ಹೊಸಬರ ತಂಡದ ಜಾಡಘಟ್ಟ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಸೋಮವಾರ ನೆರವೇರಿತು. ಚಿತ್ರದ ನಿರ್ಮಾಪಕಿ ಶಶಿಮಣಿ ಮಾತನಾಡಿ “ಇದು ಒಬ್ಬರಿಂದ ಆಗಿರುವ ಚಿತ್ರವಲ್ಲ, ಒಂದು ಇಡೀ ತಂಡದ ಕನಸು, ನನಗೆ ಸಿನಿಮಾಗಳೆಂದರೆ ಇಷ್ಟವಿತ್ತು, ನನ್ನ ಸಹೋದರ ಕೂಡ ಚಿತ್ರ ಮಾಡಬೇಕು ಎಂದಾಗ ನಿರ್ಮಾಣಕ್ಕೆ ಮುಂದಾಗಿದ್ದಾಗಿ ಹೇಳಿದರು.
ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶಿಸುವ ಜೊತೆಗೆ ನಾಯಕರಾಗಿಯೂ ನಟಿಸಿರುವ ರಘು ಅವರ ಮಾತಿನ ಪ್ರಕಾರ ಜಾಡಘಟ್ಟ ಎನ್ನುವುದು ಒಂದು ಹಳ್ಳಿಯ ಹೆಸರು. ಬೆಟ್ಟಗಳೇ ತುಂಬಿದ ಆ ಊರನ್ನು ಕಂಡಮೇಲೆ ಅಲ್ಲೇ ನಡೆದ ಘಟನೆಯೊಂದನ್ನು ತೆಗೆದುಕೊಂಡು ಚಿತ್ರ ಮಾಡಿದ್ದೇನೆ. ಯೌವನಕ್ಕೆ ಬಂದ ಪುತ್ರನೋರ್ವ ಅನಿರೀಕ್ಷಿತವಾಗಿ ತಂದೆಯನ್ನು ಕಳೆದುಕೊಂಡಾಗ ಹೇಗೆ ಜವಾಬ್ದಾರಿ ಪಡೆದುಕೊಳ್ಳುತ್ತಾನೆ ಎನ್ನುವುದು ಕತೆ, ಜೊತೆಗೆ ಪ್ರೇಮಕತೆಯೂ ಸೇರಿಕೊಳ್ಳುತ್ತದೆ. ನಾಯಕಿಯಾಗಿ ನವನಟಿ ಪ್ರೇರಣಾ ರಘುವಿಗೆ ಜೋಡಿಯಾಗಿದ್ದಾರೆ. ದಶಕದಿಂದ ಸಂಕಲನಕಾರನಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ತಾನು ಒಂದಷ್ಟು ಧಾರಾವಾಹಿಗಳ ಜೊತೆಗೆ ಇತ್ತೀಚೆಗೆ ತೆರೆಕಂಡ ಸವರ್ಣದೀರ್ಘ ಸಂಧಿ ಚಿತ್ರಕ್ಕೂ ಸಂಕಲನ ಮಾಡಿದ್ದೆ. ಜಾಡಘಟ್ಟ ಚಿತ್ರಕ್ಕೂ ತನ್ನದೇ ಸಂಕಲನ ಇದೆ ಎಂದು ರಘು ಹೇಳಿಕೊಂಡರು.
ಅಭಿಷೇಕ್ ಜಿ ರಾಯ್ ಸಂಗೀತದಲ್ಲಿ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಬೃಂದಾವನ ಓಡಿಯೋ ಮೂಲಕ ಬಿಡುಗಡೆಯಾಗಿವೆ. ಗಾಯಕ ಶಶಾಂಕ್ ಶೇಷಗಿರಿ ಮತ್ತು ವರ್ಷಾ ಬಿ ಸುರೇಶ್ ಕಂಠದಲ್ಲಿ ಮೂಡಿರುವ ಲಿರಿಕಲ್ ಸಾಂಗ್ ಪ್ರದರ್ಶಿಸಲಾಯಿತು. ಇತ್ತೀಚೆಗಷ್ಟೇ ನಮ್ಮೆಲ್ಲರನ್ನು ಅಗಲಿದ ಯುವನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಚಿತ್ರದ ಖಳನಟ ಚಂದ್ರು, ಛಾಯಾಗ್ರಾಹಕ ಪ್ರದೀಪ್ ಜೈನ್, ಕಾಸ್ಟ್ಯೂಮ್ ಡಿಸೈನರ್ ಲಕ್ಷ್ಮೀಕಾಂತ್ ಸೇರಿದಂತೆ ಅತಿಥಿಯಾಗಿ ಆಗಮಿಸಿ ಶುಭ ಕೋರಿದ ಎಸ್ ಕೆ ಗ್ರೂಪ್ ಆಫ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸಿ ಬಿ ಶಶಿಧರ್ ಮೊದಲಾದವರು ಉಪಸ್ಥಿತರಿದ್ದರು.