ಪುನೀತ್ ಗೆ ‘ಕರ್ನಾಟಕ ರತ್ನ’ ಘೋಷಣೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ‌ ನೇತೃತ್ವದಲ್ಲಿ ದಕ್ಷಿಣ ಭಾರತ ಚಿತ್ರರಂಗವು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಅಂತಾರಾಜ್ಯದ ಗಣ್ಯರನೇಕರು ಪಾಲ್ಗೊಂಡರು.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡಿ ಕಳೆದ 20 ದಿನಗಳಲ್ಲಿ ರಾಜ್ ಕುಟುಂಂಬದ ಮಂದಿ ನಡೆದುಕೊಂಡ ರೀತಿ ಆದರ್ಶಪ್ರಾಯವಾಗಿದೆ ಎಂದರು. ಎಲ್ಲಿಯೂ ಸಂಯಮ ಕಳೆದುಕೊಳ್ಳದೆ ನಡೆದುಕೊಂಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಪುನೀತ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಿ ಗೌರವಿಸಲಾಗುವುದು ಎಂದು ಪ್ರಕಟಿಸಿದರು.

ಪುನೀತ್ ನಿರ್ವಹಣೆಯಲ್ಲಿತ್ತು ಎಂದು ಹೇಳಲಾದ ‘ಶಕ್ತಿಧಾಮ’ದ ಎಲ್ಲ ಮಕ್ಕಳ ವಿದ್ಯಾಭ್ಯಾಸದ ಖರ್ಚು ನೋಡುವುದಾಗಿ ಮಾತು ನೀಡಿದ್ದ ವಿಶಾಲ್, ಇಲ್ಲಿಯೂ ಆ ಮಾತನ್ನು ಪುನರುಚ್ಚರಿಸಿದರು. ಇದನ್ನು ನಾನು ಪ್ರಚಾರಕ್ಕಾಗಿ ಹೇಳುತ್ತಿಲ್ಲ. ಪುನೀತ್ ಅಣ್ಣನ ಮೇಲಿನ ಅಭಿಮಾನದಿಂದ ಹೇಳುತ್ತಿದ್ದೇನೆ. ಪುನೀತ್ ನಿಧನರಾಗಿದ್ದು ನನ್ನ ಜನ್ಮದಿನದಂದು ‌ಎಂದು ವಿಶಾಲ್ ಕಣ್ಣೀರಾದರು. ಹಿರಿಯ ನಟ ಶರತ್ ಕುಮಾರ್ ಅವರು ಮಾತನಾಡಿ “ಚಿತ್ರದಲ್ಲಿ ಅವರು ನನ್ನ ಮಗನಾಗಿ ನಟಿಸಿದ್ದರು. ಅಷ್ಟೇ ಪ್ರೀತಿಯಿಂದ ಅವರಾಗಿ ಊಟ, ತಿಂಡಿ ತಂದುಕೊಡುತ್ತಿದ್ದರು. ಅಂಥ ಹುಡುಗನಿಗಿಂತ 67 ವರ್ಷದ ನಾನಾದರೂ ಸತ್ತಿದ್ದರೆ ಚೆನ್ನಾಗಿತ್ತು ಎಂದು ಶರತ್ ಕುಮಾರ್ ಹೇಳಿದಾಗ ಸಭೆ ಸ್ಥಂಭೀಭೂತವಾಗಿತ್ತು.

ರಾಜ್ಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ಮಾತನಾಡಿ “ನಟನೋರ್ವ ಸಾವಿಗೆ ಕಲಾವಿದರು, ಅಭಿಮಾನಿಗಳು ಕಣ್ಣೀರಿಡುವುದು ಸ್ವಾಭಾವಿಕ. ಆದರೆ ಪುನೀತ್ ನಿಧನದ ಬಳಿಕ ಎಲ್ಲ ಕನ್ನಡಿಗರು ನೋವು‌ಪಟ್ಟಿದ್ದನ್ನು ಕಂಡಿದ್ದೇವೆ. ರಾಜ್ ಕುಮಾರ್ ಅವರ ಗುಣಗಳು ಅವರ ಎಲ್ಲ ಮಕ್ಕಳಲ್ಲೂ ಇವೆ. ಆದರೆ ಪುನೀತ್ ಅವರ ಪ್ರತ್ಯೇಕತೆ ಏನೆಂದರೆ ಅವರು ಸದಾ ಹಸನ್ಮುಖಿಯಾಗಿದ್ದರು. ಬಹುಶಃ ಅದು ನೀಡಿದ ಆತ್ಮೀಯತೆಯೇ ಜನರನ್ನು ಇಂದು ಕಣ್ಣೀರಿಗೆ ನೂಕಿರಬಹುದು ಎಂದರು.

ತಮಿಳು ನಟರಾದ ಶರತ್ ಕುಮಾರ್, ವಿಶಾಲ್, ಡ್ರಮ್ಮರ್ ಶಿವಮಣಿ ಸೇರಿದಂತೆ ಆಂಧ್ರದ ನಟ‌ ಮೋಹನ್ ಬಾಬು ಪುತ್ರ ಮಂಚು ಮಹೇಶ್ ಮೊದಲಾದ ಎಲ್ಲರೂ ಸಂತ್ರಸ್ತ ರಾಜ್ ಕುಟುಂಬಕ್ಕೆ ಒಕ್ಕೊರಲಿನಿಂದ ಹೇಳಿದ ಒಂದು ಮಾತು ಯಾರೂ ಮರೆಯಲಾಗದ್ದು. ” ರಾಜ್ ಕುಟುಂಬಕ್ಕೆ ಏನೇ ನೆರವು ಬೇಕಾದರೂ ನಾವು ಸ್ವಯಂಸೇವಕರಂತೆ ಬಂದು ಕೆಲಸ ಮಾಡುತ್ತೇವೆ” ಎಂದು ಹೇಳಿದಾಗ ಕನ್ನಡದ ಪ್ರತಿಯೊಬ್ಬ ಚಿತ್ರ ಪ್ರೇಮಿಗಳಿಗೂ ಕೂಡ ಈ ಕುಟುಂಬ ರಾಜ್ಯಕ್ಕೆ ತಂದುಕೊಟ್ಟ ಹೆಮ್ಮೆ ಏನೆಂದು ಮನದಟ್ಟಾಗುವ ಸಂದರ್ಭ ಸೃಷ್ಟಿಯಾಯಿತು.

ಆರಂಭದಲ್ಲೇ ಸುದೀಪ್ ಹಿನ್ನೆಲೆ ಧ್ವನಿಯಲ್ಲಿ ಮೂಡಿ ಬಂದ ನುಡಿನಮನ ಡಾಕ್ಯುಮೆಂಟರಿ ನೆರೆದವರನ್ನು ಭಾವಪರವಶಗೊಳಿಸಿತು. ಕಾರ್ಯಕ್ರಮ ಶುರುವಾಗುವ ಮೊದಲು ಪುನೀತ್ ಅವರ ಉಬ್ಬುಶಿಲ್ಪಕ್ಕೆ ಕುಟುಂಬದವರು ಮತ್ತು ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಮುಂದೆ ಈ ಉಬ್ಬುಶಿಲ್ಪವನ್ನು ಪುನೀತ್ ಮನೆಗೆ ನೀಡಲಾಗುವುದು ಎಂದು ವಾಣಿಜ್ಯಮಂಡಳಿ ತಿಳಿಸಿದೆ.

Recommended For You

Leave a Reply

error: Content is protected !!