ಚಿತ್ರ: ಗೋವಿಂದ ಗೋವಿಂದ
ನಿರ್ದೇಶಕ: ತಿಲಕ್
ನಿರ್ಮಾಣ: ಶೈಲೇಂದ್ರ ಬಾಬು, ರವಿಗರಣಿ
ತಾರಾಗಣ: ಸುಮಂತ್ ಶೈಲೇಂದ್ರ, ಭಾವನಾ, ರೂಪೇಶ್ ಶೆಟ್ಟಿ, ಕವಿತಾ ಗೌಡ
ಸಾಮಾನ್ಯವಾಗಿ ಅಪಹರಣದ ಕತೆ ಇದ್ದರೆ ಅದು ಕ್ರೈಂ ಥ್ರಿಲ್ಲರ್ ಆಗಿರುತ್ತದೆ. ಆದರೆ ಇಲ್ಲಿ ಕಾಮಿಡಿ, ಸೆಂಟಿಮೆಂಟ್ ಕೂಡ ಸೇರಿಕೊಂಡಿರುವುದೇ ಗೋವಿಂದ ಗೋವಿಂದ ಚಿತ್ರದ ವಿಶೇಷತೆ.
ಮೂವರು ಅಪಹರಣಕಾರರ ಪರಿಚಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಅವರ ಮುಖ್ಯಸ್ಥ ಭವಿಷ್ಯವನ್ನು ನಂಬುವವನು. ಮಾಡುವುದು ಕಳ್ಳ ಕೆಲಸವಾದರೂ ಘಳಿಗೆ, ಕಾಲನೋಡಿ ಮುಂದುವರಿಯುವವನು. ಅಂಥದೊಂದು ಪರಿಚಯಿಸುವಿಕೆಯೇ ದೃಶ್ಯದೊಳಗೆ ಹಾಸ್ಯದಿಂದಲೇ ನಮ್ಮನ್ನು ಸೆಳೆದೊಯ್ಯುವಂತೆ ಮಾಡುತ್ತದೆ. ಆದರೆ ದೃಶ್ಯದ ಕೊನೆಯಲ್ಲಿ ಒಂದು ಅಪಹರಣವೂ ನಡೆಯುವುದರ ಜೊತೆಗೆ ಸಿನಿಮಾ ಗಂಭೀರತೆಯ ಮೊದಲ ಹಂತಕ್ಕೆ ನಮ್ಮನ್ನು ಸಿದ್ಧಪಡಿಸುತ್ತದೆ.
ಎರಡನೆಯ ಹಂತದಲ್ಲಿ ಸೀನು ಎನ್ನುವ ಸಹಾಯಕ ನಿರ್ದೇಶಕನೋರ್ವನನ್ನು ಪರಿಚಯಿಸಲಾಗುತ್ತದೆ. ನಿರ್ದೇಶಕನಾಗಲು ನಡೆಸುವ ಪ್ರಯತ್ನದ ಬಗ್ಗೆ ಕತೆ ಶುರುವಾಗುತ್ತದೆ. ಒಳ್ಳೆಯದೊಂದು ಕತೆ ಮಾಡಿಕೊಂಡು ನಿರ್ಮಾಪಕ ಕೆ ಮಂಜು ಅವರ ಬಳಿಗೆ ಹೋಗಿ ಹೇಳುತ್ತಾನೆ. ಅವರು ನಾಯಕಿಯಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಪದ್ಮಾವತಿ ಎನ್ನುವ ಸ್ಟಾರ್ ನಟಿಗಾಗಿ ಪ್ರಯತ್ನಿಸುವುದಾಗಿ ಹೇಳುತ್ತಾರೆ. ಹಾಗೆ ಕಷ್ಟಪಟ್ಟು ಪದ್ಮಾವತಿಯನ್ನು ಭೇಟಿಯಾಗುವ ನಾಯಕ ಆಕೆಯಲ್ಲಿ ತಾನು ಬರೆದ ಕತೆಯನ್ನು ವಿವರಿಸುತ್ತಾನೆ.
ನಿರ್ದೇಶಕ ಪದ್ಮಾವತಿಗೆ ಹೇಳುವುದು ಮೂವರು ಕಾಲೇಜು ಹುಡುಗರ ಕತೆ. ವಿಶೇಷತೆ ಏನೆಂದರೆ ಮಧ್ಯಂತರದ ಹೊತ್ತಿಗೆ ಅವರ ಮುಂದೆ ಆತ ಕತೆಯಲ್ಲಿ ಹೇಳುವ ಪಾತ್ರಗಳು ಜೀವಂತವಾಗಿ ಪ್ರತ್ಯಕ್ಷವಾಗುತ್ತವೆ. ಅದೇ ರೀತಿ ಚಿತ್ರದ ಆರಂಭದಲ್ಲಿ ತೋರಿಸಿದ ಅಪಹರಣವನ್ನು ಕೂಡ ಅದೇ ಕತೆಯೊಂದಿಗೆ ಸೇರಿಸಲಾಗುತ್ತದೆ. ಅದು ಹೇಗೇ ಸಾಧ್ಯ? ಆ ಸಂದರ್ಭ ಹೇಗಿರುತ್ತದೆ? ಮುಂದೇನಾಗುತ್ತದೆ ಎನ್ನುವುದನ್ನು ಸಿನಿಮಾದಲ್ಲಿ ಆಕರ್ಷಕವಾದ ಚಿತ್ರಕತೆಯೊಂದಿಗೆ ವಿವರಿಸಲಾಗಿದೆ.
ಚಿತ್ರದಲ್ಲಿ ನವ ನಿರ್ದೇಶಕ ಸೀನುವಾಗಿ ರೂಪೇಶ್ ಶೆಟ್ಟಿ ನಟಿಸಿದ್ದಾರೆ. ಆದರೆ ಅವರ ಕತೆಯಲ್ಲಿ ಬರುವ ನಾಯಕ ವೆಂಕಟೇಶನಾಗಿ ಸುಮಂತ್ ಶೈಲೇಂದ್ರ ಇನ್ನೊಂದು ಹಂತದ ಅಭಿನಯ ನೀಡಿದ್ದಾರೆ. ಅವರಿಗೆ ಇಬ್ಬರು ಆಪ್ತ ಸ್ನೇಹಿತರು. ಆ ಪಾತ್ರಗಳನ್ನು ಮಜಾ ಟಾಕೀಸ್ ಪವನ್ ಮತ್ತು ವಿಜಯ್ ಚೆಂಡೂರ್ ನಿರ್ವಹಿಸಿದ್ದಾರೆ. ವೆಂಕಟೇಶನ ಸ್ನೇಹಿತೆ ಅಲಮೇಲು ಪಾತ್ರದಲ್ಲಿ ಕವಿತಾ ಗೌಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಲಮೇಲುವಿನ ತಂದೆ ಪ್ರಾಂಶುಪಾಲ ಶೇಷಾಚಲನಾಗಿ ಅಚ್ಯುತ್ ಕುಮಾರ್ ಅಭಿನಯವಿದೆ. ಯುನಿಫಾರ್ಮ್ ಇಲ್ಲದೆ ಪೊಲೀಸ್ ಅಧಿಕಾರಿಯಾಗಿ ಶೋಭರಾಜ್ ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ.
ಸಿನಿಮಾದೊಳಗಿನ ಸಿನಿಮಾಕ್ಕಾಗಿ ನಿರ್ದೇಶಕರು ಕಾಣುವ ನಟಿ ಪದ್ಮಾವತಿಯಾಗಿ ಭಾವನಾ ಮನಸೆಳೆಯುತ್ತಾರೆ. ಮೂವರು ಅಪಹರಣಕಾರರಲ್ಲಿ ಕಡ್ಡಿಪುಡಿ ಚಂದ್ರು ಪಾತ್ರದ ಮೂಲಕ ಕತೆ ಇನ್ನೊಂದು ಹಂತಕ್ಕೆ ಹೋಗುತ್ತದೆ. ಲವಲವಿಕೆಯಿಂದ ಸಾಗುವ ಪಾತ್ರಗಳು, ಆಕರ್ಷಕ ಸಂಭಾಷಣೆ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಹಿತನ್ ಸಂಗೀತದಲ್ಲಿ ಹಾಡುಗಳು ಆಲಿಸುವಂತಿವೆ. ಪ್ರದೀಪ್ ವರ್ಮ ಹಿನ್ನೆಲೆ ಸಂಗೀತದಲ್ಲಿ ಪರದೆಯ ಮೇಲಿನ ದೃಶ್ಯಗಳು ಆಸ್ವಾದಿಸುವಂತಿವೆ. ತೆಲುಗು ಸಿನಿಮಾ ‘ಬ್ರೊಚೆವರೇವರುರಾ’ದ ರಿಮೇಕ್ ಆದರೂ ಇದರ ಸಂಭಾಷಣೆ ಗಮನಿಸಿದರೆ ಕನ್ನಡದ್ದೇ ಸಿನಿಮಾ ಎನ್ನುವಂತೆ ಗೋಚರಿಸುತ್ತದೆ. ತೆಲುಗಿನಲ್ಲಿ ಯಶಸ್ವಿಯಾದರೂ ಕನ್ನಡಿಗರನ್ನು ತಲುಪಿರದ ಈ ಸಿನಿಮಾ ಇದೀಗ ಹಾಸ್ಯದಿಂದ ಪುಳಕಿತಗೊಳಿಸಿದೆ. ಒಟ್ಟಿನಲ್ಲಿ ಮನರಂಜನೆಗಾಗಿ ಚಿತ್ರಮಂದಿರಕ್ಕೆ ಬರುವವರಿಗೆ ಹಾಸ್ಯದ ಜೊತೆಗೆ ಒಂದು ಕ್ರೈಂ ಥ್ರಿಲ್ಲರ್ ಚಿತ್ರ ತೃಪ್ತಿ ನೀಡುತ್ತದೆ.