ಪುನೀತ್ ರಾಜ್ ಕುಮಾರ್ ತೀರ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ ಮೇಲೆ ಕನ್ನಡ ಸಿನಿಮಾಭಿಮಾನಿಗಳೆಲ್ಲ ಒಂದೇ ಮಾತು ಹೇಳುತ್ತಿದ್ದಾರೆ. ಅಭಿಮಾನಿಗಳು ಕಚ್ಚಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಸ್ಟಾರ್ ಹೆಸರಲ್ಲಿ ಇಲ್ಲಿ ಜಗಳ ನಡೆಯುತ್ತಿದ್ದರೆ ಅಲ್ಲಿ ನಮ್ಮ ಸ್ಟಾರ್ ಜಗತ್ತನ್ನೇ ತೊರೆಯುವಂಥ ಘಟನೆ ನಡೆದಿದೆ. ಹಾಗಾಗಿ ಅಭಿಮಾನಿಗಳು ಒಂದಾಗಿರಬೇಕು ಎನ್ನುತ್ತಿದ್ದಾರೆ. ಎಲ್ಲರಿಗೂ ಇಂಥದೊಂದು ಆಶಯ ಹುಟ್ಟಲು ಒಂದು ದುರಂತ ನಡೆಯಬೇಕಾಯಿತು. ಆದರೆ ʻನಮ್ ಟಾಕೀಸ್ʼ ಭರತ್ ಮಾತ್ರ ಮೊದಲಿನಿಂದಲೂ ಎಲ್ಲ ಫ್ಯಾನ್ಸ್ ಜೊತೆಗೆ ಆತ್ಮೀಯತೆ ಇರಿಸಿಕೊಂಡವರು. ಅವರ ಕನಸಿನ ಫ್ಯಾನ್ಸ್ ಕ್ರಿಕೆಟ್ ಲೀಗ್ ಈ ಬಾರಿ ಏಳನೇ ವರ್ಷದ ಸ್ಪರ್ಧೆಗೆ ಸಜ್ಜಾಗಿದ್ದು ಸ್ಪರ್ಧಾತಂಡಗಳ ಜೆರ್ಸಿ ಬಿಡುಗಡೆ ಇತ್ತೀಚೆಗೆ ನೆರವೇರಿತು.
ಕಳೆ ಏಳು ವರ್ಷಗಳಿಂದ ಕನ್ನಡ ಚಿತ್ರರಂಗದ ಬೇರೆ ಬೇರೆ ದಿಗ್ಗಜರ ಹೆಸರಲ್ಲಿ ಕ್ರಿಕೆಟ್ ನಡೆಸಿರುವ ಖ್ಯಾತಿ ʻಫ್ಯಾನ್ಸ್ ಕ್ರಿಕೆಟ್ ಲೀಗ್ʼಗೆ ಇದೆ. ಮೊದಲ ವರ್ಷ ಡಾ.ರಾಜ್ ಕುಮಾರ್ ಅವರ ಹೆಸರಲ್ಲಿ ಆರಂಭವಾದ ಈ ಸ್ಪರ್ಧೆ ಬಳಿಕ ಶಂಕರ್ ನಾಗ್, ವಿಷ್ಣುವರ್ಧನ್ ಹೆಸರಲ್ಲಿಯೂ ನಡೆದಿತ್ತು. ಇದರ ನಡುವೆ ಎರಡು ಸೀಸನ್ ಗಳು ಹೆಸರೇ ಇಲ್ಲದೆ ನಡೆದವು. ಆದರೆ ಕಳೆದ ಬಾರಿ ಮತ್ತೆ ಖ್ಯಾತನಾಮರ ಹೆಸರಲ್ಲಿ ಸ್ಪರ್ಧೆ ನಡೆಸುವ ಸಂಪ್ರದಾಯಕ್ಕೆ ಮರಳಿ ಜಗ್ಗೇಶ್ ಅವರ ಹೆಸರಲ್ಲಿ ಸ್ಪರ್ಧೆ ನಡೆದಿತ್ತು. ಈ ಬಾರಿ ಕನ್ನಡದ ಖ್ಯಾತ ಸಿನಿಮಾ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರ ಹೆಸರಲ್ಲಿ ಸ್ಪರ್ಧೆ ನಡೆಯುತ್ತಿರುವುದು ವಿಶೇಷ. ಜೆರ್ಸಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ನಾಗೇಂದ್ರ ಪ್ರಸಾದ್ ಅವರು ʻಎಫ್ ಸಿ ಎಲ್ʼನ ಎಲ್ಲ ತಂಡಗಳಿಗೂ ಶುಭ ಕೋರಿದರು.
ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಅವರು ಮಾತನಾಡಿ ಎಲ್ಲರ ಅಭಿಮಾನಿಗಳನ್ನು ಒಂದಾಗಿಸುವ ಇವರ ಪ್ರಯತ್ನ ಮೆಚ್ಚುವಂಥದ್ದು. ಇದಕ್ಕೆ ನಾನು ಥೀಮ್ ಸಾಂಗ್ ಮಾಡುವುದಾಗಿ ಮಾತು ಕೊಟ್ಟಿದ್ದೇನೆ. ಸದ್ಯದಲ್ಲೇ ಅದು ಕೂಡ ಲಾಂಚ್ ಆಗಲಿದೆ ಎಂದರು. ಆಲ್ ಇಂಡಿಯಾ ಬಾದ್‌ಶಾ ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಜಗದೀಶ್ ಮಾತನಾಡಿ ಇಂಥ ಇವೆಂಟ್ ಹಿಂದೆ ತುಂಬ ಪರಿಶ್ರಮ ಇದೆ. ಎಲ್ಲರಲ್ಲಿ ಒಗ್ಗಟ್ಟು ಮೂಡಿಸುವ ಸಂದೇಶವೂ ಉತ್ತಮವಾಗಿರುವಂಥದ್ದು ಎಂದರು. ಆರಂಭ ಕಾಲದಲ್ಲಿ ಇಂಥದೊಂದು ಸ್ಪರ್ಧೆ ನಡೆಸಲು ಭರತ್ ಅವರಿಗೆ ಸ್ಫೂರ್ತಿಯಾಗಿದ್ದ ನಟ, ನಿರೂಪಕ ಪವನ್ ಕುಮಾರ್ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಫ್ ಸಿ ಎಲ್‌ನ ಈ ಬಾರಿ ಸ್ಪರ್ಧೆಯಲ್ಲಿ ಎಂಟು ಮಂದಿ ತಾರೆಯರ ಅಭಿಮಾನಿ ತಂಡಗಳು ಪಾಲ್ಗೊಳ್ಳುತ್ತಿದ್ದು ಭರತ್ ನೇತೃತ್ವದ ʻಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಫ್ಯಾನ್ಸ್ʼ ಸೇರಿದಂತೆ ಶಿವರಾಜ್ ಕುಮಾರ್, ದರ್ಶನ್, ಕಿಚ್ಚ ಸುದೀಪ್, ಗಣೇಶ್, ವಸಿಷ್ಠ ಸಿಂಹ, ಪ್ರಜ್ವಲ್ ದೇವರಾಜ್ ಮತ್ತು ಡಾಲಿ ಧನಂಜಯ್ ಅವರ ಅಭಿಮಾನಿ ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಡಿಸೆಂಬರ್ ಐದರಂದು ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಐದರ ತನಕ ನಡೆಯಲಿರುವ ಈ ಸ್ಪರ್ಧೆಯಲ್ಲಿ ಪ್ರತಿ ತಂಡಕ್ಕೂ ಎರಡೆರಡು ಮ್ಯಾಚ್ ಆಡಲು ದೊರಕಲಿದೆ. ರನ್ ರೇಟ್ ಮೂಲಕ ಅಂತಿಮ ಸುತ್ತಿಗೆ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿರುವ ಭರತ್, ಫ್ಯಾನ್ಸ್ ಜೊತೆಗೆ ನಾಲ್ಕು ಮಂದಿ ಸ್ಥಳೀಯ ಪ್ರತಿಭೆಗಳು ಕೂಡ ಸೇರಿಕೊಳ್ಳುವ ಅವಕಾಶವನ್ನು ಈ ಬಾರಿ ನೀಡಲಾಗಿರುವುದಾಗಿ ಹೇಳಿದ್ದಾರೆ. ಅಂದಹಾಗೆ ಈ ಬಾರಿಯ ಸ್ಪರ್ಧಿಸಲಿರುವ ಎಂಟು ತಂಡಗಳ ಸದಸ್ಯರ ಆಯ್ಕೆ ಈಗಾಗಲೇ ನಡೆಸಲಾಗಿದೆ.
ಶಿವಣ್ಣ ಸೇರಿದಂತೆ ತಾರೆಯರು ಬೆಂಬಲ ಸೂಚಿಸಿ ವಿಡಿಯೋ ಬೈಟ್ ನೀಡಿ ಪ್ರೋತ್ಸಾಹಿಸಿರುವುದಾಗಿ ಭರತ್ ಅವರು ಖುಷಿಯಾಗಿದ್ದಾರೆ. ಕಾರ್ಯಕ್ರಮ ಶುರುವಾಗುವ ಮೊದಲು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪುಷ್ಪನಮನ ಸಲ್ಲಿಸಿ ಆತ್ಮಕ್ಕೆ ಶಾಂತಿಕೋರಲಾಯಿತು.