‘ಪ್ರೇಮಂ ಪೂಜ್ಯಂ’ ವಿಜಯಂ ಸನಿಹಂ!

ಲವ್ಲಿ ಸ್ಟಾರ್ ಪ್ರೇಮ್ ನಟನೆಯ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ತೆರೆಕಂಡು ಇಂದು ನಾಲ್ಕನೇ ದಿನ. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎನ್ನುವ ಖುಷಿ ಹಂಚಿಕೊಂಡಿದೆ ಚಿತ್ರತಂಡ. ಇಂಥದೊಂದು ಒಳ್ಳೆಯ ಅಭಿಪ್ರಾಯ ನೀಡಿರುವ ಜನತೆಗೆ ವಂದನೆ ಹೇಳಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು.

ಅನಿರೀಕ್ಷಿತವಾಗಿ ಆಗಮಿಸಿದ ಗುಂಪು!

“ಸಾಮಾನ್ಯವಾಗಿ ಆಕ್ಷನ್ ಸಿನಿಮಾಗೆ ಸಿಗುವ ಓಪನಿಂಗ್ ಲವ್ ಸ್ಟೋರಿಗಳಿಗೆ ಸಿಗುವುದಿಲ್ಲ. ಚಿತ್ರ ಜನರನ್ನು ಸೆಳೆಯಲು ಒಂದೆರಡು ವಾರ ತೆಗೆದುಕೊಳ್ಳುವುದು ಸಹಜ. ಹಾಗಾಗಿಯೇ ಬಿಡುಗಡೆಯಾದೊಡನೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಬರಬಹುದು ಎನ್ನುವ ನಿರೀಕ್ಷೆ ನಮಗಿರಲಿಲ್ಲ. ಆದರೆ ಆದರೆ ಜನತೆ ನಮ್ಮ ಚಿತ್ರಕ್ಕೆ ಬಹಳ ಬೇಗನೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ” ಎಂದು ಸಂಭ್ರಮದಿಂದ ಮಾತು ಶುರು ಮಾಡಿದರು ನಿರ್ದೇಶಕ ಬಿ ಎಸ್ ರಾಘವೇಂದ್ರ. ಜನ ಗುಂಪು ಗುಂಪಾಗಿ ಸಿನಿಮಾ ನೋಡಲು ಹೋಗುತ್ತಿದ್ದಾರೆ. ನಾನು ಲವ್ವರ್ಸ್ ಮಾತ್ರ ಹೋಗುತ್ತಾರೆ ಎಂದುಕೊಂಡಿದ್ದೆ ಲ; ಆದರೆ ಕುಟುಂಬ ಸಮೇತ ಹಿರಿಯರು ಕೂಡ ಹೋಗುತ್ತಿದ್ದಾರೆ. ಎಪ್ಪತ್ತರಿಂದ ತೊಂಬತ್ತು ಪರ್ಸೆಂಟ್ ತನಕ ಚಿತ್ರಮಂದಿರ ಭರ್ತಿಯಾಗಿದೆ. ಇದು ನಾವೇ ಚಿತ್ರ ಮಂದಿರಗಳಿಗೆ ಭೇಟಿ ಕೊಟ್ಟಾಗ ಕಂಡ ದೃಶ್ಯ. ಚಿತ್ರದ ಹಾಸ್ಯ ಸನ್ನಿವೇಶಗಳಿಗೆ ಮಾಲ್ ಗಳಲ್ಲೂ ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದ್ದಾರೆ. ಮೆಡಿಕಲ್ ವಿದ್ಯಾರ್ಥಿಗಳು ಕೂಡ ಚಿತ್ರ ನೋಡಲು ಹೋಗುತ್ತಿದ್ದಾರೆ. ಹೀಗೆ ಎರಡು ಮೂರು ದಿನಗಳಲ್ಲೇ ಚಿತ್ರ ಪಿಕ್ ಅಪ್ ಆಗಿರುವುದಕ್ಕೆ ಖುಷಿ ಇದೆ ಎನ್ನುತ್ತಾರೆ ನಿರ್ದೇಶಕರು.

ಪಾತ್ರದ ಸದ್ಗುಣಕ್ಕೆ ಜನಮೆಚ್ಚಿದ್ದಾರೆ..!

ಚಿತ್ರದ ನಾಯಕ ಪ್ರೇಮ್ ಮಾತನಾಡಿ,
“ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಅದು ನನಗೂ ಅನುಭವವಾಗಿದೆ. ಅದಕ್ಕೆ ನಾಯಕನ ಪಾತ್ರಕ್ಕಿರುವ ಗುಣ ಕೂಡ ಪ್ರಮುಖ ಕಾರಣ. ನನ್ನದು ಒಬ್ಬ ಸರ್ವಗುಣ ಸಂಪನ್ನನಾದ ಪ್ರೇಮಿಯ ಪಾತ್ರ ಎನ್ನುವ ಕಾರಣದಿಂದಲೇ ನಾನು ಈ ಪಾತ್ರವನ್ನು ಒಪ್ಪಿಕೊಂಡಿದ್ದೆ. ಅದುವರೆಗೆ 84 ಚಿತ್ರಕತೆಗಳನ್ನು ಒಪ್ಪದೇ ಇದನ್ನು ಒಪ್ಪಿಕೊಂಡಿರುವುದಕ್ಕೆ ಸಾರ್ಥಕವಾಯಿತು. ಗುಲ್ಬರ್ಗ, ಮುಧೋಳದಂಥ ಪ್ರದೇಶಗಳಲ್ಲಿ ಕೂಡ ಸಿನಿಮಾ ತುಂಬಿದ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎನ್ನುವ ವರದಿ ಸಿಕ್ಕಿರುವುದು ತೃಪ್ತಿ ತಂದಿದೆ” ಎಂದರು.

ಇಪ್ಪತ್ತು ಕೋಟಿಗಳ ಸಿನಿಮಾ‌ ಇದು!

ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಡಾಕ್ಟರ್ ರಂಜನ್ ಸಿನಿಮಾದಲ್ಲಿ ‌ಒಂದು ಪಾತ್ರವನ್ನು ಕೂಡ ಮಾಡಿದ್ದಾರೆ. ಈ ಎರಡು ಅನುಭವಗಳ ಬಗ್ಗೆ ಮಾತನಾಡಿದ ಅವರು, ಕಲಾವಿದನಾಗಿ ಮೊದಲ ಚಿತ್ರದಲ್ಲೇ ಪ್ರೇಮ್, ಮಾಸ್ಟರ್ ಆನಂದ್ ಮೊದಲಾದ ಕಲಾವಿದರೊಡನೆ ನಟಿಸುವ ಅವಕಾಶ ದೊರಕಿದ್ದು ಕನಸು ನನಸಾದ ಹಾಗಿದೆ. ಅದೇ ವೇಳೆ ಇಂಥದೊಂದು ಸಿನಿಮಾ ನಿರ್ಮಾಣವನ್ನು ಎಷ್ಟು ಶ್ರಮವಹಿಸಿ ಮಾಡಿದ್ದೇವೆ ಎನ್ನುವುದು ನಮಗಷ್ಟೇ ತಿಳಿದಿದೆ ಎಂದರು. ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮಾಧವ್ ಕಿರಣ್ “ಸಿನಿಮಾ ಪ್ರಚಾರದ ತನಕ ಲೆಕ್ಕ ಹಾಕಿದರೆ ಬಜೆಟ್ 20 ಕೋಟಿ ತನಕ ಆಗಿದೆ. ಆದರೆ ಚಿತ್ರದ ಬಗ್ಗೆ ಒಂದೆರಡು ನೆಗೆಟಿವ್ ಮಾತುಗಳು ನಮಗೆ ಈ ಹಣವನ್ನು ವಾಪಾಸು ಪಡೆಯಲು ತಡೆಯಾದರೂ ಅಚ್ಚರಿ ಇಲ್ಲ. ಪ್ರಮುಖವಾಗಿ ಚಿತ್ರ ಹೆಚ್ಚು ಕಾಲಾವಧಿ ಹೊಂದಿದೆ ಎನ್ನುವ ಆಪಾದನೆ ಇದೆ. ಆದರೆ ಸಿನಿಮಾ ನೋಡಿದವರು ಹೀಗೆ ಹೇಳುತ್ತಿಲ್ಲ. ನೋಡದೆಯೇ ಇಂಥ ಮಾತು ಹರಡುತ್ತಿರುವುದು ದುರದೃಷ್ಟಕರ. ಸಾಧ್ಯವಾದರೆ ನೀವೇ ಸಿನಿಮಾ ನೋಡಿ ಬಳಿಕ ಹೇಳಿ. ನೋಡಿದವರೆಲ್ಲ ಚಿತ್ರದಲ್ಲಿ ಮುಳುಗಿ ಹೋಗಿದ್ದಾಗಿ ಹೇಳುತ್ತಾರೆ. ಅದೇ ಕಾರಣದಿಂದಲೇ ನಾವು ಟ್ರಿಮ್ ಮಾಡುವ ಬಗ್ಗೆ ಯೋಚಿಸಿಲ್ಲ. ಚಿತ್ರ ನೋಡದ ಪ್ರೇಕ್ಷಕರು ನೋಡಿ ಮಾತನಾಡಿದರೆ ಚೆನ್ನಾಗಿರುತ್ತದೆ” ಎಂದರು.

ಕಾಲಾವಧಿಯಿಂದ ಕಲಿಯುವುದಿದೆ

ಸಾಮಾನ್ಯವಾಗಿ ಎಲ್ಲ ಸಿನಿಮಾಗಳು ಎರಡೂವರೆ ಗಂಟೆ ಇರುತ್ತವೆ. ನಮ್ಮದು ಅದಕ್ಕಿಂತ 15 ನಿಮಿಷವಷ್ಟೇ ಹೆಚ್ಚಿದೆ. ನಾವು ಆಯ್ದುಕೊಂಡಿರುವ ವಸ್ತುವನ್ನು ಆಸ್ವಾದನೆಗೆ ಅಷ್ಟು ಸಮಯ ಬೇಕು ಎಂದು‌ ನಿರ್ದೇಶಕನಾಗಿ ನನಗೆ ಗೊತ್ತು ಎಂದ ರಾಘವೇಂದ್ರ ಅವರು “ಎಂಬತ್ತು ವರ್ಷದ ಅಜ್ಜಿ ರಸ್ತೆ ನಿಧಾನವಾಗಿಯೇ ದಾಟಬೇಕು. ಆಕೆ ಓಡುವುದನ್ನು ನಿರೀಕ್ಷಿಸಿದರೆ ಹೇಗೆ?” ‌ಎಂದು ಹೋಲಿಕೆ‌ ಕೊಟ್ಟು ಮಾತನಾಡಿದ ನಿರ್ದೇಶಕರು “ಜನ ಬಿಡುವು ಮಾಡಿಕೊಂಡು ಮನರಂಜನೆಗೆಂದೇ ಚಿತ್ರಮಂದಿರಕ್ಕೆ ಬರುತ್ತಾರೆ. ಮತ್ತೆ ಅಲ್ಲಿಯೂ ಅವಸರ ಪಟ್ಟರೆ ಅರ್ಥವೇನು? ಇಷ್ಟಕ್ಕೂ ನಮ್ಮ ಸಿನಿಮಾ ನಿಮಗೆ ತಾಳ್ಮೆಯನ್ನು ಕಲಿಸುತ್ತದೆ” ಎಂದು ನಕ್ಕರು.

ಒಟ್ಟಿನಲ್ಲಿ ಪ್ರೇಮ್ ಚಿತ್ರ ಬದುಕಿನ‌ ಮೈಲುಗಲ್ಲಾಗಿ ಗುರುತಿಸಲ್ಪಡುತ್ತಿರುವ ಪ್ರೇಮಂ ಪೂಜ್ಯಂ ಸಿನಿಮಾ ವಿಜಯದ ಲಕ್ಷಣ ತೋರಿಸಿರುವುದು ಚಿತ್ರ ತಂಡ ಮತ್ತು ಕನ್ನಡ ಸಿನಿರಸಿಕರ ಖುಷಿಗೆ ಕಾರಣವಾಗಿದೆ.

Recommended For You

Leave a Reply

error: Content is protected !!