೆ ಮೊದಲು ಇತ್ತೀಚೆಗೆ ತಾನೇ ನಮ್ಮನ್ನು ಅಗಲಿರುವ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಗ್ರಂ ರೆಡ್ಡಿ ತಾವು ಸಾಕಷ್ಟು ಸಿನಿಮಾಗಳಲ್ಲಿ ಅವರೊಂದಿಗೆ ನಟಿಸಿದ್ದನ್ನು ನೆನಪಿಸಿಕೊಂಡು ಕಣ್ಣೀರು ಹರಿಸಿದರು.