ಸ್ನೇಹಿತನಿಗಾಗಿ ನೂರು ಟಿಕೆಟ್ ಕೊಂಡ ಪತ್ರಕರ್ತ!

ಗೆಳೆತನಕ್ಕೆ ನಮ್ಮ ನಿತ್ಯ ನೂರಾರು ಉದಾಹರಣೆಗಳು ಸಿಗುತ್ತವೆ. ಹಾಗಾಗಿಯೇ ಅವುಗಳನ್ನು ಪಟ್ಟಿ ಮಾಡುವುದಿಲ್ಲ. ಅದರಲ್ಲೂ ಎರಡು ರೀತಿ ಇರುತ್ತವೆ. ಒಂದು ಕಷ್ಟದಲ್ಲಿ ಕೈ ಹಿಡಿಯುವುದು ಮತ್ತೊಂದು ಮುಂದೆ ಬರಲು ಜೊತೆ ನೀಡುವುದು. ಎರಡನೆಯ ಸ್ನೇಹಕ್ಕೆ ಮಾದರಿಯಾದ ಘಟನೆ ಬೆಂಗಳೂರಿನ ಸಿನಿ ಮಾಧ್ಯಮದ ಸ್ನೇಹಿತರ ನಡುವೆ ಸಂಭವಿಸಿದೆ. ಆ ಕುರಿತಾದ ಪುಟ್ಟ ವಿವರ ಇದು.

ಸಿನಿಮಾರಂಗದ ಕನಸು ಎಲ್ಲರಲ್ಲಿಯೂ ಇರುತ್ತದೆ. ಪ್ರತಿಯೊಬ್ಬರೂ ಬಾಲ್ಯದಲ್ಲಿ ತಾನೋರ್ವ ಸ್ಟಾರ್ ನಟರಾಗಬೇಕು ಎಂದುಕೊಂಡಿರುತ್ತಾರೆ. ಅದನ್ನು ಆಗಿನ ಆಕರ್ಷಣೆಯಾಗಿ ಮಾತ್ರ ಕಂಡವರು ಮುಂದೆ ಬೇರೆಯೇ ಗುರಿ ಇರಿಸಿಕೊಳ್ಳುತ್ತಾರೆ. ಆದರೆ ಸಿನಿಮಾವೇ ಜೀವ ಎಂದುಕೊಂಡವರು ಹಠ ಬಿಡದೆ ಪೋಷಕನಟನಾಗಿಯಾದರೂ ಕಾಣಿಸಿಕೊಳ್ಳುತ್ತಾರೆ. ಅದೇ ರೀತಿ ಮಾಧ್ಯಮ ಕ್ಷೇತ್ರದಲ್ಲಿ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುವವರಿಗೂ ಸಿನಿಮಾದ ಕುರಿತಾದ ಕನಸುಗಳಿರುತ್ತವೆ. ಆದರೆ ಅವರಲ್ಲಿ ಹೆಚ್ಚಿನವರು ತಂತ್ರಜ್ಞರಾಗಿರಲು ಬಯಸುತ್ತಾರೆ.‌ ಉದಾಹರಣೆಗೆ ಪತ್ರಕರ್ತರಾಗಿದ್ದು ಸಿನಿಮಾ ನಿರ್ದೇಶಕರಾಗಿ ಪಿ ಲಂಕೇಶ್, ಕವಿತಾ ಲಂಕೇಶ್, ಸದಾಶಿವ ಶೆಣೈ, ಕಾರ್ಟೂನಿಸ್ಟ್ ಆಗಿದ್ದು ಸಂಗೀತ ನಿರ್ದೇಶಕರಾದ ವಿ ಮನೋಹರ್, ಛಾಯಾಗ್ರಾಹಕರಾಗಿದ್ದು ನಿರ್ದೇಶಕರಾದ ಪ್ರವೀಣ್ ನಾಯಕ್ ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಇವತ್ತು ಅಂಥದೇ ಪಟ್ಟಿಗೆ ಸೇರಿ ನಟನಾದವರು ಕಿರಣ್. ಪ್ರಸ್ತುತ ರಾಜ್ ಟಿವಿಯಲ್ಲಿ ವೃತ್ತಿಯಲ್ಲಿರುವ ಅವರು ನಾಯಕರಾಗಿ ನಟಿಸಿರುವ ‘ಗೋರಿ’ ಇಂದು ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೂಡ ಕೇಳಿ ಬರುತ್ತಿದೆ.

ಮೂಲತಃ ಉತ್ತರ ಕರ್ನಾಟಕದ ಪ್ರತಿಭೆಯಾಗಿರುವ ಕಿರಣ್ ಅವರು ಈ ಹಿಂದೆಯೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಲಕ್ಷ್ಮಣ’, ‘ಸ್ವಾರ್ಥರತ್ನ’, ‘ಕಾದಲ್’ ಮೊದಲಾದ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಕಿರಣ್ ನಾಯಕರಾಗಿರುವುದು ಇದೇ ಪ್ರಥಮ. ಈ ಚಿತ್ರಕ್ಕೆ ಟಿ.ವಿ 9 ವಾಹಿನಿಯ ಜನಪ್ರಿಯ ಸಿನಿಮಾ ವರದಿಗಾರ ಮಾಲತೇಶ್ ಜಗ್ಗಿನ್ ಅವರು ಒಂದು ಹಾಡು ಬರೆದಿರುವುದು ಮತ್ತೊಂದು ವಿಶೇಷ.

ಎಲ್ಲರಿಗೂ ತಿಳಿದಿರುವಂತೆ ವರದಿಗಾರರು ವಾಹಿನಿಯ ಎಲ್ಲವೂ ಆಗಿರುವುದಿಲ್ಲ. ಅವರಿಗೆ ಸುದ್ದಿಗಳನ್ನು ಆಯ್ದುಕೊಳ್ಳುವಲ್ಲಿ ಮತ್ತು ಅವರು ಮಾಡಿದ ಸುದ್ದಿ ಪ್ರಸಾರವಾಗುವಲ್ಲಿ ವಿಭಾಗ ಮುಖ್ಯಸ್ಥರು ಮತ್ತು ವಾಹಿನಿ ಮುಖ್ಯಸ್ಥರ ಅನುಮತಿ ಕಡ್ಡಾಯವಾಗಿರುತ್ತದೆ‌. ಹಾಗಾಗಿ ಸಿನಿಮಾ ವಿಭಾಗದ ಪತ್ರಕರ್ತನ ಸಿನಿಮಾವೇ ಆದರೂ ವರದಿಗಾರರು ನೀಡಬಹುದಾದ ಪ್ರೋತ್ಸಾಹಕ್ಕೆ ಒಂದು ಮಿತಿ ಇರುತ್ತದೆ. ಆದರೆ ಆ ಮಿತಿಯನ್ನು ಮೀರಿಸುವಂತೆ ಒಂದು ಅದ್ಭುತವಾದ ಸಹಾಯವನ್ನು ಮಾಡಿದ ಕೀರ್ತಿ ನ್ಯೂಸ್ 18ನ ಸಿನಿಮಾ ವಿಭಾಗದಲ್ಲಿ ವೃತ್ತಿಯಲ್ಲಿರುವ ಹರ್ಷವರ್ಧನ್ ಅವರಿಗೆ ಸಲ್ಲುತ್ತದೆ.

ಸಾಮಾನ್ಯವಾಗಿ ರಾಜ್ಯರಾಜಧಾನಿಯಲ್ಲಿ ಒಬ್ಬ ಸ್ಟಾರ್ ಸಿನಿಮಾ ಬಿಡುಗಡೆಯಾಗುವಾಗ ಒಂದು ಸಿಂಗಲ್ ಥಿಯೇಟರ್ ‘ಮೆಯ್ನ್’ ಥಿಯೇಟರ್ ಎಂದು ಘೋಷಿತವಾಗುತ್ತದೆ. ಸಾಕಷ್ಟು ಬಾರಿ ಮೊದಲ ಶೋ ಟಿಕೆಟ್ ಬಿಟ್ಟಿಯಾಗಿ ಹಂಚುವ ಉದಾಹರಣೆಗಳೂ ಇರುತ್ತವೆ. ಆದರೆ ಕಿರಣ್ ಅವರಂಥ ಹೊಸ ಹೀರೋಗೆ ಇಂಥ ಅವಕಾಶಗಳೇ ಇರುವುದಿಲ್ಲ. ಆದರೆ ಈ ಸಂದರ್ಭದಲ್ಲಿ ದಿಢೀರನೆ ರಂಗ ಪ್ರವೇಶಿಸಿರುವ ಹರ್ಷವರ್ಧನ್ 100 ಟಿಕೆಟ್ ಗಳನ್ನು ಕೊಳ್ಳುವ ಮೂಲಕ ಮೊದಲ ದಿನದ ಸಂಭ್ರಮಕ್ಕೆ ಉತ್ಸಾಹ ತುಂಬಿದ್ದಾರೆ.

ಇಂಥದೊಂದು ಪ್ರೋತ್ಸಾಹ ನೀಡುವ ತೀರ್ಮಾನಕ್ಕೆ ಏನು ಕಾರಣ ಎಂದು ಹರ್ಷ ಅವರಲ್ಲಿ ಪ್ರಶ್ನಿಸಿದಾಗ ಅವರು ಹೇಳಿದ್ದು ಇಷ್ಟೇ. “ಕಿರಣ್ ಅವರು ನನಗೆ ವರ್ಷಗಳಿಂದ ಪರಿಚಯ. ಹಾವೇರಿಯಂಥ ಊರಿನಿಂದ ಬಂದು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವುದರ ಜೊತೆಗೆ ಬೆಂಗಳೂರಲ್ಲಿ ಹೆಸರು ಮಾಡಿರುವುದೇ ದೊಡ್ಡ ವಿಚಾರ. ಅದರಲ ಊರಿನಿಂದ ಒಂದು ತಂಡ ಕಟ್ಟಿಕೊಂಡು ಬಂದು ಒಂದು ಸಿನಿಮಾ ಮಾಡಿ ಅದರಲ್ಲಿ ನಾಯಕರಾಗಿ ನಟಿಸಿ, ಬೆಂಗಳೂರಲ್ಲಿಯೂ ಪ್ರದರ್ಶನಗೊಳಿಸಲು ಯಶಸ್ವಿಯಾಗಿದ್ದಾರೆ ಎಂದರೇನೇ ಅವರು ಯಶಸ್ವಿಯಾದ ಹಾಗೆ. ಇನ್ನು ಮೊದಲ ದಿನ ತುಂಬಿದ ಗೃಹದಲ್ಲಿ ತೆರೆ ಕಾಣುವುದು ಪ್ರತಿಯೊಬ್ಬ ನಾಯಕನ ಕನಸು. ಅದಕ್ಕೆ ನನ್ನಿಂದಾಗುವ ಸಹಾಯ ಮಾಡಿದ್ದೇನೆ” ಎನ್ನುತ್ತಾರೆ ಹರ್ಷ. “ಅವರದು ದೊಡ್ಡ ಮನಸ್ಸು” ಎನ್ನುವುದು ಕಿರಣ್ ಪ್ರತಿಕ್ರಿಯೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಯಾಗಿ ನಟನಾಗುವ ಆಸೆ ಹುಟ್ಟಿಸಿಕೊಂಡ ಕಿರಣ್ ನಿಜಕ್ಕೂ ಒಂದಷ್ಟು ಕಡೆ ಗಣೇಶ್ ಅವರನ್ನು ಹೋಲುತ್ತಾರೆ. ಅದರಲ್ಲಿ ಕೂಡ ಇಂದು ಬಿಡುಗಡೆಯಾಗಿರುವ ಗಣೇಶ್ ಸಿನಿಮಾದ ಜೊತೆಯಲ್ಲೇ ಕಿರಣ್ ಅವರ ಗೋರಿ ಕೂಡ ತೆರೆಗೆ ಬಂದಿರುವುದು ವಿಶೇಷ. ಈ ಗೋರಿ ಇನ್ನಷ್ಟು ಹೊಸ ಕನಸುಗಳ ಸಾಕ್ಷಾತ್ಕಾರಕ್ಕೆ ರೂವಾರಿಯಾಗಲಿ ಎನ್ನುವುದು ಸಿನಿಕನ್ನಡದ ಹಾರೈಕೆ.

Recommended For You

Leave a Reply

error: Content is protected !!
%d bloggers like this: