ಮೊದಲ ಚಿತ್ರ ನಿರ್ದೇಶಿಸುವವರು ಸಾಕಷ್ಟು ಕನಸುಗಳೊಂದಿಗೆ ಬಂದಿರುತ್ತಾರೆ. ಆದರೆ ಕನಸುಗಳು ನಿಜಕ್ಕೂ ಹೊಸತನದಿಂದ ಕೂಡಿವೆ ಎನ್ನುವ ಭರವಸೆ ಮೂಡಿಸುವವರು ತುಂಬ ಕಡಿಮೆ. ಆದರೆ ಟ್ರೇಲರ್ ನಿಂದ ಹಿಡಿದು ಹಾಡುಗಳವರೆಗೆ ತುಂಬ ಆಕರ್ಷಣೆ ಮೂಡಿಸಿರುವ, ಸಾಕಷ್ಟು ನಿರೀಕ್ಷೆ ಸೃಷ್ಟಿಸಿರುವ ಸಿನಿಮಾ ‘ಪ್ರೇಮಂ ಪೂಜ್ಯಂ’. ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಈ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದ್ದು ಚಿತ್ರದ ಬಿಡುಗಡೆಪೂರ್ವ ಸುದ್ದಿಗೋಷ್ಠಿ ಕುರಿತಾದ ಮಾಹಿತಿಗಳು ಇಲ್ಲಿವೆ.
“ಕತೆ ಕೇಳಿದೊಡನೆ ಈ ಚಿತ್ರ ಮಾಡುವಂತೆ ಪ್ರೋತ್ಸಾಹ ನೀಡಿದ ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಈ ಸಂದರ್ಭದಲ್ಲಿ ಮೊದಲು ನೆನಪಿಸಿಕೊಳ್ಳಬೇಕು” ಎಂದು ಮಾತು ಶುರು ಮಾಡಿದ ನಿರ್ದೇಶಕ ರಾಘವೇಂದ್ರ ಬಿ ಎಸ್ ಅವರು ಬಳಿಕ ನೆನಪಿಸಿಕೊಂಡಿದ್ದು ತಮಗೆ ಬೆಂಬಲವಾಗಿ ನಿಂತ ವೈದ್ಯಮಿತ್ರರನ್ನು.
ಎಲ್ಲಕ್ಕಿಂತ ಹೆಚ್ಚಾಗಿ ಇದು ನಟ ಲವ್ಲಿ ಸ್ಟಾರ್ ಪ್ರೇಮ್ ಅವರಿಗೆ 25ನೇ ಸಿನಿಮಾ. ಇದುವರೆಗಿನ 24 ಚಿತ್ರಗಳನ್ನು ಕೂಡ ಮುತುವರ್ಜಿಯಿಂದ ಆಯ್ಕೆ ಮಾಡಿರುವ ಪ್ರೇಮ್ ಈ 25ನೇ ಸಿನಿಮಾ ಬಗ್ಗೆಯಂತೂ ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಹಾಗಾಗಿ ಅವರು ಈ ಹೊಸ ನಿರ್ದೇಶಕನನ್ನು ಒಪ್ಪಿಕೊಂಡಿರುವುದು ಕೂಡ ಸಿನಿಮಾದ ಮೇಲಿನ ಭರವಸೆಯನ್ನು ಹೆಚ್ಚಿಸುತ್ತದೆ. ಅದಕ್ಕೆ ತಕ್ಕಂತೆ ಪ್ರೇಮ್ ಏಳು ಗೆಟಪ್ ಮೂಲಕ ಕಾಣಿಸುತ್ತಿರುವುದು ಮತ್ತೊಂದು ವಿಶೇಷ.
ಮಾಸ್ಟರ್ ಆನಂದ್ ಅವರು ಸಿನಿಮಾದಲ್ಲಿ ಮತ್ತೊಂದು ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು ಪ್ರೇಮ್ ಅವರ ಸ್ನೇಹಿತರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರಿಬ್ಬರು ಸೇರಿ ನಟಿಸುತ್ತಿರುವ ಪ್ರಥಮ ಚಿತ್ರವಾಗಿದೆ. ಆನಂದ್ ಅವರ ಲುಕ್ ನಲ್ಲಿಯೂ ಮೂರು ಶೇಡ್ ಇವೆಯಂತೆ. ‘ನಾಯಕನ ಸ್ನೇಹಿತ ಬರೇ ಹಾಸ್ಯಕ್ಕೆ ಮೀಸಲು’ ಎನ್ನುವ ನಿಯಮಗಳನ್ನು ಮೀರಿ ಭಾವನಾತ್ಮಕ ಸನ್ನಿವೇಶಗಳಲ್ಲಿ ಕೂಡ ಆನಂದ್ ಅಭಿನಯಿಸಿದ್ದಾಗಿ ತಿಳಿದುಬಂದಿದೆ.
ಎರಡು ವರ್ಷಗಳಿಂದ ಚಿತ್ರೀಕರಣಗೊಂಡಿರುವ ಈ ಸಿನಿಮಾ ಕಲಾವಿದರ ಬದಲಾದ ಕಾಲಘಟ್ಟದಲ್ಲಿನ ಲುಕ್ಸ್ ಗಾಗಿಯೇ ಹೆಚ್ಚು ಕಾಲಾವಧಿ ತೆಗೆದುಕೊಂಡಿದೆ ಎನ್ನುವುದು ನಿರ್ದೇಶಕ ರಾಘವೇಂದ್ರ ಅವರ ಮಾತು. ಇಪ್ಪತ್ತನೇ ವಯಸ್ಸಿನಿಂದ ನಲವತ್ತರ ತನಕದ ವಿಭಿನ್ನ ನೋಟಗಳಲ್ಲಿ ಕಾಣಿಸುವ ಪ್ರೇಮ್ ಅವರಿಗೆ ಹೊಂದಿಕೊಳ್ಳುವಂತೆ ನಾಯಕಿ ಬೃಂದಾ ಆಚಾರ್ಯ ಕೂಡ ಮೂರು ಶೇಡ್ ಮೂಲಕ ಆಕರ್ಷಿಸಲಿದ್ದಾರಂತೆ.
ಚಿತ್ರ ಚೆನ್ನಾಗಿ ಮೂಡಿಬರಲು ನಿರ್ದೇಶಕರು ತುಂಬ ಪ್ರಯತ್ನ ಪಟ್ಟಿದ್ದು ದೇಶ ವಿದೇಶಗಳ ತಾಣಗಳನ್ನು ಆಕರ್ಷಕವಾಗಿ ಬಳಸಲಾಗಿದೆ ಎಂದರು ಮಾಸ್ಟರ್ ಆನಂದ್. ಅದಕ್ಕೊಂದು ಉದಾಹರಣೆ ನೀಡಿದ ಅವರು, ನಾಯಕನನ್ನು ಹುಡುಕುವ ಒಂದು ದಾರಿಯ ಚಿತ್ರೀಕರಣವನ್ನು ಬೆಂಗಳೂರು, ಊಟಿ ಮತ್ತು ವಿದೇಶದ ಒಂದು ಜಾಗದಲ್ಲಿ ಚಿತ್ರೀಕರಿಸಿದ್ದು ಹೀಗೆ ಪ್ರತಿ ಪಯಣವೂ ಕಲರ್ ಫುಲ್ ಆಗಿದೆ. ಹಾಗಾಗಿ ಸಿನಿಮಾ ಒಂದು ದೃಶ್ಯ ಕಾವ್ಯದಂರೆ ಮೂಡಿಬಂದಿದೆ ಎಂದು ಆನಂದ್ ಹೇಳಿದರು.
ಚಿತ್ರದ ಮತ್ತೊಂದು ಪ್ರಮುಖ ಅಂಶ ಇದರಲ್ಲಿ ಒಟ್ಟು 12 ಹಾಡುಗಳಿವೆ. “ಹಾಡುಗಳೇ 52 ನಿಮಿಷ ಇದ್ದರೆ ಕತೆಯ ನಡುವೆ ಅನಗತ್ಯ ಅನಿಸದೇ” ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ದೇಶಕರು, ಈ ಹಾಡುಗಳ ಜೊತೆಗೆ ಕತೆ ಕೂಡ ಮುಂದುವರಿಯುತ್ತದೆ. ಚಿತ್ರದ ಅರ್ಧಗಂಟೆಯ ಕತೆ ಹಾಡುಗಳಲ್ಲೇ ಇರುತ್ತದೆ. ಹಿನ್ನೆಲೆ ಸಂಗೀತ ಅಥವಾ ಮಾತುಗಳ ಮೂಲಕ ಹೇಳಬಹುದಾದ ಕತೆಯನ್ನು ನಾನು ಹಾಡುಗಳಿಂದ ಪ್ರೇಕ್ಷಕರಿಗೆ ಆಪ್ತವಾಗಿಸಿದ್ದೇನೆ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಈಗಾಗಲೇ ಹಾಡುಗಳನ್ನು ಮೆಚ್ಚಿರುವ ಪ್ರೇಕ್ಷಕರು ಚಿತ್ರಕ್ಕೆ ಯಾವಮಟ್ಟಿನ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ಇನ್ನು ಎರಡು ದಿನಗಳಲ್ಲಿ ಸಾಬೀತಾಗಲಿದೆ.
ಚಿತ್ರದ ಸುದ್ದಿಗೋಷ್ಠಿಯಲ್ಲಿ ನಾಯಕ ಲವ್ಲಿಸ್ಟಾರ್ ಪ್ರೇಮ್, ನಿರ್ದೇಶಕ ರಾಘವೇಂದ್ರ ಬಿ ಎಸ್, ನಟ ಮಾಸ್ಟರ್ ಆನಂದ್ ಜೊತೆಗೆ ಮತ್ತೋರ್ವ ನಟ ಮತ್ತು ನಿರ್ಮಾಣದಲ್ಲಿ ಸಹಭಾಗಿಯಾಗಿರುವ ವೈದ್ಯ ಅಂಜನ್ ಅವರು ಉಪಸ್ಥಿತರಿದ್ದರು. ಸುದ್ದಿಗೋಷ್ಠಿಗೂ ಮುನ್ನ ಅಗಲಿದ ನಟ ಪುನೀತ್ ಅವರ ನೆನಪನ್ನು ಹಂಚಿಕೊಂಡ ಚಿತ್ರತಂಡ ಶ್ರದ್ಧಾಂಜಲಿ ಸಲ್ಲಿಸಿತು.