ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕ ಪ್ರೀತಮ್ ಶೆಟ್ಟಿ ವಿವಾಹ ಮುಹೂರ್ತವು ನಟಿ ಸಿಂಚನಾ ಪೊನ್ನವ್ವ ಜೊತೆಗೆ ಇಂದು ಬೆಳಿಗ್ಗೆ ನೆರವೇರಿತು. ಕುಶಾಲನಗರದ ಕೂರ್ಗ್ ಗ್ರೀನ್ ಫಾರ್ಮ್ ರೆಸಾರ್ಟ್ ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಚಿತ್ರರಂಗ ಮತ್ತು ಕಿರುತೆರೆಯ ಕಲಾವಿದರು ಪಾಲ್ಗೊಂಡಿದ್ದರು.
ಪ್ರೀತಮ್ ಶೆಟ್ಟಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಗಿಣಿರಾಮ’ದ ನಿರ್ದೇಶಕ. ಕಳೆದ ಬಾರಿ ‘ಅನುಬಂಧ’ ಅವಾರ್ಡ್ ಕಾರ್ಯಕ್ರಮದಲ್ಲಿ ಶ್ರೇಷ್ಠ ನಿರ್ದೇಶಕರಾಗಿ ಪ್ರಶಸ್ತಿ ಪಡೆದ ಪ್ರೀತಮ್ ಅವರು ತಮ್ಮ ನಿರ್ದೇಶನದ ತುಳು ಚಿತ್ರ ‘ಪಿಂಗಾರ’ಕ್ಕಾಗಿ ಶ್ರೇಷ್ಠ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡವರು. ಪ್ರಸ್ತುತ ‘ಪಿಂಗಾರ’ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ ನಟಿ ಸಿಂಚನಾ ಅವರನ್ನೇ ಕೈ ಹಿಡಿಯುತ್ತಿರುವ ಮೂಲಕ ಪ್ರೇಮಸಾಫಲ್ಯ ಮಾಡಿಕೊಂಡಿದ್ದಾರೆ.
ಸಿಂಚನಾ ಅವರು ನಟಿ ಮಾತ್ರವಲ್ಲ ಮಾಧ್ಯಮಲೋಕದಲ್ಲಿ ಸಿಂಚನಾ ಚಂದ್ರಮೋಹನ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡವರು. ಲೋಕದಿಂದ ಬಂದ ಬಹುಮುಖ ಪ್ರತಿಭೆ. ಮೂಲತಃ ಕೊಡಗಿನವರಾದ ಸಿಂಚನಾ ಸ್ಥಳೀಯ ಖಾಸಗಿ ವಾಹಿನಿಯಲ್ಲಿ ವಾರ್ತೆ ಓದುವ ಮೂಲಕ ವೃತ್ತಿಬದುಕು ಶುರು ಮಾಡಿದವರು. ಬಳಿಕ ದಿನಪತ್ರಿಕೆಗೆ ವರದಿಗಾರ್ತಿಯಾಗಿಯೂ ಕೆಲಸ ಮಾಡಿದರು. ಆದರೆ ಧಾರಾವಾಹಿಯಲ್ಲಿ ಪೋಷಕ ನಟಿಯಾಗಿದ್ದ ಸಿಂಚನಾ ಪಿಂಗಾರ ಸಿನಿಮಾದೊಳಗೆ ತಮ್ಮದೇ ಚಿತ್ರವೆನ್ನುವ ಹಾಗೆ ತೊಡಗಿಸಿಕೊಂಡವರು. ಚಿತ್ರದಲ್ಲಿ ದ್ವಿತೀಯ ನಾಯಕಿ ಎನ್ನುವಂತೆ ಕಾಣಿಸಿಕೊಂಡಿರುವುದಷ್ಟೇ ಅಲ್ಲದೆ, ಕಾಸ್ಟ್ಯೂಮ್ ಡಿಸೈನರಾಗಿ, ಸಹಾಯಕ ನಿರ್ದೇಶಕಿಯಾಗಿಯೂ ದುಡಿದವರು.
ನೂತನ ದಂಪತಿಗೆ ಶುಭ ಕೋರಲು ‘ಗಿಣಿರಾಮ’ ಧಾರಾವಾಹಿ ತಂಡದಿಂದ ನಾಯಕ ನಟ ರಿತ್ವಿಕ್ ಸೇರಿದಂತೆ ಸಾಕಷ್ಟು ಕಲಾವಿದರು ಆಗಮಿಸಿದ್ದರು. ಈ ಬಗ್ಗೆ ಸಿನಿಕನ್ನಡದ ಜೊತೆಗೆ ಮಾತನಾಡಿದ ನಟ ರಿತ್ವಿಕ್ “ಪ್ರೀತಮ್ ಶೆಟ್ಟಿ ಒಬ್ಬರು ನಿರ್ದೇಶಕ ಎನ್ನುವುದನ್ನು ಮೀರಿ ಆತ್ಮೀಯ ಸ್ನೇಹಿತ ಕೂಡ ಹೌದು” ಎಂದರು. ಹಾಗಾಗಿಯೇ ಮೂರು ದಿನಗಳಿಂದ ಮದುವೆಯ ಸಂಭ್ರಮದಲ್ಲಿ ಪತ್ನಿಯೊಂದಿಗೆ ಭಾಗಿಯಾಗಿದ್ದೇನೆ ಎಂದರು. ಪಿಂಗಾರ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಿರ್ಮಾಪಕ ಅವಿನಾಶ್ ಶೆಟ್ಟಿ ಸೇರಿದಂತೆ ನಿರ್ಮಾಪಕರು ಹಾಗೂ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಭಾ ಮ ಹರೀಶ್, ಗಿರೀಶ್, ನವ ನಿರ್ಮಾಪಕ ಉಲ್ಲಾಸ್ ಮೊದಲಾದವರು ಪಾಲ್ಗೊಂಡರು ಸಿನಿಕನ್ನಡದ ಶುಭಾಶಯಗಳು.