
ಮುದ್ದು ನೀನು.. ಎನ್ನುವ ಹಾಡು ಆನಂದ್ ಆಡಿಯೋನ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿ ಅದಾಗಲೇ ಗಂಟೆಗಳು ಕಳೆದಿತ್ತು. ಆದರೂ ಹಾಡನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಿ ಅದರ ವೈಭವ ತೋರಿಸುವ ಪ್ರಯತ್ನ ‘ಲವ್ ಯು ರಚ್ಚು’ ಚಿತ್ರತಂಡ ಮಾಡಿತು.
ನಿರ್ದೇಶಕ ಗುರುದೇಶಪಾಂಡೆ ತಮ್ಮ ‘ಜಿ ಸಿನಿಮಾಸ್’ ಬ್ಯಾನರ್ ಮೂಲಕ ನಿರ್ಮಿಸಿರುವ ಚಿತ್ರ ‘ಲವ್ ಯು ರಚ್ಚು’. ಈ ಹಿಂದೆ ಅವರದೇ ನಿರ್ಮಾಣದ ‘ಜಂಟಲ್ ಮನ್’ ಸಿನಿಮಾದಲ್ಲಿ ಜನಪ್ರಿಯವಾದ ‘ಮರಳಿ ಮನಸಾಗಿದೆ..’ ಗೀತೆಯನ್ನು ರಚಿಸಿದ ನಾಗಾರ್ಜುನ ಶರ್ಮ ಅವರೇ ‘ಮುದ್ದು ನೀನು..’ ಎನ್ನುವ ಈ ಗೀತೆಯನ್ನು ಕೂಡ ರಚಿಸಿದ್ದು ಮಣಿಕಾಂತ್ ಕದ್ರಿಯವರ ಸಂಗೀತದಲ್ಲಿ ಮೂಡಿಬಂದಿದೆ. ಮತ್ತೊಂದು ಗೀತೆ ‘ನೋಡು ನನ್ನನೇ’ಯನ್ನು ಆರ್ ಪುನೀತ್ ಆರ್ಯ ರಚಿಸಿದ್ದಾರೆ. ಇಬ್ಬರನ್ನೂ ವೇದಿಕೆಗೆ ಕರೆದು ಪರಿಚಯಿಸಲಾಯಿತು.
ಆನಂದ್ ಆಡಿಯೋ ಶ್ಯಾಮ್ ಮಾತನಾಡಿ, ತಾವು ಈ ಚಿತ್ರದ ಹಾಡುಗಳನ್ನು ಪಡೆದುಕೊಳ್ಳಲು ಕಾರಣವಾದ ಅಂಶಗಳ ಬಗ್ಗೆ ವಿವರಿಸಿದರು. “ಅಜಯ್ ರಾವ್ ಮತ್ತು ರಚಿತಾ ರಾಮ್ ಅವರ ಚಿತ್ರಗಳಲ್ಲಿ ಇದುವರೆಗೂ ಜನಪ್ರಿಯ ಹಾಡುಗಳೇ ಬಂದಿವೆ. ಅವರಿಬ್ಬರೂ ಒಂದಾಗಿ ನಟಿಸುತ್ತಾರೆ ಎಂದಾಗ ಸಹಜವಾಗಿ ಅತ್ಯದ್ಭುತ ಹಾಡುಗಳ ನಿರೀಕ್ಷೆ ಇರುತ್ತದೆ. ಜೊತೆಗೆ ಗುರುದೇಶಪಾಂಡೆಯವರ ಬ್ಯಾನರ್ ಸಿನಿಮಾ ಎನ್ನುವ ಕಾರಣಕ್ಕೆ ನಿರೀಕ್ಷೆಗಳು ಹುಸಿಯಾಗುವ ಸಂದರ್ಭವೇ ಇಲ್ಲ. ಅದೇ ಕಾರಣಕ್ಕಾಗಿ ಹಾಡುಗಳ ಹಕ್ಕು ಪಡೆದುಕೊಂಡಿದ್ದೇನೆ. ಇವೆರಡೂ ಹಾಡುಗಳು ನಿಧಾನಕ್ಕೆ ಕಿಕ್ ಕೊಡುವಂಥವು. ಹಾಗಾಗಿ ಇನ್ನಷ್ಟು ಜನಪ್ರಿಯವಾಗುವ ನಿರೀಕ್ಷೆ ಇದೆ” ಎಂದರು.
ಅಂದಹಾಗೆ ಎರಡು ಹಾಡುಗಳಿಗೆ ಕೂಡ ಚಿತ್ರದ ನಾಯಕ ಅಜಯ್ ರಾವ್ ಅವರೇ ನೃತ್ಯ ನಿರ್ದೇಶನ ಮಾಡಿರುವುದು ವಿಶೇಷ. ಈ ಬಗ್ಗೆ ಮಾತನಾಡಿದ ಅವರು ಕತೆಯಲ್ಲಿ ತುಂಬ ಇನ್ವಾಲ್ವ್ ಆಗಿದ್ದ ಕಾರಣ, ಆ ಹಾಡು ಹೇಗೆ ಮೂಡಿ ಬರಬೇಕು ಎನ್ನುವ ಕಲ್ಪನೆ ನನಗಿತ್ತು. ಹಾಗಾಗಿಯೇ ಕೊರಿಯೋಗ್ರಫಿ ಮಾಡುವುದು ಸುಲಭವಾಯಿತು ಎಂದರು. ರಚಿತಾ ಜೊತೆಗೆ ನಟಿಸಬೇಕು ಎನ್ನುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಗಂಡ ಎಂದರೆ ಈ ರೀತಿ ಇರಬೇಕು ಎಂದು ಎಲ್ಲ ಮಹಿಳೆಯರು ಅಂದುಕೊಳ್ಳುವಂಥ ಪಾತ್ರ. ಅದು ಚೆನ್ನಾಗಿ ಮೂಡಿ ಬರಲು ರಚಿತಾ ಅವರ ಪಾತ್ರದ ಪ್ರಭಾವ ಕೂಡ ಕಾರಣವಾಗಿದೆ. ನನ್ನ ಚಿತ್ರ ಬದುಕಲ್ಲಿ ಒಂದು ದಾಖಲೆ ಮಾಡುವ ನಿರೀಕ್ಷೆ ಇದೆ ಎಂದರು.

“ಚಿತ್ರದ ನಿರ್ದೇಶಕ ಶಂಕರ್ ‘ರಾಜಾಹುಲಿ’ ಚಿತ್ರೀಕರಣ ಮಾಡುತ್ತಿದ್ದ ಕಾಲದಿಂದಲೂ ನನ್ನ ಜೊತೆಗೆ ಇದ್ದಾನೆ” ಎಂದು ಮಾತು ಶುರುಮಾಡಿದ ನಿರ್ಮಾಪಕ ಗುರುದೇಶಪಾಂಡೆ ಆತನ ತಾಳ್ಮೆ ನನಗೆ ಇಷ್ಟ. ಹಾಗಾಗಿಯೇ ಈ ಚಿತ್ರಕ್ಕೆ ಆತನನ್ನೇ ನಿರ್ದೇಶಕನಾಗಿಸಿದೆ. ಮುಂದೆ ಇನ್ನಷ್ಟು ಬೆಳೆಯಬಲ್ಲ ಎಂದರು. ಬಳಿಕ ಮಾತನಾಡಿದ ಶಂಕರ್ “ನಾನು ಹೊಸಬ ಎನ್ನುವುದನ್ನು ಪರಿಗಣಿಸದೆ ನನ್ನನ್ನು ಗೌರವದಿಂದ ನಡೆಸಿದ ನಾಯಕ ಅಜಯ್ ರಾವ್ ಮತ್ತು ನಾಯಕಿ ರಚಿತಾ ರಾಮ್ ಅವರಿಗೆ ವಂದನೆಗಳು” ಎಂದರು. ನಾಯಕಿ ರಚಿತಾ ಚಿತ್ರಕ್ಕಾಗಿ ಸತತ 24 ಗಂಟೆ ಚಿತ್ರೀಕರಣದಲ್ಲಿ ಭಾಗಿಯಾದ ಸಂದರ್ಭ ಬಂದಿತ್ತಂತೆ. ಆದರೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದ ಅವರು ತಂತ್ರಜ್ಞರನ್ನು ತಾನೇ ಎಬ್ಬಿಸಿ ಚಿತ್ರೀಕರಣಕ್ಕೆ ರೆಡಿ ಮಾಡುತ್ತಿದ್ದೆ ಎಂದು ನಗುತ್ತಾರೆ.
ಚಿತ್ರದಲ್ಲೊಂದು ಪ್ರಧಾನ ಪಾತ್ರ ಮಾಡಿರುವ ರಾಘು ಶಿವಮೊಗ್ಗ, ಒಂದೇ ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ರಘು ರಮಣಕೊಪ್ಪ ಮೊದಲಾದವರು ತಮ್ಮ ಅನುಭವ ಹಂಚಿಕೊಂಡರು. ಅಂದಹಾಗೆ ಚಿತ್ರದ ಸಂಗೀತ ನಿರ್ದೇಶಕ ಮಣಿಕಾಂತ್ ಮತ್ತು ಛಾಯಾಗ್ರಾಹಕ ಶ್ರೀ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.